ನೋಡೋಕೆ ಸಣ್ಣ ಇದ್ದರೂ ದೇಹಕ್ಕೆ ಅಪಾಯ ಗ್ಯಾರಂಟಿನಾ? ಯುವಕರ ಜೀವ ಹಿಂಡುತ್ತಿದೆ ಈ 'ಸದ್ದಿಲ್ಲದ' ಕಾಯಿಲೆ!!

ಇತ್ತೀಚಿನ ದಿನಗಳಲ್ಲಿ ನಾವು ಒಂದು ವಿಚಿತ್ರ ಪರಿಸ್ಥಿತಿ ನೋಡುತ್ತಿದ್ದೇವೆ. ಜಿಮ್‌ಗೆ ಹೋಗುವವರು, ನೋಡಲು ಫಿಟ್ ಆಗಿ ಕಾಣುವವರು, ಇಪ್ಪತ್ತರ ಹರೆಯದ ಹುಡುಗರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. "ಅಯ್ಯೋ, ಅವನಿಗೆ ಯಾವ ಕೆಟ್ಟ ಅಭ್ಯಾಸವೂ ಇರಲಿಲ್ಲವಲ್ಲ, ದಪ್ಪನೂ ಇರಲಿಲ್ಲ, ಯಾಕೀಗಾಯ್ತು.?" ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರ ನಮ್ಮ ಬದಲಾದ ಜೀವನಶೈಲಿ ಮತ್ತು ನಾವು ನಿರ್ಲಕ್ಷಿಸುತ್ತಿರುವ ಚಯಾಪಚಯ ಅಸ್ವಸ್ಥತೆ;

ಇಪ್ಪತ್ತರ ಹರೆಯದಲ್ಲೇ ಹೃದಯಾಘಾತ – ಕಾರಣವೇನು? | Photo Credit: AI
ಇಪ್ಪತ್ತರ ಹರೆಯದಲ್ಲೇ ಹೃದಯಾಘಾತ – ಕಾರಣವೇನು? | Photo Credit: AI

ಸಾಮಾನ್ಯವಾಗಿ ನಮಗೆ ದಪ್ಪಗಿರುವವರನ್ನು ಕಂಡರೆ ಮಾತ್ರ ಬಿಪಿ, ಶುಗರ್ ಬರಬಹುದು ಎಂಬ ನಂಬಿಕೆಯಿದೆ. ಆದರೆ ಭಾರತೀಯರಲ್ಲಿ ಈಗ 'ಸ್ಕಿನ್ನಿ ಫ್ಯಾಟ್' (Skinny Fat) ಎನ್ನುವ ಸಮಸ್ಯೆ ಹೆಚ್ಚಾಗುತ್ತಿದೆ. ಅಂದರೆ, ವ್ಯಕ್ತಿ ಹೊರನೋಟಕ್ಕೆ ಸ್ಲಿಮ್ ಆಗಿ ಕಂಡರೂ, ಅವರ ದೇಹದ ಒಳಗಿನ ಅಂಗಗಳ ಸುತ್ತ (ಲಿವರ್, ಪ್ಯಾಂಕ್ರಿಯಾಸ್ ಸುತ್ತ) ಅಪಾಯಕಾರಿ ಕೊಬ್ಬು ಶೇಖರಣೆಯಾಗಿರುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ವಿಸರಲ್ ಫ್ಯಾಟ್' ಎನ್ನುತ್ತಾರೆ. ಇದು ಯಾವುದೇ ಲಕ್ಷಣ ತೋರದೆ ಸದ್ದಿಲ್ಲದೆ ಹೃದಯಾಘಾತ ಮತ್ತು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತಿದೆ.

ನಮಗೆ ಗೊತ್ತಿಲ್ಲದೆ ನಾವು ಮಾಡುತ್ತಿರುವ ತಪ್ಪುಗಳೇನು?

ಒಂದು ಕಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಹೆದರುತ್ತಿದ್ದ ಭಾರತ, ಈಗ ಜೀವನಶೈಲಿ ರೋಗಗಳ ಕೂಪವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:

ಆಹಾರದ ಬದಲಾವಣೆ - ಮನೆಯಲ್ಲಿ ತಯಾರಿಸಿದ ತಾಜಾ ಊಟದ ಬದಲು, ಸ್ವಿಗ್ಗಿ-ಜೊಮ್ಯಾಟೋ ಆರ್ಡರ್‌ಗಳು ಹೆಚ್ಚಾಗಿವೆ. ಪ್ಯಾಕ್ ಮಾಡಿದ ತಿಂಡಿಗಳು, ಸಕ್ಕರೆ ಅಂಶವಿರುವ ತಂಪು ಪಾನೀಯಗಳು ನಮ್ಮ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಏರುಪೇರು ಮಾಡುತ್ತಿವೆ.

ಕುಳಿತಲ್ಲೇ ಕೆಲಸ - ಕಚೇರಿಗಳಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ದೈಹಿಕ ಶ್ರಮ ಇಲ್ಲದಿರುವುದು ನಮ್ಮ ದೇಹವನ್ನ ತುಕ್ಕು ಹಿಡಿಸುತ್ತಿದೆ.

ನಿದ್ದೆಯಿಲ್ಲದ ರಾತ್ರಿಗಳು - ಅತಿಯಾದ ಮೊಬೈಲ್ ಬಳಕೆ ಮತ್ತು ಕೆಲಸದ ಒತ್ತಡದಿಂದಾಗಿ ನಿದ್ರೆ ಕಡಿಮೆಯಾಗಿದೆ. ಸರಿಯಾದ ನಿದ್ರೆ ಇಲ್ಲದಿದ್ದರೆ ದೇಹದ ಮೆಟಬಾಲಿಸಂ ಹದಗೆಡುತ್ತದೆ.

ಒತ್ತಡ - ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನತೆ ಅನುಭವಿಸುತ್ತಿರುವ ಮಾನಸಿಕ ಒತ್ತಡವು ಹಾರ್ಮೋನ್‌ಗಳ ಏರುಪೇರಿಗೆ ಕಾರಣವಾಗಿ, ಸಣ್ಣ ವಯಸ್ಸಿನಲ್ಲೇ ಬಿಪಿ ಹೆಚ್ಚಾಗುವಂತೆ ಮಾಡುತ್ತಿದೆ.

ಅಂಕಿ ಅಂಶಗಳು ಏನು ಹೇಳುತ್ತವೆ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನೀಡಿರುವ ವರದಿ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಭಾರತದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನ ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 13 ಕೋಟಿ ಜನರು ಮಧುಮೇಹದ ಹೊಸ್ತಿಲಲ್ಲಿದ್ದಾರೆ (Pre-diabetic). ಒಂದು ಕಾಲದಲ್ಲಿ 50 ದಾಟಿದವರಿಗೆ ಬರುತ್ತಿದ್ದ ಶುಗರ್, ಬಿಪಿ ಈಗ 20-25 ವರ್ಷದ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಕೇವಲ ಕಾಯಿಲೆಯಲ್ಲ, ಇದು ಮುಂದಿನ ದಿನಗಳಲ್ಲಿ ಕಿಡ್ನಿ ಫೇಲ್ಯೂರ್, ಪಾರ್ಶ್ವವಾಯು ಅಥವಾ ಕುರುಡುತನಕ್ಕೂ ಕಾರಣವಾಗಬಹುದು.

ಮಕ್ಕಳ ಮೇಲೂ ಕಣ್ಣಿರಲಿ!

ಬರಿ ಯುವಕರಷ್ಟೇ ಅಲ್ಲ, ಮಕ್ಕಳು ಕೂಡ ಇಂದು ಸ್ಕ್ರೀನ್ ಅಡಿಕ್ಟ್ ಆಗಿದ್ದಾರೆ. ಹೊರಗಡೆ ಓಡಿ ಆಡುವ ಬದಲು ಮೊಬೈಲ್ ಗೇಮ್‌ಗಳಲ್ಲಿ ಮುಳುಗಿದ್ದಾರೆ. ಇದರಿಂದ ಬಾಲ್ಯದಲ್ಲೇ ಬೊಜ್ಜು ಆವರಿಸುತ್ತಿದೆ. ಇದು ಅವರ ಭವಿಷ್ಯದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ನಾವು ಮಾಡಬೇಕಿರುವುದೇನು?

ಹೆದರುವ ಅವಶ್ಯಕತೆ ಇಲ್ಲ, ಆದರೆ ಎಚ್ಚರಿಕೆ ಅಗತ್ಯ. ಈ ಅಪಾಯದಿಂದ ಪಾರಾಗಲು ಸರಳ ಸೂತ್ರಗಳು ಇಲ್ಲಿವೆ..

ನಡಿಗೆ ಇರಲಿ - ದಿನಕ್ಕೆ ಕನಿಷ್ಠ 30 ನಿಮಿಷ ವೇಗವಾಗಿ ನಡೆಯುವುದನ್ನು ರೂಢಿಸಿಕೊಳ್ಳಿ;

ಆಹಾರ ನಿಯಂತ್ರಣ - ಹೊರಗಿನ ಜಂಕ್ ಫುಡ್ ಕಡಿಮೆ ಮಾಡಿ. ನಾರಿನಂಶವಿರುವ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

ತಪಾಸಣೆ - ನೀವು ತೆಳ್ಳಗಿದ್ದರೂ ಸಹ, ವರ್ಷಕ್ಕೊಮ್ಮೆ ಲಿಪಿಡ್ ಪ್ರೊಫೈಲ್ ಮತ್ತು ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ.

ಮಾನಸಿಕ ಶಾಂತಿ - ಯೋಗ ಅಥವಾ ಧ್ಯಾನದ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಿ!

ಕೊನೆಯ ಮಾತು - ಆರೋಗ್ಯವೇ ಭಾಗ್ಯ ಎಂಬುದು ಹಳೆಯ ಮಾತಾದರೂ ಇಂದಿನ ಕಾಲಕ್ಕೆ ಇದು ಹೆಚ್ಚು ಪ್ರಸ್ತುತ. ನಮ್ಮ ಸಣ್ಣ ನಿರ್ಲಕ್ಷ್ಯ ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಇಂದೇ ಎಚ್ಚೆತ್ತುಕೊಳ್ಳೋಣ, ಆರೋಗ್ಯಕರ ಜೀವನ ಶೈಲಿಯನ್ನ ಅಳವಡಿಸಿಕೊಳ್ಳೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ!

ಹಕ್ಕುತ್ಯಾಗ: ಈ ಲೇಖನವು ಇಂಟರ್ನೆಟ್‌ನಲ್ಲಿ ಸಿಗುವ ಮಾಹಿತಿ ಮತ್ತು ವರದಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಇದಕ್ಕೂ SAPTASHWA TV ಗೂ ಯಾವುದೇ ಸಂಬಂಧವಿರುವುದಿಲ್ಲ ಹಾಗೂ ಈ ಮಾಹಿತಿಗೆ ಜವಾಬ್ದಾರರಾಗಿರುವುದಿಲ್ಲ!    

Latest News