ಧಿಡೀರ್ ಅಂತ ತೂಕ ಹೆಚ್ಚಿ, ಕೂದಲು ಉದುರುತ್ತಿದೆಯೇ? ಹಾಗಾದ್ರೆ ಥೈರಾಯ್ಡ್ ಇರಬಹುದು, ಕಂಟ್ರೋಲ್ ಮಾಡಲು ಇಲ್ಲಿದೆ 5 ನ್ಯಾಚುರಲ್ ಟಿಪ್ಸ್!!

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅತಿ ಹೆಚ್ಚು ಜನರನ್ನು ಕಾಡುತ್ತಿರುವ ಒಂದು ಕಾಮನ್ ಆರೋಗ್ಯ ಸಮಸ್ಯೆ ಅಂದರೆ ಅದು 'ಥೈರಾಯ್ಡ್' (Thyroid). ಮುಂಚೆಲ್ಲಾ ಬರೀ ಮಹಿಳೆಯರಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ, ಇತ್ತೀಚಿನ ದಿನಗಳಲ್ಲಿ ಪುರುಷರಲ್ಲೂ ಸಾಮಾನ್ಯವಾಗುತ್ತಿದೆ. ದಿನಪೂರ್ತಿ ಎಷ್ಟೇ ರೆಸ್ಟ್ ತಗೊಂಡ್ರು ಸುಸ್ತು, ದಿಢೀರ್ ಅಂತ ತೂಕ ಹೆಚ್ಚಾಗುವುದು, ಸಿಕ್ಕಾಪಟ್ಟೆ ಕೂದಲು ಉದುರುವುದು, ಹೆಚ್ಚು ಚಳಿ ಅನಿಸುವುದು ಹಾಗೂ ಮೂಡ್ ಸ್ವಿಂಗ್ಸ್ (ಮನಸ್ಸಿನ ಅಸ್ಥಿರತೆ) ಇವೆಲ್ಲವೂ ಥೈರಾಯ್ಡ್ ಹಾರ್ಮೋನ್ ಅಸಮತೋಲನದ ಪ್ರಮುಖ ಲಕ್ಷಣಗಳಾಗಿವೆ.

ಥೈರಾಯ್ಡ್ ನಿಯಂತ್ರಿಸಲು ಇಂದೇ ಈ 5 ಸೂತ್ರ ಪಾಲಿಸಿ!! | Photo Credit: CANVA
ಥೈರಾಯ್ಡ್ ನಿಯಂತ್ರಿಸಲು ಇಂದೇ ಈ 5 ಸೂತ್ರ ಪಾಲಿಸಿ!! | Photo Credit: CANVA

ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಈ ಸಣ್ಣ ಗ್ರಂಥಿ, ದೇಹದ ಮೆಟಾಬಾಲಿಸಂ, ಹಾರ್ಮೋನ್ ಬ್ಯಾಲೆನ್ಸ್ ಹಾಗೂ ನಿದ್ರೆಯನ್ನು ಕಂಟ್ರೋಲ್ ಮಾಡುವ ಪವರ್ ಹೌಸ್. ನಮ್ಮ ಇಂದಿನ ಬಿಡುವಿಲ್ಲದ ಲೈಫ್‌ಸ್ಟೈಲ್, ಜಂಕ್ ಫುಡ್, ನಿದ್ರಾಹೀನತೆ ಮತ್ತು ವಿಪರೀತ ಒತ್ತಡ ಈ ಗ್ರಂಥಿಯ ಆರೋಗ್ಯವನ್ನು ಕೆಡಿಸುತ್ತಿವೆ.

ಅಸಲಿಗೆ ಥೈರಾಯ್ಡ್ ಅಂದ್ರೆ ಏನು? ಅದು ಏನು ಕೆಲಸ ಮಾಡುತ್ತೆ?

ಥೈರಾಯ್ಡ್ ಗ್ರಂಥಿಯು ನಮ್ಮ ದೇಹಕ್ಕೆ ಬೇಕಾದ T3 (ಟ್ರೈಐಯೋಡೋಥೈರೋನಿನ್) ಮತ್ತು T4 (ಥೈರಾಕ್ಸಿನ್) ಎಂಬ ಎರಡು ಮುಖ್ಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್‌ಗಳು ನಮ್ಮ ಜೀರ್ಣಕ್ರಿಯೆ, ಹೃದಯದ ಬಡಿತ, ದೇಹದ ಉಷ್ಣತೆ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ನಿಯಂತ್ರಿಸುತ್ತವೆ. ಇದು ಹದಗೆಟ್ಟರೆ ದೇಹದ ಇಡೀ ಸಿಸ್ಟಮ್ ನಿಧಾನವಾಗುತ್ತದೆ. ಕರುಳಿನ ಆರೋಗ್ಯ ಕೆಟ್ಟಾಗ ರೋಗನಿರೋಧಕ ಶಕ್ತಿ ಕುಗ್ಗಿ, ಹಶಿಮೊಟೊ ಹಾಗೂ ಗ್ರೇವ್ಸ್‌ನಂತಹ ಆಟೋಇಮ್ಯೂನ್ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಥೈರಾಯ್ಡ್ ನಿಯಂತ್ರಿಸಲು ಈ 5 ಸೂತ್ರಗಳನ್ನು ಇಂದೇ ರೂಢಿಸಿಕೊಳ್ಳಿ:

1. ಟಿವಿ, ಮೊಬೈಲ್ ನೋಡ್ತಾ ಊಟ ಮಾಡ್ಬೇಡಿ, ನಿಧಾನವಾಗಿ ಜಗಿದು ತಿನ್ನಿ

ಇತ್ತೀಚೆಗೆ ಎಲ್ಲರಿಗೂ ಮೊಬೈಲ್ ಸ್ಕ್ರಾಲ್ ಮಾಡ್ತಾ ಅಥವಾ ಟಿವಿ ನೋಡ್ತಾ ಗಬಗಬನೆ ಊಟ ಮುಗಿಸುವ ಬ್ಯಾಡ್ ಹ್ಯಾಬಿಟ್ ಇರುತ್ತದೆ. ಇದರಿಂದ ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ನಾವು ತಿಂದ ಆಹಾರ ಹೊಟ್ಟೆ ತುಂಬಿದೆ ಎಂಬ ಮೆಸೇಜ್ ಮೆದುಳಿಗೆ ತಲುಪಲು ಕನಿಷ್ಠ 20 ನಿಮಿಷ ಬೇಕು. ಹೀಗಾಗಿ ಆಹಾರವನ್ನು ನಿಧಾನವಾಗಿ, ಚೆನ್ನಾಗಿ ಜಗಿದು ತಿನ್ನಿ. ಮೆಟಾಬಾಲಿಸಂ ಸ್ಲೋ ಇರುವ ಥೈರಾಯ್ಡ್ ರೋಗಿಗಳಿಗೆ ಇದು ತೂಕ ನಿಯಂತ್ರಿಸಲು ತುಂಬಾ ಹೆಲ್ಪ್ ಮಾಡುತ್ತದೆ.

2. ಡಯಟ್‌ನಲ್ಲಿ ಇರಲಿ ಈ ಬದಲಾವಣೆ

ಥೈರಾಯ್ಡ್ ಇದ್ದವರು ಹಸಿರು ತರಕಾರಿಗಳು, ಮೊಳಕೆ ಕಾಳುಗಳು, ಬೇಳೆಕಾಳುಗಳು ಹಾಗೂ ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಬೇಕು. ನೆನಪಿರಲಿ, ಎಲೆಕೋಸು, ಬ್ರೋಕೋಲಿ ಹಾಗೂ ಹೂಕೋಸು (ಕಾಲಿಫ್ಲವರ್) ನಂತಹ ತರಕಾರಿಗಳನ್ನು ಹಸಿಯಾಗಿ ತಿನ್ನಲೇಬಾರದು, ಇವುಗಳನ್ನು ಚೆನ್ನಾಗಿ ಬೇಯಿಸಿಯೇ ತಿನ್ನಬೇಕು. ಆಟೋಇಮ್ಯೂನ್ ಥೈರಾಯ್ಡ್ ಸಮಸ್ಯೆ ಇರೋರು ಗ್ಲೂಟನ್ (ಗೋದಿಯ ಉತ್ಪನ್ನಗಳು) ಮತ್ತು ಡೈರಿ ಪ್ರಾಡಕ್ಟ್‌ಗಳನ್ನು ಕಡಿಮೆ ಮಾಡಿದರೆ ದೇಹದಲ್ಲಿನ ಉರಿಯೂತ ತಗ್ಗುತ್ತದೆ.

3. ಪೋಷಕಾಂಶಗಳ ಕಡೆ ಗಮನವಿರಲಿ

ಥೈರಾಯ್ಡ್ ಸರಿಯಾಗಿ ಕೆಲಸ ಮಾಡಲು ವಿಟಮಿನ್ ಡಿ, ಸೆಲೆನಿಯಂ, ಜಿಂಕ್ ಮತ್ತು ಅಯೋಡಿನ್ ಅಗತ್ಯವಾಗಿ ಬೇಕು. ದಿನಕ್ಕೆ ಎರಡೇ ಎರಡು ನೆನೆಸಿದ 'ಬ್ರೆಜಿಲ್ ನಟ್ಸ್' (Brazil Nuts) ತಿಂದರೆ ದೇಹಕ್ಕೆ ಬೇಕಾದ ಸೆಲೆನಿಯಂ ಸಿಗುತ್ತದೆ. ಹಾಗೆಯೇ ಅಯೋಡಿನ್ ಬ್ಯಾಲೆನ್ಸ್ ಮಾಡಲು ಮಿತ ಪ್ರಮಾಣದಲ್ಲಿ ಅಯೋಡೈಸ್ಡ್ ಉಪ್ಪನ್ನು ಬಳಸಿ.

4. ಟೈಮ್‌ಗೆ ಸರಿಯಾಗಿ ನಿದ್ದೆ ಮಾಡಿ

ರಾತ್ರಿ 10 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗಿನ ಸಮಯ ತುಂಬಾ ಇಂಪಾರ್ಟೆಂಟ್. ಈ ಟೈಮ್‌ನಲ್ಲಿ ನಮ್ಮ ದೇಹ ಹಾರ್ಮೋನ್‌ಗಳನ್ನು ರಿಪೇರಿ ಮಾಡುವ ಕೆಲಸದಲ್ಲಿ ನಿರತವಾಗಿರುತ್ತದೆ. ಹಾಗಾಗಿ ರಾತ್ರಿ ಬೇಗ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಮೊಬೈಲ್, ಲ್ಯಾಪ್‌ಟಾಪ್ ಪಕ್ಕಕ್ಕಿಟ್ಟು, ಕತ್ತಲೆಯ ರೂಮಿನಲ್ಲಿ ಪ್ರಶಾಂತವಾಗಿ ನಿದ್ದೆ ಮಾಡಿ.

5. ಲಘು ವ್ಯಾಯಾಮ ಮತ್ತು ಒತ್ತಡ ಮುಕ್ತಿ

ಥೈರಾಯ್ಡ್ ಇದೆ ಅಂದ ತಕ್ಷಣ ಜಿಮ್‌ಗೆ ಹೋಗಿ ಹೆವಿ ವರ್ಕೌಟ್ ಮಾಡಬೇಕಾಗಿಲ್ಲ. ದಿನಕ್ಕೆ 30 ರಿಂದ 45 ನಿಮಿಷ ನಡಿಗೆ (Walking), ಯೋಗ ಅಥವಾ ಲಘು ವ್ಯಾಯಾಮ ಮಾಡಿದರೆ ಸಾಕು. ಇದು ಥೈರಾಯ್ಡ್ ಗ್ರಂಥಿಗೆ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಇದರ ಜೊತೆಗೆ ದಿನಕ್ಕೆ 10 ನಿಮಿಷ ಧ್ಯಾನ ಅಥವಾ ಪ್ರಾಣಾಯಾಮ ಮಾಡಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಯಾಕಂದ್ರೆ ಹೆಚ್ಚು ಸ್ಟ್ರೆಸ್ ತಗೊಂಡ್ರೆ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುತ್ತದೆ.

ಥೈರಾಯ್ಡ್ ಸಮಸ್ಯೆಯನ್ನು ಕೇವಲ ಲೈಫ್‌ಸ್ಟೈಲ್‌ನಿಂದಲೇ 100% ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ಉತ್ತಮ ಜೀವನಶೈಲಿ, ವೈದ್ಯರ ಸಲಹೆಯಂತೆ ಕರೆಕ್ಟ್ ಆಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮತ್ತು ರೆಗ್ಯುಲರ್ ಆಗಿ ಬ್ಲಡ್ ಟೆಸ್ಟ್ ಮಾಡಿಸುವುದರಿಂದ ಇದನ್ನು ಸಂಪೂರ್ಣವಾಗಿ ಕಂಟ್ರೋಲ್‌ನಲ್ಲಿ ಇಡಬಹುದು. ಒಂದೇ ದಿನದಲ್ಲಿ ಎಲ್ಲವನ್ನೂ ಬದಲಾಯಿಸಲು ಹೋಗಬೇಡಿ.

Latest News