ಮುಖದ ಅಂದ ಕೆಡಿಸುವ ಬ್ಲ್ಯಾಕ್‌ಹೆಡ್ಸ್-ವೈಟ್‌ಹೆಡ್ಸ್ ಕಾಟಕ್ಕೆ ಸಿಕ್ತು ಪರ್ಮನೆಂಟ್ ಪರಿಹಾರ ; ಈ ಸಿಂಪಲ್ ರೂಟೀನ್ ಫಾಲೋ ಮಾಡಿ!!

ಬೆಳಿಗ್ಗೆ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೂಗು, ಗಲ್ಲ ಅಥವಾ ಹಣೆಯ ಮೇಲೆ ಸಣ್ಣ ಸಣ್ಣ ಕಪ್ಪು ಅಥವಾ ಬಿಳಿ ಚುಕ್ಕೆಗಳು ಕಾಣಿಸಿಕೊಂಡು ಮೂಡ್ ಆಫ್ ಮಾಡುತ್ತವೆಯೇ? ಮುಖ ದಿನದಿಂದ ದಿನಕ್ಕೆ ಗ್ಲೋ ಕಳೆದುಕೊಂಡು ಕಪ್ಪಗಾಗುತ್ತಿರುವಂತೆ ಅನಿಸುತ್ತಿದೆಯೇ? ಹಾಗಿದ್ದರೆ ಇದಕ್ಕೆ ಮುಖ್ಯ ಕಾರಣವೇ 'ಬ್ಲ್ಯಾಕ್‌ಹೆಡ್ಸ್' (Blackheads) ಮತ್ತು 'ವೈಟ್‌ಹೆಡ್ಸ್' (Whiteheads).

Blackheads/Whiteheads | Photo Credit: AI
Blackheads/Whiteheads | Photo Credit: AI

ಇದು ಇಂದಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಕಾಡುವ ಸಾಮಾನ್ಯ ಚರ್ಮದ ಸಮಸ್ಯೆ. ಸರಳವಾಗಿ ಹೇಳಬೇಕೆಂದರೆ, ಇವು ಸಣ್ಣ - ಸಣ್ಣ ಮೊಡವೆಗಳ (Mild Acne) ಇನ್ನೊಂದು ರೂಪ. ಈ ಸಮಸ್ಯೆ ತೀವ್ರವಾದರೆ ಮುಖದ ನ್ಯಾಚುರಲ್ ಹೊಳಪು ಮಾಯವಾಗಿ, ಚರ್ಮ ನಿರ್ಜೀವವಾಗಿ ಕಾಣಲು ಆರಂಭವಾಗುತ್ತದೆ. ಆದರೆ ತಲೆಕೆಡಿಸಿಕೊಳ್ಳಬೇಡಿ, ನಿರಂತರವಾದ ಮತ್ತು ಸರಿಯಾದ ಸ್ಕಿನ್‌ಕೇರ್ ರೂಟೀನ್ ಮೂಲಕ ಈ ಸಮಸ್ಯೆಯನ್ನು ಬುಡಸಮೇತ ಕಿತ್ತೊಗೆಯಬಹುದು.
ಅಸಲು ಯಾಕೆ ಬರುತ್ತೆ ಈ ಬ್ಲ್ಯಾಕ್‌ಹೆಡ್ಸ್?

ನಮ್ಮ ಚರ್ಮದಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ (Skin Pores). ಚರ್ಮದಲ್ಲಿ ಅತಿಯಾದ ಎಣ್ಣೆ (Sebum) ಉತ್ಪತ್ತಿಯಾದಾಗ, ಅದರ ಜೊತೆಗೆ ಹೊರಗಿನ ಧೂಳು, ಮಾಲಿನ್ಯ ಮತ್ತು ಸತ್ತ ಚರ್ಮದ ಕಣಗಳು (Dead Skin Cells) ಸೇರಿಕೊಂಡು ಆ ರಂಧ್ರಗಳನ್ನು ಬ್ಲಾಕ್ ಮಾಡಿಬಿಡುತ್ತವೆ. ಈ ಗಲೀಜು ಗಾಳಿಯ ಸಂಪರ್ಕಕ್ಕೆ ಬಂದು ಆಕ್ಸಿಡೀಕರಣಗೊಂಡಾಗ ಕಪ್ಪಾಗಿ ಬದಲಾಗುತ್ತದೆ. ಇದನ್ನೇ ಬ್ಲ್ಯಾಕ್‌ಹೆಡ್ಸ್ ಎನ್ನುತ್ತಾರೆ. ಅದೇ ರಂಧ್ರಗಳು ಸಂಪೂರ್ಣ ಮುಚ್ಚಿಹೋಗಿ ಬಿಳಿಯಾಗಿಯೇ ಉಳಿದರೆ ಅದನ್ನು ವೈಟ್‌ಹೆಡ್ಸ್ ಎನ್ನಲಾಗುತ್ತದೆ. ನಮ್ಮ ದಿನನಿತ್ಯದ ಕೆಟ್ಟ ಅಭ್ಯಾಸಗಳಾದ - ಫೋನ್ ಅನ್ನು ಮುಖಕ್ಕೆ ಒತ್ತಿ ಹಿಡಿಯುವುದು, ಗಲೀಜು ಕೈಗಳಿಂದ ಆಗಾಗ ಮುಖ ಮುಟ್ಟಿಕೊಳ್ಳುವುದು ಮತ್ತು ಜಿಡ್ಡು ಪದಾರ್ಥಗಳ ಅತಿಯಾದ ಸೇವನೆಯಿಂದ ಈ ಸಮಸ್ಯೆ ಇನ್ನು ಹೆಚ್ಚಾಗುತ್ತದೆ.

ಬೆಳಗಿನ ಜಾವದ ಮ್ಯಾಜಿಕಲ್ ರೂಟೀನ್ (Morning Skincare)

ನಾವು ಮಲಗಿರುವಾಗ ರಾತ್ರಿ ಇಡೀ ಮುಖದಲ್ಲಿ ಎಣ್ಣೆ ಮತ್ತು ಸತ್ತ ಚರ್ಮಕಣಗಳು ಜಮೆಯಾಗುತ್ತವೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ಮುಖದ ಸ್ವಚ್ಛತೆ ಬಹಳ ಮುಖ್ಯ.

ಕ್ಲೆನ್ಸಿಂಗ್ - ಬೆಳಿಗ್ಗೆ ಎದ್ದ ತಕ್ಷಣ ಸ್ಯಾಲಿಸಿಲಿಕ್ ಆ್ಯಸಿಡ್ (Salicylic Acid) ಇರುವ ಮೃದುವಾದ ಫೇಸ್‌ವಾಶ್ ಅಥವಾ ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ. ಇದು ರಂಧ್ರಗಳ ಆಳಕ್ಕೆ ಇಳಿದು ಕೊಳೆಯನ್ನು ಕ್ಲೀನ್ ಮಾಡುತ್ತದೆ.

ಮಾಯಿಸ್ಚರೈಸರ್ - ಮುಖ ತೊಳೆದ ಮೇಲೆ ಚರ್ಮ ಡ್ರೈ ಆಗಬಾರದು. ಅದಕ್ಕಾಗಿ ಆಯಿಲ್-ಫ್ರೀ (Oil-free) ಅಥವಾ ಜೆಲ್ ಆಧಾರಿತ ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮಕ್ಕೆ ತೇವಾಂಶ ನೀಡಿ, ಅತಿಯಾದ ಎಣ್ಣೆ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

ಸನ್‌ಸ್ಕ್ರೀನ್ ಮರೆಯಬೇಡಿ - ಹೊರಗಡೆ ಹೋಗುವ ಮುನ್ನ ಸನ್‌ಸ್ಕ್ರೀನ್ ಹಚ್ಚುವುದು ಕಡ್ಡಾಯ. ಸೂರ್ಯನ ಯುವಿ (UV) ಕಿರಣಗಳು ಬ್ಲ್ಯಾಕ್‌ಹೆಡ್ಸ್ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ.

ರಾತ್ರಿಯ ಹೊತ್ತಿನ ಕೇರ್ ಅತ್ಯಗತ್ಯ (Night Skincare)

ಹಗಲಿಡೀ ಮುಖದ ಮೇಲೆ ಕುಳಿತ ಧೂಳನ್ನು ರಾತ್ರಿ ಮಲಗುವ ಮುನ್ನ ಸ್ವಚ್ಛಗೊಳಿಸಲೇಬೇಕು. ರಾತ್ರಿ ವೇಳೆ ಚರ್ಮದಲ್ಲಿ ಎಣ್ಣೆ ಉತ್ಪತ್ತಿ ಜಾಸ್ತಿ ಇರುತ್ತದೆ.

ಫೇಸ್‌ವಾಶ್‌ನಿಂದ ಮುಖ ತೊಳೆದ ನಂತರ ಸ್ಯಾಲಿಸಿಲಿಕ್ ಆ್ಯಸಿಡ್ ಅಥವಾ ರೆಟಿನಾಯ್ಡ್ (Retinoid) ಇರುವ ಸೀರಮ್ ಬಳಸಿ. ಇದು ಚರ್ಮದ ರಂಧ್ರಗಳು ದೊಡ್ಡದಾಗದಂತೆ ಒಳಗಿನಿಂದಲೇ ಸರಿಪಡಿಸುತ್ತದೆ ಮತ್ತು ಹೊಸದಾಗಿ ಬ್ಲ್ಯಾಕ್‌ಹೆಡ್ಸ್ ಬರದಂತೆ ತಡೆಯುತ್ತದೆ. ಕೊನೆಯಲ್ಲಿ ಲೈಟಾಗಿ ಮಾಯಿಶ್ಚರೈಸರ್ ಹಚ್ಚಿ ಮಲಗಿ.

ವಾರಕ್ಕೊಮ್ಮೆ ಮಾಡಬೇಕಾದ ಅತಿ ಮುಖ್ಯ ಕೆಲಸಗಳು!

ಕೈಯಿಂದ ಒತ್ತಿ ತೆಗೆಯಬೇಡಿ: ದಯವಿಟ್ಟು ಬ್ಲ್ಯಾಕ್‌ಹೆಡ್ಸ್ ಕಂಡ ತಕ್ಷಣ ಉಗುರಿನಿಂದ ಅಥವಾ ಕೈಯಿಂದ ಒತ್ತಿ ಕಿಳ್ಳಲು ಹೋಗಬೇಡಿ. ಇದರಿಂದ ಚರ್ಮಕ್ಕೆ ಗಾಯವಾಗಿ ಇನ್ಫೆಕ್ಷನ್ ಆಗಬಹುದು ಮತ್ತು ಮುಖದ ಮೇಲೆ ಶಾಶ್ವತ ಕಲೆಗಳು ಉಳಿದುಬಿಡಬಹುದು.

ಎಕ್ಸ್‌ಫೋಲಿಯೇಶನ್ (Exfoliation): ವಾರದಲ್ಲಿ ಕೇವಲ ಒಂದು ಅಥವಾ ಎರಡು ಬಾರಿ ಮೃದುವಾದ ಸ್ಕ್ರಬ್ ಬಳಸಿ ಮುಖವನ್ನು ಲೈಟಾಗಿ ಮಸಾಜ್ ಮಾಡಿ ತೊಳೆಯಿರಿ. ಇದು ಸತ್ತ ಚರ್ಮಕಣಗಳನ್ನು ಈಜಿಯಾಗಿ ಹೊರಹಾಕುತ್ತದೆ.

ಕ್ಲೇ ಮಾಸ್ಕ್ (Clay Mask): ವಾರಕ್ಕೊಮ್ಮೆ ಮುಖಕ್ಕೆ ಕ್ಲೇ ಮಾಸ್ಕ್ (ಮಣ್ಣಿನ ಫೇಸ್ ಪ್ಯಾಕ್) ಹಾಕಿಕೊಳ್ಳುವುದರಿಂದ ಚರ್ಮದ ಒಳಗಿರುವ ಅತಿಯಾದ ಜಿಡ್ಡು ಮತ್ತು ಮಲಿನತೆ ಕಂಪ್ಲೀಟ್ ಆಗಿ ಹೊರಬರುತ್ತದೆ.

ಮಾರ್ಕೆಟ್‌ನಲ್ಲಿ ಸಿಗುವ ಕೆಮಿಕಲ್ ಪ್ರಾಡಕ್ಟ್‌ಗಳನ್ನು ಮನಬಂದಂತೆ ಬಳಸುವ ಬದಲು, ನಿಮ್ಮ ಚರ್ಮಕ್ಕೆ ಒಪ್ಪುವ ಸಾಫ್ಟ್ ಉತ್ಪನ್ನಗಳನ್ನು ಆಯ್ದುಕೊಳ್ಳಿ. ಈ ಸಿಂಪಲ್ ಲೈಫ್‌ಸ್ಟೈಲ್ ಮತ್ತು ಸ್ವಚ್ಛತೆಯ ಅಭ್ಯಾಸಗಳನ್ನು ನಿಯಮಿತವಾಗಿ ಫಾಲೋ ಮಾಡಿದರೆ, ಬ್ಲ್ಯಾಕ್‌ಹೆಡ್ಸ್ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರವಾಗುತ್ತದೆ. ಮುಖದ ನೈಸರ್ಗಿಕ ಹೊಳಪು ಮರಳಿ ಬಂದು ಮುಖ ಸದಾ ಫ್ರೆಶ್ ಆಗಿ ಕಂಗೊಳಿಸುತ್ತದೆ.

Latest News