ಈ ರೈಲಿನ ಒಂದು ಟಿಕೆಟ್ ಬೆಲೆಗೆ ಕಾರು ಬರುತ್ತೆ - ಹಂಪಿ ರಥದ ಪ್ರೇರಣೆಯ ಈ ಲಕ್ಸುರಿ ಟ್ರೈನ್ ಒಳಗಡೆ ಏನೇನಿದೆ ಗೊತ್ತಾ?

ದಕ್ಷಿಣ ಭಾರತದ ಸುಂದರ ತಾಣಗಳು ಮತ್ತು ಕರಾವಳಿ ಕರ್ನಾಟಕವನ್ನು ಒಮ್ಮೆ ಐಷಾರಾಮಿಯಾಗಿ ಸುತ್ತಿ ಬರಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಅದ್ಭುತ ರೈಲಿದೆ. ಆದರೆ ನೆನಪಿರಲಿ, ಕೈಯಲ್ಲಿ ಭಾರಿ ದುಡ್ಡಿದ್ದರೆ ಮಾತ್ರ ಇಲ್ಲಿ ಸೀಟು ಸಿಗುತ್ತದೆ! ಹೌದು, ಈ ರೈಲಿನ ಒಂದು ಟಿಕೆಟ್ ದರದಲ್ಲಿ ನೀವು ಶೋರೂಮ್‌ಗೆ ಹೋಗಿ ಬ್ರ್ಯಾಂಡ್ ನ್ಯೂ ಕಾರ್ ಅನ್ನೇ ಖರೀದಿ ಮಾಡಬಹುದು. ಆ ಮಟ್ಟಿಗೆ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಐಷಾರಾಮಿ ಟ್ರೈನ್ ಬೇರೆ ಯಾವುದೂ ಅಲ್ಲ, ಅದೇ ನಮ್ಮ ಹೆಮ್ಮೆಯ ‘ಗೋಲ್ಡನ್ ಚಾರಿಯಟ್’ (Golden Chariot).

ಗೋಲ್ಡನ್ ಚಾರಿಯಟ್: ಕಾರಿನ ಬೆಲೆಗೆ ಸಿಗುವ ರೈಲು ಪ್ರಯಾಣ! | Photo Credit: https://www.firstpost.com
ಗೋಲ್ಡನ್ ಚಾರಿಯಟ್: ಕಾರಿನ ಬೆಲೆಗೆ ಸಿಗುವ ರೈಲು ಪ್ರಯಾಣ! | Photo Credit: https://www.firstpost.com

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಒಡೆತನದ ಮತ್ತು ಐಆರ್‌ಸಿಟಿಸಿ (IRCTC) ನಿರ್ವಹಿಸುವ ಈ ರಾಯಲ್ ಟ್ರೈನ್, ಇದೀಗ 2026-27ರ ಪ್ರವಾಸದ ಸೀಸನ್‌ಗಾಗಿ ಹೊಸ ಮಾರ್ಗಗಳೊಂದಿಗೆ ಸಜ್ಜಾಗಿ ನಿಂತಿದೆ. ನೀವೂ ರಾಜರಂತೆ ಪ್ರಯಾಣ ಮಾಡಬೇಕಾ? ಹಾಗಿದ್ದರೆ ಈ ಚಲಿಸುವ ಅರಮನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಹಂಪಿಯ ಕಲ್ಲಿನ ರಥವೇ ಇದರ ಪ್ರೇರಣೆ!

ಕರ್ನಾಟಕದ ರೈಲ್ವೇ ಇತಿಹಾಸದಲ್ಲೇ ಗೋಲ್ಡನ್ ಚಾರಿಯಟ್‌ಗೆ ಒಂದು ಖದರ್ ಇದೆ. ಈ ಸೂಪರ್ ಲಕ್ಸುರಿ ರೈಲನ್ನು ಮೊದಲು 2008ರ ಜನವರಿ 23ರಂದು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಉದ್ಘಾಟಿಸಿದ್ದರು. ಹಂಪಿಯ ವಿಜಯ ವಿಠಲ ದೇವಸ್ಥಾನದ ಪ್ರಖ್ಯಾತ ಕಲ್ಲಿನ ರಥದ ನೆನಪಿಗಾಗಿ ಇದಕ್ಕೆ ‘ಗೋಲ್ಡನ್ ಚಾರಿಯಟ್’ ಅಂದರೆ ಬಂಗಾರದ ರಥ ಎಂದು ಹೆಸರಿಡಲಾಗಿದೆ. ಇನ್ನು ಇತ್ತೀಚೆಗೆ ಅಂದರೆ 2024ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೈಲಿಗೆ ಮರುಚಾಲನೆ ನೀಡಿದ್ದರು. ಈಗ 2026-27ರ ಸಾಲಿನಲ್ಲಿ ಇದು ಮತ್ತಷ್ಟು ಕಳೆಗಟ್ಟಿದೆ.

ಯಾವ್ಯಾವ ಪ್ರವಾಸದ ಪ್ಯಾಕೇಜ್‌ಗಳಿವೆ?

ಈ ಚಿನ್ನದ ರಥದಲ್ಲಿ ಪ್ರವಾಸಿಗರಿಗಾಗಿ ಮೂರು ತರಹದ ಅದ್ಭುತ ಟೂರ್ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ:

ಪ್ರೈಡ್ ಆಫ್ ಕರ್ನಾಟಕ (5 ರಾತ್ರಿ/6 ಹಗಲು): ಇದು ಬೆಂಗಳೂರಿನಿಂದ ಹೊರಟು ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ, ಪಟ್ಟದಕಲ್ಲು, ಐಹೊಳೆ ಮತ್ತು ಗೋವಾ ಮಾರ್ಗವಾಗಿ ಮತ್ತೆ ಬೆಂಗಳೂರಿಗೆ ಮರಳುತ್ತದೆ. ಒಂದೇ ಟ್ರಿಪ್‌ನಲ್ಲಿ ಕಾಡು, ಅರಮನೆ, ಗುಹೆ ಮತ್ತು ಕರಾವಳಿಯ ಬೀಚ್‌ಗಳನ್ನು ನೋಡಬಹುದು!

ಜ್ಯುವೆಲ್ಸ್ ಆಫ್ ಸೌತ್ (5 ರಾತ್ರಿ/6 ಹಗಲು): ಬೆಂಗಳೂರು, ಮೈಸೂರು, ತಮಿಳುನಾಡಿನ ಕಾಂಚಿಪುರಂ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡ್ ಹಾಗೂ ಕೇರಳದ ಕೊಚ್ಚಿ, ಕುಮರಕೋಮ್‌ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರುತ್ತದೆ.

ಗ್ಲಿಂಪ್ಸಸ್ ಆಫ್ ಕರ್ನಾಟಕ (3 ರಾತ್ರಿ/4 ಹಗಲು): ಕಮ್ಮಿ ದಿನದಲ್ಲಿ ಟೂರ್ ಮುಗಿಸಬೇಕು ಅನ್ನೋರಿಗೆ ಇದು ಬೆಸ್ಟ್. ಬೆಂಗಳೂರು-ಬಂಡೀಪುರ-ಮೈಸೂರು-ಹಂಪಿ-ಬೆಂಗಳೂರು ಮಾರ್ಗದಲ್ಲಿ ಇದು ಸಾಗಲಿದೆ.

ಪ್ರತಿ ವರ್ಷ ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗಿನ ಸೀಸನ್‌ನಲ್ಲಿ ಮಾತ್ರ ಈ ಟ್ರೈನ್ ಓಡಾಡುತ್ತದೆ. ಪ್ರತಿ ಭಾನುವಾರ ಬೆಂಗಳೂರಿನಿಂದ ಇದರ ಜರ್ನಿ ಶುರುವಾಗುತ್ತದೆ. ಸದ್ಯದಲ್ಲೇ ಮುಂಬೈ ಮತ್ತು ಔರಂಗಾಬಾದ್ ಮಾರ್ಗಗಳನ್ನೂ ಇದಕ್ಕೆ ಲಿಂಕ್ ಮಾಡುವ ಪ್ಲಾನ್ ಇದೆ.

ಒಳಗಡೆ ಹೋದ್ರೆ ಸಾಕು.. ನೀವೇ ರಾಜರು!

ಈ ಟ್ರೈನ್‌ ಒಳಗೆ ಕಾಲಿಟ್ಟರೆ ಸಾಕು, ನೀವು ಯಾವುದೋ ಪಂಚತಾರಾ ಹೋಟೆಲ್ ಅಥವಾ ರಾಜನ ಅರಮನೆಗೆ ಬಂದಂತೆ ಭಾಸವಾಗುತ್ತದೆ. ಒಟ್ಟು 18 ರಿಂದ 19 ಕೋಚ್‌ಗಳಿರುವ ಈ ಟ್ರೈನ್‌ನಲ್ಲಿ ಕೇವಲ 80 ಪ್ರವಾಸಿಗರಿಗೆ ಮಾತ್ರ ಅವಕಾಶ ಇರುತ್ತದೆ.

ಇಲ್ಲಿನ ಪ್ರತಿಯೊಂದು ಕ್ಯಾಬಿನ್ ಅರಮನೆಯ ರೂಮ್ ತರಹ ಇರಲಿದ್ದು, ಡಬಲ್ ಬೆಡ್, ಸೆಂಟ್ರಲೈಸ್ಡ್ ಏಸಿ, ಎಲ್‌ಸಿಡಿ ಟಿವಿ, ಹೈ-ಸ್ಪೀಡ್ ವೈ-ಫೈ ಮತ್ತು ಪ್ರೈವೇಟ್ ಬಾತ್‌ರೂಮ್ ಇರುತ್ತದೆ. ಇದಿಷ್ಟೇ ಅಲ್ಲದೆ, ಟ್ರೈನ್ ಒಳಗಡೆಯೇ ಎರಡು ಫೈನ್ ಡೈನಿಂಗ್ ರೆಸ್ಟೋರೆಂಟ್‌ಗಳು, ಒಂದು ಹೈ-ಕ್ಲಾಸ್ ಬಾರ್, ಆರಾಮಾಗಿ ರಿಲ್ಯಾಕ್ಸ್ ಆಗಲು ಸ್ಪಾ ಮತ್ತು ಜಿಮ್ ಸೆಂಟರ್ ಕೂಡ ಇವೆ! ನಿಮಗಾಗಿ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಮತ್ತು ಕಾಂಟಿನೆಂಟಲ್ ಶೈಲಿಯ ಸೂಪರ್ ಫುಡ್ ಇಲ್ಲೇ ರೆಡಿಯಾಗಿ ಸಿಗುತ್ತದೆ.

ಟಿಕೆಟ್ ರೇಟ್ ಎಷ್ಟು ಗೊತ್ತಾ?

ಇಷ್ಟೆಲ್ಲಾ ರಾಜಾತಿಥ್ಯ ಸಿಗಬೇಕಾದರೆ ದುಡ್ಡು ಕೂಡ ಅದೇ ರೇಂಜ್‌ನಲ್ಲಿ ಇರಬೇಕಲ್ವಾ? ಹೌದು:

5 ರಾತ್ರಿ/6 ಹಗಲಿನ ಡೀಲಕ್ಸ್ ಕ್ಯಾಬಿನ್ ಪ್ರವಾಸಕ್ಕೆ: ಒಬ್ಬ ವ್ಯಕ್ತಿಗೆ ಸುಮಾರು 4 ಲಕ್ಷ ರೂಪಾಯಿಗೂ ಹೆಚ್ಚು ದರ ಇದೆ.

ಗ್ಲಿಂಪ್ಸಸ್ ಆಫ್ ಕರ್ನಾಟಕ ಪ್ಯಾಕೇಜ್‌ಗೆ: ಬರೋಬ್ಬರಿ 3,31,500 ರೂಪಾಯಿ ನಿಗದಿ ಮಾಡಲಾಗಿದೆ.

ಕೆಲವೊಮ್ಮೆ ಹಬ್ಬ ಹರಿದಿನಗಳ ಟೈಮ್‌ನಲ್ಲಿ ಭಾರತೀಯ ಪ್ರವಾಸಿಗರಿಗೆ ವಿಶೇಷ ರಿಯಾಯಿತಿ ಮತ್ತು ಆಫರ್‌ಗಳೂ ಸಿಗುತ್ತವೆ.

ಪ್ರವಾಸ ಮಾಡುವುದು ಎಂದರೆ ಬರೀ ಜಾಗ ಸುತ್ತುವುದಷ್ಟೇ ಅಲ್ಲ, ಲೈಫ್‌ನಲ್ಲಿ ಒಂದು ರಾಯಲ್ ಎಕ್ಸ್‌ಪೀರಿಯನ್ಸ್ ಪಡೆಯುವುದು ಕೂಡ ಹೌದು. ಒಂದು ಐಷಾರಾಮಿ ಕಾರಿನ ಬೆಲೆಗೆ ಸಿಗುವ ಈ ಗೋಲ್ಡನ್ ಚಾರಿಯಟ್ ಟ್ರೈನ್ ಜರ್ನಿ ನಿಜಕ್ಕೂ ಅದ್ಭುತ. ಇಂಟರೆಸ್ಟಿಂಗ್ ಅನಿಸುವ ಈ ಐಷಾರಾಮಿ ಮಾಹಿತಿಯನ್ನು ನಿಮ್ಮ ಪ್ರವಾಸ ಪ್ರಿಯ ಸ್ನೇಹಿತರು ಹಾಗೂ ವಾಟ್ಸಾಪ್ ಗ್ರೂಪ್‌ಗಳಿಗೆ ಈಗಲೇ ಶೇರ್ ಮಾಡಿ ಜಾಗೃತಿ ಮೂಡಿಸಿ. 

Latest News