Friday, Nov 6, 2026
|

ಗೋವಾ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ - ಬಾಗಾ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ಮಾಡುವಾಗ ನಡೆದ ಈ ಘಟನೆ ಎದೆ ನಡುಗಿಸುತ್ತೆ!!

ಗೋವಾದ ಬಾಗಾ ಬೀಚ್ ಎಂದರೆ ಪ್ರವಾಸಿಗರ ಸ್ವರ್ಗ. ಆದರೆ, ಅದೇ ಬೀಚ್‌ನಲ್ಲಿ ನಿನ್ನೆ (ಮಾರ್ಚ್ 29) ನಡೆದ ಒಂದು ಘಟನೆ ಪ್ರವಾಸಿಗರ ಎದೆ ನಡುಗಿಸುವಂತಿದೆ. ಪ್ಯಾರಾಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗನೊಬ್ಬ ಆಕಾಶದಲ್ಲಿದ್ದಾಗಲೇ ಪ್ಯಾರಾಚೂಟ್‌ನ ಕೇಬಲ್ ಕಟ್ ಆಗಿ ಸಮುದ್ರಕ್ಕೆ ಬಿದ್ದ ಭೀಕರ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೋವಾ ಬಾಗಾ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ಅಪಘಾತ ; | Photo Credit: https://x.com/Deadlykalesh
ಗೋವಾ ಬಾಗಾ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ಅಪಘಾತ ; | Photo Credit: https://x.com/Deadlykalesh

ಸಾಮಾನ್ಯವಾಗಿ ಗೋವಾಕ್ಕೆ ಹೋದವರು ವಾಟರ್ ಸ್ಪೋರ್ಟ್ಸ್ ಮಿಸ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಪ್ಯಾರಾಸೈಲಿಂಗ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಿನ್ನೆ ಕೂಡ ಒಬ್ಬ ಪ್ರವಾಸಿಗ ಬೋಟ್ ಮೂಲಕ ಗಾಳಿಯಲ್ಲಿ ಹಾರುತ್ತಾ ಸಾಗುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಆಕಾಶದ ಎತ್ತರದಲ್ಲಿದ್ದಾಗಲೇ ಪ್ಯಾರಾಚೂಟ್ ಅನ್ನು ಬೋಟ್‌ಗೆ ಜೋಡಿಸಿದ್ದ ಕೇಬಲ್ ಏಕಾಏಕಿ ತುಂಡಾಗಿದೆ. ಕೇಬಲ್ ಕಟ್ ಆಗುತ್ತಿದ್ದಂತೆಯೇ ಪ್ರವಾಸಿಗ ನೇರವಾಗಿ ಸಮುದ್ರದ ಅಲೆಗಳ ಮಧ್ಯೆ ಬಿದ್ದಿದ್ದಾರೆ.

ಪ್ಯಾರಾಸೈಲಿಂಗ್ ಕೇಬಲ್ ಕಟ್ ಆಗಿದ್ದನ್ನು ನೋಡಿದ ತಕ್ಷಣ ಬೋಟ್‌ನಲ್ಲಿದ್ದ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದಾರೆ. ಪ್ರವಾಸಿಗ ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ಹಗ್ಗಗಳನ್ನು ಎಸೆದು, ಕೈಗಳ ಸಹಾಯದಿಂದ ಅವರನ್ನು ತಕ್ಷಣವೇ ಬೋಟ್ ಮೇಲೆ ಎಳೆದುಕೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರವಾಸಿಗನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಹಲವು ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗಿದ್ದು, ಇದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅಡ್ವೆಂಚರ್ ಸ್ಪೋರ್ಟ್ಸ್ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. "ಇಂಡಿಯಾದಲ್ಲಿ ಇಂತಹ ವಾಟರ್ ಸ್ಪೋರ್ಟ್ಸ್ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಬೇಕು, ಇಲ್ಲಿ ಸರಿಯಾದ ಸೇಫ್ಟಿ ಮೆಜರ್ಸ್ ಇರುವುದಿಲ್ಲ" ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು "ಅಡ್ವೆಂಚರ್ ಅಂದ ಮೇಲೆ ರಿಸ್ಕ್ ಇದ್ದೇ ಇರುತ್ತದೆ, ಇದು ಕೇವಲ ಆಕಸ್ಮಿಕ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋವಾದ ಬೀಚ್‌ಗಳಿಗೆ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಅಲ್ಲಿನ ವಾಟರ್ ಸ್ಪೋರ್ಟ್ಸ್‌ನಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯವೂ ಬರುತ್ತದೆ. ಆದರೆ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಹಳೆಯ ಕೇಬಲ್‌ಗಳ ಬಳಕೆ ಅಥವಾ ಸರಿಯಾದ ನಿರ್ವಹಣೆ ಇಲ್ಲದಿರುವುದು ಇಂತಹ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ನೀವು ಕೂಡ ಗೋವಾ ಅಥವಾ ಬೇರೆ ಯಾವುದೇ ಬೀಚ್‌ಗಳಲ್ಲಿ ಇಂತಹ ಆಟಗಳನ್ನು ಆಡುವ ಮುನ್ನ, ಅಲ್ಲಿನ ಸಿಬ್ಬಂದಿ ಎಷ್ಟು ಅನುಭವಿಗಳು ಮತ್ತು ಅವರು ಬಳಸುವ ಉಪಕರಣಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಒಮ್ಮೆ ಗಮನಿಸಿ. ಅಲ್ಪ ಉಳಿತಾಯಕ್ಕಾಗಿ ಕಡಿಮೆ ದರದ ಮತ್ತು ಸುರಕ್ಷತೆ ಇಲ್ಲದ ರೈಡ್‌ಗಳನ್ನು ಆರಿಸಿಕೊಳ್ಳಬೇಡಿ. ಜೀವಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ.

Comments