ತಂತ್ರಜ್ಞಾನ ಲೋಕದ ದೈತ್ಯ ಕಂಪನಿಯಾದ ಅಡೋಬ್ (Adobe), ಭಾರತದ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಗುರುವಾರ ಒಂದು ಅದ್ಭುತವಾದ ಸುದ್ದಿಯನ್ನು ನೀಡಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ (AI) ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ತನ್ನ ಅತ್ಯಂತ ಜನಪ್ರಿಯ ಮತ್ತು ದುಬಾರಿ ಸಾಫ್ಟ್‌ವೇರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಈ ನಿರ್ಧಾರವು ಭಾರತದ ಡಿಜಿಟಲ್ ಕೌಶಲ್ಯ ಅಭಿವೃದ್ಧಿಗೆ ದೊಡ್ಡ ಬಲ ತುಂಬಲಿದೆ.
ಯಾವೆಲ್ಲಾ ಸೌಲಭ್ಯಗಳು ಸಿಗಲಿವೆ?
ಸಾಮಾನ್ಯವಾಗಿ ಅಡೋಬ್ ಸಾಫ್ಟ್‌ವೇರ್‌ಗಳನ್ನು ಬಳಸಲು ಸಾವಿರಾರು ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಈಗ ಕೇಂದ್ರ ಸರ್ಕಾರದ 'ಡಿಜಿಟಲ್ ಇಂಡಿಯಾ' ಕನಸಿಗೆ ಸಾಥ್ ನೀಡಲು ಮುಂದಾಗಿರುವ ಅಡೋಬ್, ಈ ಕೆಳಗಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ:
- ಫೋಟೋಶಾಪ್ (Photoshop): ಫೋಟೋ ಎಡಿಟಿಂಗ್ ಮತ್ತು ಡಿಸೈನಿಂಗ್‌ಗಾಗಿ ವಿಶ್ವದ ನಂಬರ್ 1 ಸಾಫ್ಟ್‌ವೇರ್.
- ಅಕ್ರೋಬ್ಯಾಟ್ (Acrobat): ಪಿಡಿಎಫ್ ದಾಖಲೆಗಳ ನಿರ್ವಹಣೆಗೆ ಸಹಕಾರಿ.
- ಅಡೋಬ್ ಫೈರ್‌ಫ್ಲೈ (Adobe Firefly): ಇದು ಅತ್ಯಾಧುನಿಕ ಎಐ ಪರಿಕರವಾಗಿದ್ದು, ಕೇವಲ ಪಠ್ಯದ ಮೂಲಕ ಚಿತ್ರಗಳನ್ನು ಸೃಷ್ಟಿಸಲು ನೆರವಾಗುತ್ತದೆ.
ಕೇವಲ ಸಾಫ್ಟ್‌ವೇರ್ ಮಾತ್ರವಲ್ಲದೆ, ಎಐ ಆಧಾರಿತ ಕಲಿಕಾ ಮಾಡ್ಯೂಲ್‌ಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಜಾಗತಿಕವಾಗಿ ಮಾನ್ಯತೆ ಇರುವ ಪ್ರಮಾಣಪತ್ರಗಳನ್ನೂ (Certifications) ವಿದ್ಯಾರ್ಥಿಗಳು ಪಡೆಯಲಿದ್ದಾರೆ.
ಈ ಬೃಹತ್ ಉಪಕ್ರಮವನ್ನು ಯಶಸ್ವಿಗೊಳಿಸಲು ಅಡೋಬ್ ಸಂಸ್ಥೆಯು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಬೆಂಬಲಿತ ನಾಸ್ಕಾಮ್ (NASSCOM) ಫ್ಯೂಚರ್‌ಸ್ಕಿಲ್ಸ್ ಪ್ರೈಮ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಸರ್ಕಾರಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಈ ಸೌಲಭ್ಯಗಳು ತಲುಪಲಿವೆ.
ಕೇಂದ್ರ ಬಜೆಟ್ 2026ರಲ್ಲಿ ಘೋಷಿಸಿದಂತೆ, ಅನಿಮೇಷನ್, ಗೇಮಿಂಗ್ ಮತ್ತು ವಿಷುಯಲ್ ಎಫೆಕ್ಟ್ಸ್ (AVGC) ವಲಯದಲ್ಲಿ 2030ರ ವೇಳೆಗೆ ಸುಮಾರು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಅಡೋಬ್‌ನ ಈ ಉಚಿತ ಕೊಡುಗೆಯು ವಿದ್ಯಾರ್ಥಿಗಳನ್ನು ಈ ಉದ್ಯೋಗಗಳಿಗೆ ಸಜ್ಜುಗೊಳಿಸಲು ಸಹಾಯ ಮಾಡುತ್ತದೆ. ಅಡೋಬ್ ಸಿಇಒ ಶಾಂತನು ನಾರಾಯಣ್ ಅವರ ಪ್ರಕಾರ, "ಈ ಕ್ರಮವು ಲಕ್ಷಾಂತರ ವಿದ್ಯಾರ್ಥಿಗಳನ್ನು ಎಐ ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುತ್ತದೆ ಮತ್ತು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ವೇಗ ನೀಡುತ್ತದೆ."
ಅಡೋಬ್ ಸಂಸ್ಥೆಯು ಈ ಯೋಜನೆಯನ್ನು ದೇಶಾದ್ಯಂತ ಇರುವ 15,000 ಶಾಲೆಗಳು ಮತ್ತು 500 ಕಾಲೇಜುಗಳಿಗೆ ವಿಸ್ತರಿಸಲಿದೆ. ಸರ್ಕಾರದ ಸಹಯೋಗದೊಂದಿಗೆ ಈ ಸಂಸ್ಥೆಗಳಲ್ಲಿ 'ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು' ಸ್ಥಾಪಿಸಲಾಗುತ್ತದೆ. ಮಾನ್ಯತೆ ಪಡೆದ ಶಾಲೆ ಅಥವಾ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳು ಈ ಹೊಸ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಐ ಕೌಶಲ್ಯ ಕಲಿಯುವುದು ಅನಿವಾರ್ಯವಾಗಿದೆ. ಅಡೋಬ್‌ನ ಈ ಉದಾರ ಮನಸ್ಸಿನ ನಿರ್ಧಾರವು ಭಾರತದ ಸಣ್ಣ ನಗರಗಳ ವಿದ್ಯಾರ್ಥಿಗಳೂ ಕೂಡ ವಿಶ್ವಮಟ್ಟದ ತಂತ್ರಜ್ಞಾನವನ್ನು ಕಲಿಯಲು ದಾರಿಯಾಗಲಿದೆ. ಇದು ಭಾರತವನ್ನು ಜಾಗತಿಕ 'ಕ್ರಿಯೇಟರ್ ಹಬ್' ಆಗಿ ರೂಪಿಸಲು ಸಹಕಾರಿಯಾಗಿದೆ.