ಚಿಕನ್ ಬಹುತೇಕರಿಗೆ ಇಷ್ಟವಾಗುವ ಮಾಂಸಾಹಾರಿ ಆಹಾರ. ವಾರಕ್ಕೊಮ್ಮೆ ಚಿಕನ್ ಖರೀದಿಸಿ ಅಡುಗೆ ಮಾಡುವುದು ಹಲವರ ಮನೆಯಲ್ಲಿ ಸಾಮಾನ್ಯ. ಚಿಕನ್ ಬಿರಿಯಾನಿ, ಕಬಾಬ್, ಗ್ರೇವಿ, ಫ್ರೈ ಹೀಗೆ ಹಲವು ರೀತಿಯಲ್ಲಿ ಇದನ್ನು ತಯಾರಿಸಲಾಗುತ್ತದೆ. ಆದರೆ ಚಿಕನ್ ಖರೀದಿಸುವಾಗ ಮಾಂಸ ತಾಜಾವಾಗಿದೆಯೇ ಎನ್ನುವುದನ್ನು ಮಾತ್ರ ನೋಡಿದರೆ ಸಾಲದು.
ಚಿಕನ್ ಮಾರಾಟ ಮಾಡುವ ಅಂಗಡಿಯ ಸ್ವಚ್ಛತೆ, ಮಾಂಸವನ್ನು ಹೇಗೆ ಇಡಲಾಗಿದೆ, ಕತ್ತರಿಸುವ ಜಾಗ ಹೇಗಿದೆ ಮತ್ತು ಸಿಬ್ಬಂದಿ ಸ್ವಚ್ಛತೆ ಕಾಪಾಡುತ್ತಿದ್ದಾರೆಯೇ ಎಂಬುದನ್ನೂ ಗಮನಿಸಬೇಕು. ವಿಶೇಷವಾಗಿ ವೆಟ್ ಮಾರ್ಕೆಟ್‌ಗಳಲ್ಲಿ ಚಿಕನ್ ಖರೀದಿಸುವಾಗ ಕೆಲವು ಸರಳ ವಿಷಯಗಳನ್ನು ಪರಿಶೀಲಿಸುವುದು ಒಳ್ಳೆಯದು.
ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಇದೆಯೇ ನೋಡಿ
ಚಿಕನ್ ಖರೀದಿಸಲು ಅಂಗಡಿಗೆ ಹೋದಾಗ ಮೊದಲು ಅಲ್ಲಿರುವ ಎಫ್‌ಎಸ್‌ಎಸ್‌ಐ (FSSAI) ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ವಿವರ ಕಾಣಿಸುತ್ತಿದೆಯೇ ಎಂದು ಗಮನಿಸಿ. ಆಹಾರ ಮಾರಾಟ ಮಾಡುವ ಸ್ಥಳದಲ್ಲಿ ಈ ವಿವರ ಇರುವುದು ಮುಖ್ಯ.
ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ನಂಬರ್ ಕಾಣಿಸದಿದ್ದರೆ ಅಂಗಡಿಯವರ ಬಳಿ ಅದರ ಬಗ್ಗೆ ಕೇಳಬಹುದು. ಆಹಾರವನ್ನು ಸ್ವಚ್ಛವಾಗಿ ನಿರ್ವಹಿಸುವ ಅಂಗಡಿಯನ್ನೇ ಆಯ್ಕೆ ಮಾಡುವುದು ಉತ್ತಮ.
ಚಿಕನ್‌ನಲ್ಲಿ ಹೆಚ್ಚು ನೀರು ಇದೆಯೇ?
ಚಿಕನ್‌ನಲ್ಲಿ ಸ್ವಲ್ಪ ತೇವಾಂಶ ಇರುವುದು ಸಹಜ. ಆದರೆ ಮಾಂಸದಿಂದ ಹೆಚ್ಚು ನೀರು ಹೊರಬರುತ್ತಿದೆಯೇ, ಕೆಳಗೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಸಂಗ್ರಹವಾಗಿದೆಯೇ ಎನ್ನುವುದನ್ನು ಗಮನಿಸಿ.
ಚಿಕನ್ ಅತಿಯಾಗಿ ಒದ್ದೆಯಾಗಿರುವುದು ಅಥವಾ ನೀರು ತೊಟ್ಟಿಕ್ಕುತ್ತಿರುವುದು ಕಂಡುಬಂದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅಡುಗೆ ಮಾಡಿದ ನಂತರ ಮಾಂಸ ಸಾಮಾನ್ಯಕ್ಕಿಂತ ಹೆಚ್ಚು ಕುಗ್ಗಿದರೂ ಗಮನಿಸಬಹುದು.
ಆದರೆ ಚಿಕನ್‌ನಲ್ಲಿ ನೀರು ಕಂಡುಬಂದ ತಕ್ಷಣ ಅದಕ್ಕೆ ನೀರು ಸೇರಿಸಲಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಲಕ್ಷಣಗಳನ್ನು ಮಾತ್ರ ಆಧರಿಸಿ ನಿರ್ಧಾರ ತೆಗೆದುಕೊಳ್ಳುವ ಬದಲು ಅಂಗಡಿಯ ಸ್ವಚ್ಛತೆ ಮತ್ತು ಮಾಂಸದ ನಿರ್ವಹಣೆಯನ್ನೂ ಒಟ್ಟಿಗೆ ನೋಡಬೇಕು.
ಅಂಗಡಿಯ ಸುತ್ತಮುತ್ತ ಸ್ವಚ್ಛವಾಗಿದೆಯೇ?
ಚಿಕನ್ ಖರೀದಿಸುವಾಗ ಅಂಗಡಿಯ ನೆಲ ಮತ್ತು ಕತ್ತರಿಸುವ ಜಾಗವನ್ನು ಒಮ್ಮೆ ಗಮನಿಸಿ. ನೆಲದಲ್ಲಿ ನೀರು ನಿಂತಿದ್ದರೆ, ಕೊಳಚೆ ಅಥವಾ ತ್ಯಾಜ್ಯ ಬಿದ್ದಿದ್ದರೆ ಸ್ವಚ್ಛತೆ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.
ಚಿಕನ್ ಕತ್ತರಿಸುವ ಜಾಗದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದರೆ ಅಥವಾ ಅದೇ ಜಾಗದಲ್ಲಿ ಮಾಂಸವನ್ನು ದೀರ್ಘಕಾಲ ತೆರೆದಿಟ್ಟಿದ್ದರೆ ಬ್ಯಾಕ್ಟೀರಿಯಾ ಹರಡುವ ಅಪಾಯ ಹೆಚ್ಚಬಹುದು.
ಅಂಗಡಿಯಲ್ಲಿ ಕತ್ತರಿಸುವ ಜಾಗ, ಕೆಲಸದ ಮೇಜು ಮತ್ತು ಬಳಸುವ ಉಪಕರಣಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾರೆಯೇ ಎಂಬುದೂ ಮುಖ್ಯ. ಸ್ವಚ್ಛವಾದ ವಾತಾವರಣವಿರುವ ಅಂಗಡಿಯನ್ನು ಆಯ್ಕೆ ಮಾಡುವುದು ಸುರಕ್ಷಿತ ಆಹಾರ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಸಿಬ್ಬಂದಿಯ ಸ್ವಚ್ಛತೆಯನ್ನೂ ಗಮನಿಸಿ
ಚಿಕನ್ ಕತ್ತರಿಸುವ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನೂ ಗಮನಿಸಬೇಕು. ಅವರ ಬಟ್ಟೆ ಸ್ವಚ್ಛವಾಗಿದೆಯೇ, ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆಯೇ ಎಂಬುದನ್ನು ನೋಡಬಹುದು.
ಅದೇ ರೀತಿ ಚಾಕು, ಕಟಿಂಗ್ ಬೋರ್ಡ್, ತೂಕದ ಯಂತ್ರ ಮತ್ತು ಚಿಕನ್ ಇಡುವ ಜಾಗ ಸ್ವಚ್ಛವಾಗಿರಬೇಕು. ಹಸಿ ಮಾಂಸವನ್ನು ನಿರ್ವಹಿಸುವಾಗ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ.
ಒಂದೇ ಉಪಕರಣವನ್ನು ಸ್ವಚ್ಛಗೊಳಿಸದೆ ಪದೇಪದೇ ಬಳಸುವುದು ಅಥವಾ ಮಾಂಸವನ್ನು ಅಸ್ವಚ್ಛವಾದ ಜಾಗದಲ್ಲಿ ಇಡುವುದು ಆಹಾರದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಡಿಸ್‌ಪ್ಲೇ ಕೌಂಟರ್ ಹೇಗಿದೆ?
ಚಿಕನ್ ಅನ್ನು ಅಂಗಡಿಯಲ್ಲಿ ಹೇಗೆ ಇಡಲಾಗಿದೆ ಎಂಬುದನ್ನು ತಪ್ಪದೇ ನೋಡಿ. ಮಾಂಸವನ್ನು ತೆರೆದೆಯೇ ಇಟ್ಟಿದ್ದಾರೆಯೇ, ಅದರ ಮೇಲೆ ನೊಣಗಳು ಕುಳಿತುಕೊಳ್ಳುತ್ತಿವೆಯೇ, ಸುತ್ತಮುತ್ತ ತ್ಯಾಜ್ಯವಿದೆಯೇ ಎಂಬುದನ್ನು ಗಮನಿಸಿ.
ಚಿಕನ್ ಅನ್ನು ಸ್ವಚ್ಛವಾಗಿ ಮತ್ತು ಸಾಧ್ಯವಾದಷ್ಟು ಮುಚ್ಚಿದ ರೀತಿಯಲ್ಲಿ ಇಟ್ಟಿರುವ ಅಂಗಡಿಗೆ ಆದ್ಯತೆ ನೀಡಬಹುದು. ತೆರೆದ ಕೌಂಟರ್‌ನಲ್ಲಿ ಮಾಂಸ ಇಟ್ಟಿದ್ದರೆ ಧೂಳು, ಕೀಟಗಳು ಅಥವಾ ಪದೇಪದೇ ಆಗುವ ಸ್ಪರ್ಶದಿಂದ ಮಾಂಸ ಕಲುಷಿತವಾಗುವ ಸಾಧ್ಯತೆ ಇರುತ್ತದೆ.
ಚಿಕನ್ ಖರೀದಿಸಿದ ನಂತರವೂ ಅದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಹಸಿ ಚಿಕನ್ ಅನ್ನು ಫ್ರಿಡ್ಜ್‌ನಲ್ಲಿ ಹೆಚ್ಚು ದಿನ ಇಡಬಾರದು. ಸಾಮಾನ್ಯವಾಗಿ 4 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಹಸಿ ಚಿಕನ್ ಅನ್ನು 1ರಿಂದ 2 ದಿನಗಳೊಳಗೆ ಬಳಸುವುದು ಉತ್ತಮ. ಹೆಚ್ಚು ದಿನ ಇಡಬೇಕಾದರೆ ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು.
ಅಡುಗೆ ಮಾಡುವ ಮುನ್ನ ಹಸಿ ಚಿಕನ್ ಅನ್ನು ನೀರಿನಲ್ಲಿ ತೊಳೆಯುವುದರಿಂದ ಬ್ಯಾಕ್ಟೀರಿಯಾ ನಾಶವಾಗುವುದಿಲ್ಲ. ಬದಲಾಗಿ ನೀರಿನ ಸಿಂಚನದಿಂದ ಅಡುಗೆಮನೆಯ ಇತರ ಜಾಗಗಳಿಗೂ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇರುವುದರಿಂದ, ಚಿಕನ್ ಅನ್ನು ಸರಿಯಾದ ತಾಪಮಾನದಲ್ಲಿ ಚೆನ್ನಾಗಿ ಬೇಯಿಸುವುದು ಮುಖ್ಯ.
ಹೀಗಾಗಿ ಚಿಕನ್ ಖರೀದಿಸುವಾಗ ತಾಜಾ ಮಾಂಸವಿದೆಯೇ ಎನ್ನುವುದರ ಜೊತೆಗೆ ಅಂಗಡಿಯ ಸ್ವಚ್ಛತೆ, ಸಿಬ್ಬಂದಿಯ ಹೈಜೀನ್, ಕೌಂಟರ್ ಮತ್ತು ಮಾಂಸವನ್ನು ಇಡುವ ವಿಧಾನವನ್ನೂ ಗಮನಿಸಿ. ಈ ಸಣ್ಣ ಮುನ್ನೆಚ್ಚರಿಕೆಗಳು ಆಹಾರವನ್ನು ಸುರಕ್ಷಿತವಾಗಿ ಆಯ್ಕೆ ಮಾಡಲು ಸಹಾಯ ಮಾಡುತ್ತವೆ.