ನಮ್ಮ ದೇಹ ಒಂದು ಅದ್ಭುತವಾದ ಯಂತ್ರವಿದ್ದಂತೆ. ಇದರಲ್ಲಿ ಪ್ರತಿಯೊಂದು ಕಣವೂ ತನ್ನದೇ ಆದ ಕೆಲಸ ಮಾಡುತ್ತದೆ. ಅದರಲ್ಲಿ ಈ 'ಪ್ಲೇಟ್‌ಲೆಟ್‌ಗಳು' (Platelets) ಮಾತ್ರ ಸೈಲೆಂಟ್ ಹೀರೋಗಳು! ನಮಗೆ ಎಲ್ಲಾದರೂ ಪೆಟ್ಟಾಗಿ ರಕ್ತ ಬರಲು ಶುರುವಾದರೆ, ತಕ್ಷಣ ಅಲ್ಲಿಗೆ ಓಡಿ ಹೋಗಿ ರಕ್ತ ಗಡ್ಡೆಕಟ್ಟುವಂತೆ ಮಾಡಿ, ರಕ್ತ ಸೋರಿ ಹೋಗದಂತೆ ಕಾಪಾಡುವುದೇ ಇವುಗಳ ಕೆಲಸ. ಆದರೆ ಇತ್ತೀಚೆಗೆ ಈ ಪ್ಲೇಟ್‌ಲೆಟ್‌ಗಳ ಸಂಖ್ಯೆ ದಿಢೀರನೆ ಕುಸಿಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟಕ್ಕೂ ಇವು ಕಡಿಮೆಯಾಗಲು ಕಾರಣವೇನು?
ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ಮನುಷ್ಯನ ರಕ್ತದಲ್ಲಿ ಪ್ರತಿ ಮೈಕ್ರೋಲೀಟರ್‌ಗೆ 1.5 ಲಕ್ಷದಿಂದ 4.5 ಲಕ್ಷದಷ್ಟು ಪ್ಲೇಟ್‌ಲೆಟ್‌ಗಳು ಇರಬೇಕು. ಒಂದು ವೇಳೆ ಇದು 1.5 ಲಕ್ಷಕ್ಕಿಂತ ಕೆಳಗೆ ಹೋದರೆ ಅದನ್ನು ಪ್ಲೇಟ್‌ಲೆಟ್ ಕೊರತೆ ಎನ್ನಲಾಗುತ್ತದೆ. 50 ಸಾವಿರಕ್ಕಿಂತ ಕಡಿಮೆಯಾದರೆ ತುರ್ತು ಗಮನ ಬೇಕು, ಇನ್ನು 20 ಸಾವಿರಕ್ಕಿಂತ ಕೆಳಗೆ ಹೋದರೆ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆ ಇರುತ್ತದೆ.
ಪ್ಲೇಟ್‌ಲೆಟ್‌ಗಳು ಕಡಿಮೆಯಾಗಲು ಕಾರಣಗಳೇನು?
ಪ್ಲೇಟ್‌ಲೆಟ್ ಕಡಿಮೆಯಾಗೋದು ಅಂದ್ರೆ ಬರೀ ಡೆಂಗ್ಯೂ ಅಂತ ಅಂದುಕೊಳ್ತೀವಿ, ಆದ್ರೆ ಅದಕ್ಕೆ ಇನ್ನೂ ಕೆಲವು ಕಾರಣಗಳಿವೆ:
-
ವೈರಲ್ ಜ್ವರಗಳು: ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾದಂತಹ ಕಾಯಿಲೆಗಳು ಪ್ಲೇಟ್‌ಲೆಟ್‌ಗಳ ಮೇಲೆ ನೇರ ದಾಳಿ ಮಾಡುತ್ತವೆ.
-
ಲಿವರ್ ಸಮಸ್ಯೆ: ಸಿರೋಸಿಸ್ ನಂತಹ ಲಿವರ್ ಖಾಯಿಲೆಗಳಿದ್ದಾಗಲೂ ಈ ಸಂಖ್ಯೆ ಕುಸಿಯಬಹುದು.
-
ಬೋನ್ ಮ್ಯಾರೋ ತೊಂದರೆ: ನಮ್ಮ ರಕ್ತದ ಕಣಗಳು ಉತ್ಪತ್ತಿಯಾಗುವ ಬೋನ್ ಮ್ಯಾರೋನಲ್ಲಿ ಏನಾದರೂ ಸಮಸ್ಯೆಯಾದರೆ ಪ್ಲೇಟ್‌ಲೆಟ್ ಉತ್ಪಾದನೆ ನಿಂತುಹೋಗುತ್ತದೆ.
-
ಕ್ಯಾನ್ಸರ್ ಮತ್ತು ಕೀಮೋಥೆರಪಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೀಮೋಥೆರಪಿ ವೇಳೆ ಪ್ಲೇಟ್‌ಲೆಟ್‌ಗಳು ಗಣನೀಯವಾಗಿ ಕಡಿಮೆಯಾಗುತ್ತವೆ.
-
ಆಟೋಇಮ್ಯೂನ್ ರೋಗಗಳು: ನಮ್ಮ ದೇಹದ ರೋಗನಿರೋಧಕ ಶಕ್ತಿಯೇ ನಮ್ಮ ಪ್ಲೇಟ್‌ಲೆಟ್‌ಗಳನ್ನು ಶತ್ರು ಅಂದುಕೊಂಡು ಸಾಯಿಸಲು ಶುರು ಮಾಡುವುದು.
ಅಪಾಯದ ಮುನ್ಸೂಚನೆಗಳು ಯಾವುವು?
ನಿಮ್ಮ ದೇಹದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕುಸಿಯುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು:
-
ಬಹಳ ಬೇಗ ಗಾಯವಾಗುವುದು ಅಥವಾ ಸಣ್ಣ ಗಾಯವಾದರೂ ರಕ್ತಸ್ರಾವ ನಿಲ್ಲದೇ ಇರುವುದು.
-
ಚರ್ಮದ ಮೇಲೆ ಅಲ್ಲಲ್ಲಿ ಕೆಂಪು ಅಥವಾ ನೇರಳೆ ಬಣ್ಣದ ಚಿಕ್ಕ ಚುಕ್ಕೆಗಳು ಕಾಣಿಸಿಕೊಳ್ಳುವುದು.
-
ಹಲ್ಲುಜ್ಜುವಾಗ ಅಥವಾ ಮೂಗಿನಿಂದ ಸುಮ್ಮ ಸುಮ್ಮನೆ ರಕ್ತ ಬರುವುದು.
-
ಅತೀವ ಸುಸ್ತು, ತಲೆಸುತ್ತು ಮತ್ತು ಸುಸ್ತು ಕಾಣಿಸಿಕೊಳ್ಳುವುದು.
-
ಮಹಿಳೆಯರಲ್ಲಿ ಪೀರಿಯಡ್ಸ್ ಸಮಯದಲ್ಲಿ ವಿಪರೀತ ರಕ್ತಸ್ರಾವವಾಗುವುದು.
ಪ್ಲೇಟ್‌ಲೆಟ್ ಹೆಚ್ಚಿಸಿಕೊಳ್ಳುವುದು ಹೇಗೆ?
ಹೆದರುವ ಅಗತ್ಯವಿಲ್ಲ, ಕೆಲವು ಮುಂಜಾಗ್ರತಾ ಕ್ರಮಗಳಿಂದ ಇದನ್ನು ಸುಧಾರಿಸಬಹುದು:
-
ಪೌಷ್ಟಿಕ ಆಹಾರ: ಹಸಿರು ತರಕಾರಿಗಳು, ಪಪ್ಪಾಯಿ ಹಣ್ಣು, ದಾಳಿಂಬೆ ಮತ್ತು ಪ್ರೊಟೀನ್ ಇರುವ ಆಹಾರ ಸೇವಿಸಿ.
-
ನೀರು: ದೇಹ ಯಾವತ್ತೂ ಹೈಡ್ರೇಟ್ ಆಗಿರಲಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
-
ಶುಚಿತ್ವ: ಸೊಳ್ಳೆಗಳಿಂದ ಹರಡುವ ರೋಗಗಳೇ ಇದಕ್ಕೆ ಪ್ರಮುಖ ಕಾರಣ, ಹಾಗಾಗಿ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ.
-
ವೈದ್ಯರ ಸಲಹೆ: ಜ್ವರ ಬಂದಾಗ ನಾವೇ ಮೆಡಿಕಲ್ ಶಾಪ್‌ನಿಂದ ಮಾತ್ರೆ ತಂದು ನುಂಗಬಾರದು, ಅದು ಪ್ಲೇಟ್‌ಲೆಟ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.