ಒಣ ಚರ್ಮಕ್ಕೆ ಆವಕಾಡೊ (ಬೆಣ್ಣೆಹಣ್ಣು) ಫೇಸ್ ಮಾಸ್ಕ್ - ನಯವಾದ ಮತ್ತು ಆರ್ದ್ರತೆಯಿಂದ ಕೂಡಿದ ಚರ್ಮಕ್ಕಾಗಿ ನೈಸರ್ಗಿಕ ಪರಿಹಾರ!!

ಚರ್ಮವು ಒಣಗಿದಾಗ ಅದು ಬಿಗಿಯಾದ ಅನುಭವವನ್ನು ನೀಡುವುದಲ್ಲದೆ, ಒರಟಾಗಿ, ಪದರು ಪದರುಗಳಾಗಿ ಕಿರಿಕಿರಿ ಉಂಟುಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಅಥವಾ ಒಣ ಹವೆ ಇರುವ ಸಂದರ್ಭದಲ್ಲಿ ಈ ಸಮಸ್ಯೆ ತೀವ್ರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಮಾಯಿಶ್ಚರೈಸರ್‌ಗಳು ತಾತ್ಕಾಲಿಕವಾಗಿ ಒಣಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದರೂ, ಆವಕಾಡೊ (ಬೆಣ್ಣೆಹಣ್ಣು) ನಂತಹ ನೈಸರ್ಗಿಕ ಪದಾರ್ಥಗಳು ಚರ್ಮಕ್ಕೆ ಬೇಕಾದ ಪೋಷಣೆ ನೀಡುವಲ್ಲಿ ಮತ್ತು ಚರ್ಮದ ರಕ್ಷಣಾ ಗೋಡೆಯನ್ನು ದುರಸ್ತಿ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಒಣ ಹಾಗೂ ಪದರು ಪದರಾದ ಚರ್ಮಕ್ಕೆ ಗುಡ್‌ಬೈ | Photo Credit: https://www.canva.com
ಒಣ ಹಾಗೂ ಪದರು ಪದರಾದ ಚರ್ಮಕ್ಕೆ ಗುಡ್‌ಬೈ | Photo Credit: https://www.canva.com

ಆವಕಾಡೊ ಹಣ್ಣಿನಲ್ಲಿರುವ ಸಮೃದ್ಧ ಪೋಷಕಾಂಶಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ನಯವಾಗಿಡಲು ಪ್ರಮುಖ ಪಾತ್ರ ವಹಿಸುತ್ತವೆ. ಆವಕಾಡೊ ಹಣ್ಣು ಚರ್ಮಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು ಚರ್ಮದ ನೈಸರ್ಗಿಕ ತೇವಾಂಶದ ರಕ್ಷಣಾ ಗೋಡೆಯನ್ನು (Moisture Barrier) ಮರುಸ್ಥಾಪಿಸಲು, ಚರ್ಮದಿಂದ ತೇವಾಂಶ ನಷ್ಟವಾಗುವುದನ್ನು ತಡೆಯಲು ಮತ್ತು ಚರ್ಮವನ್ನು ಸದಾ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಆವಕಾಡೊದಲ್ಲಿ ವಿಟಮಿನ್ ಇ ಇದ್ದು, ಇದು ಚರ್ಮವನ್ನು ಪರಿಸರ ಹಾನಿಯಿಂದ ರಕ್ಷಿಸುತ್ತದೆ ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.

ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ ದೃಢವಾದ ಮತ್ತು ಆರೋಗ್ಯಕರ ಚರ್ಮವನ್ನು ನೀಡುತ್ತದೆ. ಇದರೊಂದಿಗೆ ವಿಟಮಿನ್ ಎ ಚರ್ಮದ ನವೀಕರಣಕ್ಕೆ (Skin Renewal) ಮತ್ತು ಚರ್ಮದ ರಚನೆಯ ಸುಧಾರಣೆಗೆ ಕೆಲಸ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಚರ್ಮವು ತೇವಾಂಶದಿಂದ ಕೂಡಿರಲು ನೆರವಾಗುತ್ತದೆ ಹಾಗೂ ಉತ್ಕರ್ಷಣ ನಿರೋಧಕಗಳು (Antioxidants) ಫ್ರೀ ರಾಡಿಕಲ್ ಹಾನಿಯಿಂದ ಚರ್ಮವನ್ನು ಕಾಪಾಡುತ್ತವೆ.

ಮನೆಯಲ್ಲೇ ತಯಾರಿಸಬಹುದಾದ ಆವಕಾಡೊ ಫೇಸ್ ಮಾಸ್ಕ್‌ಗಳು ಒಣ ಚರ್ಮದ ಆರೈಕೆಗೆ ಅತ್ಯುತ್ತಮವಾದ ನೈಸರ್ಗಿಕ ಪರಿಹಾರವಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ, ಕೈಗೆಟುಕುವ ದರದಲ್ಲಿ ಲಭ್ಯವಿರುತ್ತದೆ ಮತ್ತು ಬಹುತೇಕ ಎಲ್ಲ ಬಗೆಯ ಒಣ ಚರ್ಮದವರಿಗೂ ಇದು ಸೂಕ್ತವಾಗಿದೆ. ಅಂತಹ ಕೆಲವು ಅತ್ಯುತ್ತಮ DIY ಆವಕಾಡೊ ಫೇಸ್ ಮಾಸ್ಕ್ ರೆಸಿಪಿಗಳು ಇಲ್ಲಿವೆ:

1. ಆವಕಾಡೊ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್

ಅರ್ಧ ಮಾಗಿದ ಆವಕಾಡೊ ಹಣ್ಣನ್ನು ತೆಗೆದುಕೊಂಡು ಅದನ್ನು ನಯವಾಗಿ ಮ್ಯಾಶ್ ಮಾಡಿ. ಇದಕ್ಕೆ 1 ಚಮಚ ಜೇನುತುಪ್ಪವನ್ನು ಬೆರೆಸಿ ನುಣ್ಣನೆಯ ಪೇಸ್ಟ್ ತಯಾರಿಸಿ. ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿದ್ದು, ಇದು ಚರ್ಮಕ್ಕೆ ತೇವಾಂಶವನ್ನು ಸೆಳೆದುಕೊಳ್ಳುತ್ತದೆ ಮತ್ತು ಆವಕಾಡೊದ ಪೋಷಕಾಂಶಗಳನ್ನು ಪೂರೈಸುತ್ತದೆ.

2. ಆವಕಾಡೊ ಮತ್ತು ಮೊಸರಿನ ಫೇಸ್ ಮಾಸ್ಕ್

ಅರ್ಧ ಮಾಗಿದ ಆವಕಾಡೊ ಹಣ್ಣಿಗೆ 2 ಚಮಚ plain ಮೊಸರನ್ನು ಬೆರೆಸಿ ಮಿಶ್ರಣ ಮಾಡಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸೌಮ್ಯವಾಗಿ ಸತ್ತ ಚರ್ಮದ ಕೋಶಗಳನ್ನು ಹೊರಹಾಕಲು (Exfoliate) ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.

3. ಆವಕಾಡೊ ಮತ್ತು ಓಟ್ಸ್‌ಮೀಲ್ ಫೇಸ್ ಮಾಸ್ಕ್

ಅರ್ಧ ಮಾಗಿದ ಆವಕಾಡೊ ಮತ್ತು 1 ಚಮಚ ನುಣ್ಣಗೆ ಪುಡಿಮಾಡಿದ ಓಟ್ಸ್‌ಮೀಲ್ ಅನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ಈ ಮಾಸ್ಕ್ ಒಣ ಮತ್ತು ಪದರು ಪದರಾದ ಚರ್ಮವನ್ನು ಸೌಮ್ಯವಾಗಿ ಎಕ್ಸ್‌ಫೋಲಿಯೇಟ್ ಮಾಡುವುದರ ಜೊತೆಗೆ ಆಳವಾದ ಆರ್ದ್ರತೆಯನ್ನು ಒದಗಿಸುತ್ತದೆ.

ಈ ಫೇಸ್ ಮಾಸ್ಕ್‌ಗಳನ್ನು ಅನ್ವಯಿಸುವ ವಿಧಾನ ಬಹಳ ಸರಳವಾಗಿದೆ. ಮೊದಲು ನಿಮ್ಮ ಮುಖವನ್ನು ಸೌಮ್ಯವಾದ ಕ್ಲೆನ್ಸರ್ ಬಳಸಿ ಸ್ವಚ್ಛಗೊಳಿಸಿ. ನಂತರ ತಯಾರಿಸಿರುವ ಆವಕಾಡೊ ಮಿಶ್ರಣವನ್ನು ಕಣ್ಣು ಮತ್ತು ತುಟಿಗಳ ಭಾಗವನ್ನು ಹೊರತುಪಡಿಸಿ ಮುಖದಾದ್ಯಂತ ಸಮವಾಗಿ ಹಚ್ಚಿಕೊಳ್ಳಿ. ಮುಖಕ್ಕೆ ಹಚ್ಚಿದ ಬಳಿಕ 15 ರಿಂದ 20 ನಿಮಿಷಗಳ ಕಾಲ ಶಾಂತವಾಗಿ ವಿಶ್ರಮಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದು, ಮೃದುವಾದ ಟವಲ್‌ನಿಂದ ಚರ್ಮವನ್ನು ನಿಧಾನವಾಗಿ ಒಣಗಿಸಿ.

ಉತ್ತಮ ಫಲಿತಾಂಶಕ್ಕಾಗಿ ತೇವಾಂಶವನ್ನು ಲಾಕ್ ಮಾಡಲು ತಕ್ಷಣವೇ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ವಾರದಲ್ಲಿ ಕನಿಷ್ಠ ಒಂದೆರಡು ಬಾರಿ ಇದನ್ನು ಬಳಸುವುದರಿಂದ ಮೃದುವಾದ ಮತ್ತು ಕಾಂತಿಯುತ ಚರ್ಮವನ್ನು ಪಡೆಯಬಹುದು. ಆವಕಾಡೊ ಫೇಸ್ ಮಾಸ್ಕ್‌ಗಳ ಹೊರತಾಗಿ, ಒಣ ಚರ್ಮದ ಸಮಗ್ರ ಆರೈಕೆಗಾಗಿ ಕೆಲವು ಉತ್ತಮ ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಸಾಕಷ್ಟು ನೀರನ್ನು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೇರವಾದ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಕಡ್ಡಾಯವಾಗಿ ಸನ್‌ಸ್ಕ್ರೀನ್ ಬಳಸಿ. ಬಿಸಿ ನೀರಿನ ಸ್ನಾನವು ಚರ್ಮದ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುವಂತೆ ಮಾಡುವುದರಿಂದ ತುಂಬಾ ಬಿಸಿ ನೀರಿನ ಸ್ನಾನವನ್ನು ತಪ್ಪಿಸಿ.

ಒಳಾಂಗಣದ ವಾತಾವರಣವು ತೀರಾ ಒಣಗಿದ್ದರೆ ಹ್ಯೂಮಿಡಿಫೈರ್ ಬಳಸಿ. ಯಾವುದೇ ನೈಸರ್ಗಿಕ ಪದಾರ್ಥವಾಗಿದ್ದರೂ ಕೆಲವರಿಗೆ ಅಲರ್ಜಿ ಉಂಟುಮಾಡಬಹುದು, ಆದ್ದರಿಂದ ಮುಖಕ್ಕೆ ಹಚ್ಚುವ ಮೊದಲು ಮೈಕೈಯ ಒಳಭಾಗದಲ್ಲಿ ಸಣ್ಣದಾಗಿ ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಉತ್ತಮ. ಒಟ್ಟಾರೆಯಾಗಿ, ಸರಿಯಾದ ಚರ್ಮದ ಆರೈಕೆ ಮತ್ತು ಆವಕಾಡೊ ಮಾಸ್ಕ್‌ಗಳ ನಿಯಮಿತ ಬಳಕೆಯು ನಿಮ್ಮ ಚರ್ಮವನ್ನು ವರ್ಷಪೂರ್ತಿ ಕಾಂತಿಯುತವಾಗಿ, ಮೃದುವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

Latest News