ಪ್ರವಾಸಕ್ಕೆಂದು ಸಮುದ್ರದ ಮಧ್ಯೆ ಹೊರಟಿದ್ದ ಪ್ರಯಾಣಿಕರಿಗೆ ಈಗ ಅನಿರೀಕ್ಷಿತ ಅತಿಥಿಯೊಬ್ಬನ ಕಾಟ ಶುರುವಾಗಿದೆ. ಅದುವೇ 'ಆಂಡಿಸ್ ಹಂಟಾವೈರಸ್'. ಸಾಮಾನ್ಯವಾಗಿ ಇಲಿಗಳಿಂದ ಹರಡುತ್ತಿದ್ದ ಈ ವೈರಸ್, ಈಗ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲ ಸಾಮರ್ಥ್ಯ ಪಡೆದುಕೊಂಡಿರುವುದು ಇಡೀ ವಿಶ್ವದ ಆರೋಗ್ಯ ಇಲಾಖೆಯನ್ನು ನಡುಗಿಸಿದೆ.
ಏನಿದು ಆಂಡಿಸ್ ಹಂಟಾವೈರಸ್ ಹೈಡ್ರಾಮಾ?
ಸಮುದ್ರದಲ್ಲಿ ಸಾಗುತ್ತಿದ್ದ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಪ್ರಯಾಣಿಕರಲ್ಲಿ ಈ ಸೋಂಕು ಪತ್ತೆಯಾಗಿದೆ. ಇವರಿಬ್ಬರೂ ಪರಸ್ಪರ ನಿಕಟ ಸಂಪರ್ಕದಲ್ಲಿದ್ದ ಕಾರಣ, ವೈರಸ್ ಒಬ್ಬರಿಂದ ಒಬ್ಬರಿಗೆ ಹರಡಿರುವುದು ಬಹುತೇಕ ಖಚಿತವಾಗಿದೆ. ಹಂಟಾವೈರಸ್ ಕುಟುಂಬದಲ್ಲೇ ಮನುಷ್ಯರಿಂದ ಮನುಷ್ಯರಿಗೆ ಹರಡುವ ಏಕೈಕ 'ಖತರ್ನಾಕ್' ತಳಿ ಎಂದರೆ ಅದು ಈ ಆಂಡಿಸ್ ವೈರಸ್ ಮಾತ್ರ!
ಶ್ವಾಸಕೋಶಕ್ಕೆ ನೇರ ಟಾರ್ಗೆಟ್!
ಈ ವೈರಸ್ ಬಂದರೆ ಬರೀ ಜ್ವರ ಅಂತ ಸುಮ್ಮನಿರುವಂತಿಲ್ಲ. ಇದು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡಿ 'ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್' (HPS) ಎಂಬ ಗಂಭೀರ ಸ್ಥಿತಿಗೆ ತಲುಪಿಸುತ್ತದೆ.
ಆರಂಭಿಕ ಲಕ್ಷಣ - ಚಳಿ, ಜ್ವರ, ತಲೆನೋವು ಮತ್ತು ಅತಿಯಾದ ಸುಸ್ತು.
ಡೇಂಜರ್ ಲಕ್ಷಣ - ಉಸಿರಾಟದ ತೊಂದರೆ ಮತ್ತು ಎದೆ ಬಿಗಿತ. ಇದು ತೀವ್ರವಾದರೆ ಶ್ವಾಸಕೋಶ ವೈಫಲ್ಯದಂತಹ ಜೀವಕ್ಕೆ ಅಪಾಯಕಾರಿ ಸ್ಥಿತಿ ತರಬಹುದು.
ಕ್ರೂಸ್ ಹಡಗುಗಳೇ ಯಾಕೆ ಹಾಟ್ ಸ್ಪಾಟ್?
ಕ್ರೂಸ್ ಹಡಗುಗಳು ಎಂದರೆ ಅಲ್ಲಿ ಸಾವಿರಾರು ಜನರು ಒಂದೇ ಸೂರಿನಡಿ ಇರುತ್ತಾರೆ. ಊಟ, ಸಿನಿಮಾ, ಈಜುಕೊಳ ಹೀಗೆ ಎಲ್ಲವೂ ಹಂಚಿಕೆಯ ಜಾಗಗಳೇ ಆಗಿರುವುದರಿಂದ ಸೋಂಕು ಹರಡಲು ಇದು 'ಬೆಸ್ಟ್ ಪ್ಲೇಸ್' ಆಗಿಬಿಡುತ್ತದೆ.. ಅದಕ್ಕಾಗಿಯೇ ಆರೋಗ್ಯ ಇಲಾಖೆ ಈಗ ಹಡಗಿನ ಮೂಲೆ ಮೂಲೆಯನ್ನೂ ಸ್ಯಾನಿಟೈಸ್ ಮಾಡುತ್ತಿದ್ದು, ಪ್ರತಿಯೊಬ್ಬ ಪ್ರಯಾಣಿಕನ ಮೇಲೂ ಕಣ್ಣಿಟ್ಟಿದೆ.
ಮುನ್ನೆಚ್ಚರಿಕೆ ಏನೇನು?
ಸದ್ಯಕ್ಕೆ ಸೋಂಕಿತರಿಬ್ಬರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಜೊತೆ ಯಾರೆಲ್ಲಾ ಮಾತಾಡಿದ್ದರು, ಪಕ್ಕದಲ್ಲಿ ಕುಳಿತಿದ್ದರು ಎಂಬುದನ್ನ ಪತ್ತೆ ಹಚ್ಚಲಾಗುತ್ತಿದೆ. ಹಡಗಿನಲ್ಲಿರುವ ಎಲ್ಲರಿಗೂ ತಮ್ಮ ಆರೋಗ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಈ ವೈರಸ್ ಬಗ್ಗೆ ಸದ್ಯಕ್ಕೆ ಸಾರ್ವಜನಿಕರು ಅತಿಯಾಗಿ ಭಯಪಡುವ ಅಗತ್ಯವಿಲ್ಲದಿದ್ದರೂ, ಜಾಗ್ರತೆ ಇರಲಿ. ಪ್ರವಾಸ ಮಾಡುವಾಗ ಮತ್ತು ಗುಂಪು ಸೇರುವಾಗ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಏನಾದರೂ ಲಕ್ಷಣ ಕಂಡರೆ ಕೂಡಲೇ ವೈದ್ಯರ ಬಳಿ ಓಡುವುದು ಈ ಕಾಲದ ಅನಿವಾರ್ಯತೆ!