ಹೋಟೆಲ್ಗಳಲ್ಲಿ ಸಿಗುವ ಮೃದುವಾದ, ಮಸಾಲೆಯುಕ್ತ ಆಲೂ ಕುಲ್ಚಾವನ್ನು ಮನೆಯಲ್ಲೇ ತಯಾರಿಸಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ಕುಲ್ಚಾ ಮಾಡಲು ತಂದೂರ್ ಅಥವಾ ಓವನ್ ಬೇಕು, ಹಿಟ್ಟಿಗೆ ಯೀಸ್ಟ್ ಹಾಕಿ ಹೆಚ್ಚು ಸಮಯ ಕಾಯಬೇಕು ಎಂದು ಕೆಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಮನೆಯ ಸಾಮಾನ್ಯ ತವೆಯಲ್ಲೇ ಸುಲಭವಾಗಿ ರುಚಿಕರವಾದ ಆಲೂ ಕುಲ್ಚಾ ತಯಾರಿಸಬಹುದು. ಮೈದಾ, ಮೊಸರು, ಬೇಕಿಂಗ್ ಪೌಡರ್ ಮತ್ತು ಬೇಯಿಸಿದ ಆಲೂಗಡ್ಡೆಯಂತಹ ಸಾಮಾನ್ಯ ಪದಾರ್ಥಗಳನ್ನು ಬಳಸಿ ಈ ತಿಂಡಿಯನ್ನು ಸಿದ್ಧಪಡಿಸಬಹುದು.
ಬೆಳಗಿನ ಉಪಾಹಾರ, ಸಂಜೆ ತಿಂಡಿ ಅಥವಾ ಮಧ್ಯಾಹ್ನದ ಊಟಕ್ಕೆ ಆಲೂ ಕುಲ್ಚಾ ಉತ್ತಮ ಆಯ್ಕೆಯಾಗಿದೆ. ಇದನ್ನು ಚೋಲೆ, ಚನಾ ಮಸಾಲಾ, ಮೊಸರು ಅಥವಾ ನಿಮ್ಮ ಇಷ್ಟದ ಪಲ್ಯದೊಂದಿಗೆ ಸವಿಯಬಹುದು.
ಆಲೂ ಕುಲ್ಚಾ ಮಾಡಲು ಬೇಕಾಗುವ ಪದಾರ್ಥಗಳು
ಹಿಟ್ಟು ತಯಾರಿಸಲು:
-
ಮೈದಾ - 2 ಕಪ್
-
ಮೊಸರು - ಅರ್ಧ ಕಪ್
-
ಉಪ್ಪು - 1 ಟೀ ಚಮಚ
-
ಸಕ್ಕರೆ ಪುಡಿ - 1 ಟೀ ಚಮಚ
-
ಬೇಕಿಂಗ್ ಪೌಡರ್ - 1½ ಟೀ ಚಮಚ
-
ಬೇಕಿಂಗ್ ಸೋಡಾ - ¼ ಟೀ ಚಮಚ
-
ಎಣ್ಣೆ - 1 ಟೇಬಲ್ ಸ್ಪೂನ್ (ಐಚ್ಛಿಕ)
-
ಅಗತ್ಯಕ್ಕೆ ತಕ್ಕಷ್ಟು ನೀರು
ಆಲೂಗಡ್ಡೆ ಹೂರಣಕ್ಕೆ:
-
ಬೇಯಿಸಿದ ಆಲೂಗಡ್ಡೆ - 2
-
ಸಣ್ಣಗೆ ಹೆಚ್ಚಿದ ಈರುಳ್ಳಿ - 1
-
ಶುಂಠಿ - 1 ಟೀ ಚಮಚ
-
ಹಸಿಮೆಣಸಿನಕಾಯಿ - 1
-
ಖಾರದ ಪುಡಿ - 2 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
-
ಕಪ್ಪು ಉಪ್ಪು - 1 ಟೀ ಚಮಚ
-
ಸಾಮಾನ್ಯ ಉಪ್ಪು - ರುಚಿಗೆ ತಕ್ಕಷ್ಟು
-
ಕೊತ್ತಂಬರಿ ಸೊಪ್ಪು - ಸ್ವಲ್ಪ
-
ಕಾಳುಜೀರಿಗೆ - ಅಗತ್ಯಕ್ಕೆ ತಕ್ಕಷ್ಟು
ಹಂತ 1 - ಕುಲ್ಚಾ ಹಿಟ್ಟು ತಯಾರಿಸಿ
ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ, ಉಪ್ಪು, ಸಕ್ಕರೆ, ಮೊಸರು, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪಸ್ವಲ್ಪವಾಗಿ ನೀರು ಸೇರಿಸುತ್ತಾ ಮೃದುವಾದ ಹಿಟ್ಟನ್ನು ಕಲಸಿ. ಹಿಟ್ಟು ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ. ನಂತರ ಒದ್ದೆ ಬಟ್ಟೆಯಿಂದ ಮುಚ್ಚಿ ಸ್ವಲ್ಪ ಸಮಯ ವಿಶ್ರಾಂತಿಗೆ ಬಿಡಿ. ಹೀಗೆ ಮಾಡುವುದರಿಂದ ಹಿಟ್ಟು ಮೃದುವಾಗುತ್ತದೆ ಮತ್ತು ಕುಲ್ಚಾವನ್ನು ಲಟ್ಟಿಸಲು ಸುಲಭವಾಗುತ್ತದೆ.
ಹಂತ 2 - ಮಸಾಲೆಯುಕ್ತ ಹೂರಣ ಸಿದ್ಧಪಡಿಸಿ
ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಕಪ್ಪು ಉಪ್ಪು ಮತ್ತು ಅಗತ್ಯಕ್ಕೆ ತಕ್ಕಷ್ಟು ಸಾಮಾನ್ಯ ಉಪ್ಪು ಸೇರಿಸಿ. ಎಲ್ಲ ಪದಾರ್ಥಗಳು ಸಮವಾಗಿ ಬೆರೆಯುವಂತೆ ಮಿಶ್ರಣ ಮಾಡಿ. ಹೂರಣದಲ್ಲಿ ದೊಡ್ಡ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ.
ಹಂತ 3 - ಹೂರಣ ತುಂಬಿ ಲಟ್ಟಿಸಿ
ಹಿಟ್ಟನ್ನು ಸಮಾನ ಗಾತ್ರದ ಉಂಡೆಗಳಾಗಿ ಮಾಡಿಕೊಳ್ಳಿ. ಪ್ರತಿ ಉಂಡೆಯನ್ನು ಸ್ವಲ್ಪ ಅಗಲಿಸಿ ಮಧ್ಯದಲ್ಲಿ ಆಲೂಗಡ್ಡೆಯ ಹೂರಣವನ್ನಿಡಿ. ಅಂಚುಗಳನ್ನು ಒಟ್ಟುಗೂಡಿಸಿ ಚೆನ್ನಾಗಿ ಮುಚ್ಚಿ. ನಂತರ ಒಣ ಮೈದಾವನ್ನು ಸ್ವಲ್ಪ ಬಳಸಿ ನಿಧಾನವಾಗಿ ಲಟ್ಟಿಸಿ. ಹೆಚ್ಚು ಒತ್ತಡ ಹಾಕಿದರೆ ಹೂರಣ ಹೊರಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಲಟ್ಟಿಸಬೇಕು. ಮೇಲ್ಭಾಗಕ್ಕೆ ಕಾಳುಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.
ಹಂತ 4 - ತವೆಯಲ್ಲೇ ಕುಲ್ಚಾ ಬೇಯಿಸಿ
ತವೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಕುಲ್ಚಾದ ಒಂದು ಬದಿಗೆ ಸ್ವಲ್ಪ ನೀರು ಸವರಿ, ಆ ಭಾಗವನ್ನು ತವೆಯ ಮೇಲೆ ಇಡಿ. ಮುಚ್ಚಳ ಮುಚ್ಚಿ ಸ್ವಲ್ಪ ಸಮಯ ಬೇಯಿಸಿ. ಕುಲ್ಚಾ ಉಬ್ಬತೊಡಗಿದಾಗ ಮುಚ್ಚಳ ತೆಗೆದು ಇನ್ನೊಂದು ಬದಿಗೆ ತಿರುಗಿಸಿ. ಎರಡೂ ಬದಿಗಳಲ್ಲಿ ತಿಳಿ ಕಂದು ಬಣ್ಣದ ಕಲೆಗಳು ಕಾಣಿಸಿಕೊಂಡು ಒಳಗಿನ ಹಿಟ್ಟು ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ. ಬೇಕಿದ್ದರೆ ಮೇಲಕ್ಕೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಬಹುದು.
ಮೃದುವಾದ ಕುಲ್ಚಾ ತಯಾರಿಸಲು ಕೆಲವು ಸಲಹೆಗಳು
-
ಹಿಟ್ಟನ್ನು ತುಂಬಾ ಗಟ್ಟಿಯಾಗಿ ಕಲಸಬೇಡಿ.
-
ಹೂರಣಕ್ಕೆ ನೀರಿನಂಶ ಹೆಚ್ಚಾಗದಂತೆ ನೋಡಿಕೊಳ್ಳಿ.
-
ಕುಲ್ಚಾವನ್ನು ಲಟ್ಟಿಸುವಾಗ ಹೆಚ್ಚು ಒತ್ತಡ ಹಾಕಬೇಡಿ.
-
ತವೆಯ ಉರಿ ಮಧ್ಯಮವಾಗಿರಲಿ; ಹೆಚ್ಚು ಉರಿಯಲ್ಲಿ ಹೊರಭಾಗ ಬೇಗ ಕಂದು ಬಣ್ಣಕ್ಕೆ ತಿರುಗಿದರೂ ಒಳಭಾಗ ಸರಿಯಾಗಿ ಬೇಯದೇ ಇರಬಹುದು.
-
ಕುಲ್ಚಾವನ್ನು ಬಿಸಿಬಿಸಿಯಾಗಿಯೇ ಬಡಿಸಿದರೆ ರುಚಿ ಹೆಚ್ಚಿರುತ್ತದೆ.
ಹೀಗೆ ಮನೆಯಲ್ಲಿರುವ ಸರಳ ಪದಾರ್ಥಗಳಿಂದಲೇ ಮೃದುವಾದ, ರುಚಿಕರವಾದ ಆಲೂ ಕುಲ್ಚಾವನ್ನು ತಯಾರಿಸಬಹುದು. ತಂದೂರ್ ಅಥವಾ ಓವನ್ ಇಲ್ಲದಿದ್ದರೂ ಸರಿಯಾದ ಹಿಟ್ಟು, ಮಸಾಲೆ ಹೂರಣ ಮತ್ತು ತವೆಯ ಮೇಲೆ ಬೇಯಿಸುವ ವಿಧಾನವನ್ನು ಅನುಸರಿಸಿದರೆ ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಕುಲ್ಚಾವನ್ನು ಸವಿಯಬಹುದು.