ಭಾರತದಲ್ಲಿ ಸಾಮಾನ್ಯವಾಗಿ ಮನೆಯ ಬದಿಯಲ್ಲಿ ಹಾವು ಕಂಡರೆ ಅದನ್ನು ಹುಡುಕಿ ಕೊಲುವುದೇ ಹೆಚ್ಚು ಆದರೆ ಇಲ್ಲೊಂದು ದೇಶದಲ್ಲಿ ಹಾವು ರಸ್ತೆಯಲ್ಲಿ ಸುರಕ್ಷವಾಗಿ ಓಡಾಡಲಿ ಎಂದು ರಸ್ತೆಯನ್ನುಬಂದ್ ಮಾಡಲಾಗಿದೆ ಯಾವುದು ಆ ದೇಶ ಅಮೆರಿಕದಲ್ಲಿ ಒಂದು ರಸ್ತೆಯಲ್ಲಿ ಮಾತ್ರ ವರ್ಷದಲ್ಲಿ ಬರೋಬ್ಬರಿ ನಾಲ್ಕು ತಿಂಗಳು ವಾಹನ ಸಂಚಾರವನ್ನೇ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಇದಕ್ಕೆ ಕಾರಣ ರಸ್ತೆ ದುರಸ್ತಿ, ಅಪಘಾತ ಅಥವಾ ಟ್ರಾಫಿಕ್ ಸಮಸ್ಯೆಯಲ್ಲ. ಬದಲಾಗಿ, ರಸ್ತೆಯನ್ನು ದಾಟುವ ಸಾವಿರಾರು ಹಾವುಗಳು ಹಾಗೂ ಇತರ ವನ್ಯಜೀವಿಗಳ ರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾವುಗಳ ಸುರಕ್ಷತೆಗಾಗಿ ವಾಹನಗಳ ಸಂಚಾರವನ್ನೇ ನಿಲ್ಲಿಸುವ ಈ ರಸ್ತೆಯ ಹೆಸರು 'ಸ್ನೇಕ್ ರೋಡ್'. ಪ್ರಕೃತಿಯ ಜೀವಿಗಳಿಗೆ ಆದ್ಯತೆ ನೀಡುವ ಈ ವಿಶೇಷ ಕ್ರಮ ಇದೀಗ ಕುತೂಹಲ ಮೂಡಿಸಿದೆ
ಅಮೆರಿಕದ ಇಲಿನಾಯ್ಸ್ನಲ್ಲಿದೆ ಈ ವಿಶೇಷ ರಸ್ತೆ
ಈ ವಿಶೇಷ ರಸ್ತೆ ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿರುವ ಶಾನಿ ನ್ಯಾಷನಲ್ ಫಾರೆಸ್ಟ್ (Shawnee National Forest) ಅರಣ್ಯ ಪ್ರದೇಶದಲ್ಲಿದೆ. ಸ್ಥಳೀಯವಾಗಿ 'ಸ್ನೇಕ್ ರೋಡ್' ಎಂದು ಪ್ರಸಿದ್ಧವಾಗಿರುವ ಈ ರಸ್ತೆಯ ಅಧಿಕೃತ ಹೆಸರು ಫಾರೆಸ್ಟ್ ಸರ್ವಿಸ್ ರೋಡ್ 345 (Forest Service Road 345). ಇದನ್ನು ಲಾ ರೂ ರಸ್ತೆ (LaRue Road) ಎಂದೂ ಕರೆಯುತ್ತಾರೆ.
ಸುಮಾರು 4 ಕಿಲೋಮೀಟರ್ ಉದ್ದದ ಈ ರಸ್ತೆ ಒಂದು ಬದಿಯಲ್ಲಿ ಸುಣ್ಣದ ಕಲ್ಲಿನ ಎತ್ತರದ ಬೆಟ್ಟಗಳು ಹಾಗೂ ಮತ್ತೊಂದು ಬದಿಯಲ್ಲಿ ಜೌಗು ಪ್ರದೇಶಗಳ ನಡುವೆ ಹಾದುಹೋಗುತ್ತದೆ. ಈ ಎರಡು ವಿಭಿನ್ನ ನೈಸರ್ಗಿಕ ಆವಾಸಸ್ಥಾನಗಳ ನಡುವೆ ಹಾವುಗಳು ಮತ್ತು ಇತರ ಜೀವಿಗಳು ಸಂಚರಿಸುವಾಗ ಈ ರಸ್ತೆಯನ್ನು ದಾಟಬೇಕಾಗುತ್ತದೆ.
ವರ್ಷದಲ್ಲಿ ಯಾವಾಗ ರಸ್ತೆ ಬಂದ್ ಮಾಡಲಾಗುತ್ತದೆ?
ಹಾವುಗಳು ಹಾಗೂ ಇತರ ವನ್ಯಜೀವಿಗಳು ತಮ್ಮ ವಾಸಸ್ಥಾನ ಬದಲಾಯಿಸುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯನ್ನು ವರ್ಷದಲ್ಲಿ ಎರಡು ಬಾರಿ ವಾಹನಗಳ ಸಂಚಾರಕ್ಕೆ ಬಂದ್ ಮಾಡಲಾಗುತ್ತದೆ. ಪ್ರತಿ ಬಾರಿ ಸುಮಾರು ಎರಡು ತಿಂಗಳ ಕಾಲ ನಿರ್ಬಂಧವಿದ್ದು, ಒಟ್ಟು ನಾಲ್ಕು ತಿಂಗಳು ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ.
- ಮಾರ್ಚ್15ರಿಂದ ಮೇ15ರವರೆಗೆ -ಚಳಿಗಾಲದ ಆಶ್ರಯ ತೊರೆದು ಹಾವುಗಳು ಹಾಗೂ ಇತರ ಜೀವಿಗಳು ಜೌಗು ಪ್ರದೇಶಗಳತ್ತ ತೆರಳುವ ಸಮಯ.
- ಸೆಪ್ಟೆಂಬರ್ 1ರಿಂದ ಅಕ್ಟೋಬರ್ 30ರವರೆಗೆ - ಮತ್ತೆ ಚಳಿಗಾಲದ ಆಶ್ರಯಕ್ಕಾಗಿ ಬೆಟ್ಟಗಳತ್ತ ಹಿಂದಿರುಗುವ ವಲಸೆ ಅವಧಿ.
ಈ ಅವಧಿಯಲ್ಲಿ ಕಾರು, ಬೈಕ್ ಸೇರಿದಂತೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ. ಉಳಿದ ಎಂಟು ತಿಂಗಳ ಅವಧಿಯಲ್ಲಿ ಸಾಮಾನ್ಯವಾಗಿ ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ.
ಹಾವುಗಳು ರಸ್ತೆ ದಾಟುವಾಗ ವಾಹನಗಳಿಗೆ ಬಲಿಯಾಗುತ್ತಿದ್ದವು
ಹಾವುಗಳು ಸೇರಿದಂತೆ ಹಲವು ಸಣ್ಣ ವನ್ಯಜೀವಿಗಳು ತಮ್ಮ ಆವಾಸಸ್ಥಾನ ಬದಲಿಸುವಾಗ ರಸ್ತೆಯನ್ನು ದಾಟಬೇಕಾಗುತ್ತದೆ. ಹಿಂದೆ ಈ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿದ್ದ ಕಾರಣ, ರಸ್ತೆ ದಾಟುವ ಜೀವಿಗಳು ವಾಹನಗಳ ಚಕ್ರಗಳಿಗೆ ಸಿಲುಕಿ ಸಾವನ್ನಪ್ಪುವ ಅಪಾಯ ಹೆಚ್ಚಾಗಿತ್ತು. ಇದರಿಂದ ವನ್ಯಜೀವಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿತ್ತು.
ಈ ಸಮಸ್ಯೆಯನ್ನು ತಡೆಯಲು ಅಮೆರಿಕದ ಅರಣ್ಯ ಇಲಾಖೆಯು ನಿರ್ದಿಷ್ಟ ವಲಸೆ ಅವಧಿಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸುವ ಕ್ರಮ ಕೈಗೊಂಡಿದೆ. ರಸ್ತೆ ಬಂದ್ ಮಾಡುವುದರಿಂದ ಜೀವಿಗಳು ಸುರಕ್ಷಿತವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಅವಕಾಶ ಸಿಗುತ್ತದೆ.
ಕೇವಲ ಹಾವುಗಳಲ್ಲ, ಇತರ ಜೀವಿಗಳಿಗೂ ರಕ್ಷಣೆ
ಈ ಅರಣ್ಯ ಪ್ರದೇಶದಲ್ಲಿ ಹಾವುಗಳಷ್ಟೇ ಅಲ್ಲದೆ, ಹಲವು ಬಗೆಯ ಜೀವಿಗಳು ಋತುಮಾನಕ್ಕೆ ಅನುಗುಣವಾಗಿ ತಮ್ಮ ವಾಸಸ್ಥಾನಗಳನ್ನು ಬದಲಾಯಿಸುತ್ತವೆ. ಹಾವುಗಳ ಜೊತೆಗೆ ಕಪ್ಪೆಗಳು, ಆಮೆಗಳು, ನ್ಯೂಟ್ಗಳು ಹಾಗೂ ಸ್ಯಾಲಮಾಂಡರ್ಗಳಂತಹ ಉಭಯಚರ ಜೀವಿಗಳಿಗೂ ಈ ರಸ್ತೆ ದಾಟುವ ಮಾರ್ಗವಾಗಿದೆ.
ಶಾನಿ ನ್ಯಾಷನಲ್ ಫಾರೆಸ್ಟ್ನಲ್ಲಿ ಸುಮಾರು 35 ವಲಸೆ ಹಾವು ಪ್ರಭೇದಗಳು ಹಾಗೂ 23 ಉಭಯಚರ ಪ್ರಭೇದಗಳಿವೆ ಎಂದು ವರದಿಗಳು ತಿಳಿಸಿವೆ. ಅವುಗಳಲ್ಲಿ ಕೆಲವು ವಿಷಕಾರಿ ಹಾವುಗಳೂ ಸೇರಿವೆ. ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ಈ ಜೀವಿಗಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನಗಳಿಗೆ ಸಿಲುಕುವ ಅಪಾಯ ಕಡಿಮೆಯಾಗುತ್ತದೆ.
ರಸ್ತೆ ಬಂದ್ ಆದರೂ ಪ್ರವಾಸಿಗರಿಗೆ ಅವಕಾಶವಿದೆಯೇ?
ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ, ಈ ಅವಧಿಯಲ್ಲಿ ಜನರು ಕಾಲ್ನಡಿಗೆಯಲ್ಲಿ ರಸ್ತೆಯ ಪರಿಸರವನ್ನು ವೀಕ್ಷಿಸಲು ಅವಕಾಶವಿರುವ ಸಂದರ್ಭಗಳಿವೆ. ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ವೀಕ್ಷಿಸಲು ಪ್ರಕೃತಿ ಪ್ರಿಯರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.
ಆದರೆ ಈ ಪ್ರದೇಶದಲ್ಲಿ ವಿಷಕಾರಿ ಹಾವುಗಳೂ ಇರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ವನ್ಯಜೀವಿಗಳನ್ನು ಮುಟ್ಟುವುದು, ಹಿಡಿಯಲು ಪ್ರಯತ್ನಿಸುವುದು ಅಥವಾ ಅವುಗಳಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಪ್ರಕೃತಿಯ ರಕ್ಷಣೆಗೆ ವಿಭಿನ್ನ ಮಾದರಿ
ಸಾಮಾನ್ಯವಾಗಿ ರಸ್ತೆ, ಸೇತುವೆ ಹಾಗೂ ಸಾರಿಗೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಈ ಸ್ನೇಕ್ ರೋಡ್ನಲ್ಲಿ ಜೀವಿಗಳ ವಲಸೆಗೆ ಅನುಕೂಲವಾಗುವಂತೆ ವಾಹನ ಸಂಚಾರವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ವಿಶೇಷವಾಗಿದೆ. ಮನುಷ್ಯರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದರ ಜೊತೆಗೆ ಕಾಡುಪ್ರಾಣಿಗಳ ಜೀವ ರಕ್ಷಣೆಯೂ ಮುಖ್ಯ ಎಂಬುದನ್ನು ಈ ಕ್ರಮ ತೋರಿಸುತ್ತದೆ.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕಾಪಾಡಿಕೊಳ್ಳುವ ಅಗತ್ಯವಿದೆ ಎಂಬುದಕ್ಕೆ ಅಮೆರಿಕದ ಈ ಸ್ನೇಕ್ ರೋಡ್ ಉತ್ತಮ ಉದಾಹರಣೆಯಾಗಿದೆ.
Comments