ಭಾರತದಲ್ಲಿ ಮೊಬೈಲ್ ಬಳಕೆದಾರರ ಭದ್ರತೆ, ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಕಳೆದುಹೋದ/ಕದ್ದ ಫೋನ್‌ಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ದೂರಸಂಪರ್ಕ ಇಲಾಖೆ (DoT) ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಸಂಚಾರ್ ಸಾಥಿ (Sanchar Saathi) ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಪ್ರಿಲೋಡ್ ಮಾಡಬೇಕು ಎಂದು ತಯಾರಕರಿಗೆ ಸೂಚಿಸಲಾಗಿದೆ.
ಈ ಆ್ಯಪ್‌ನ್ನು ಅನ್‌ಇನ್‌ಸ್ಟಾಲ್ ಮಾಡಲು ಅವಕಾಶವಿಲ್ಲದೆ, ಪ್ರತಿಯೊಂದು ಹೊಸ ಫೋನ್‌ನಲ್ಲಿ ಕಡ್ಡಾಯವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈಗಾಗಲೇ ಬಳಕೆಯಲ್ಲಿರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಸೇರಿಸಲಾಗುವುದು. ಸಂಚಾರ್ ಸಾಥಿ ಪೋರ್ಟಲ್‌ನ ಮುಂದುವರಿದ ಭಾಗವಾಗಿ ಅಭಿವೃದ್ಧಿಪಡಿಸಲಾದ ಈ ಆ್ಯಪ್, IMEI ಪರಿಶೀಲನೆ, ಕಳೆದುಹೋದ ಫೋನ್‌ಗಳನ್ನು ಬ್ಲಾಕ್ ಮಾಡುವುದು, ಸೈಬರ್ ವಂಚನೆ ತಡೆಗಟ್ಟುವುದು ಮುಂತಾದ ಸೇವೆಗಳನ್ನು ಒದಗಿಸುತ್ತದೆ.
ಭಾರತದಲ್ಲಿ ಹೊಸ ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಕಡ್ಡಾಯ
ದೂರಸಂಪರ್ಕ ಇಲಾಖೆ (DoT) ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಸಂಚಾರ್ ಸಾಥಿ (Sanchar Saathi) ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕು ಎಂದು ತಯಾರಕರಿಗೆ ಸೂಚಿಸಿದೆ. ಈ ನಿರ್ಧಾರವನ್ನು 2025ರ ನವೆಂಬರ್‌ನಲ್ಲಿ ಹೊರಡಿಸಲಾಗಿದ್ದು, 90 ದಿನಗಳ ಗಡುವಿನೊಳಗೆ ಎಲ್ಲಾ ತಯಾರಕರು ಈ ನಿಯಮವನ್ನು ಪಾಲಿಸಬೇಕಾಗಿದೆ.
ಪ್ರಿಲೋಡೆಡ್ ಆ್ಯಪ್ ಎಂದರೇನು?
ಸಾಮಾನ್ಯವಾಗಿ ಬಳಕೆದಾರರು ಆಂಡ್ರಾಯ್ಡ್ ಅಥವಾ ಆಪಲ್ ಪ್ಲೇಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಆದರೆ ಪ್ರಿಲೋಡೆಡ್ ಆ್ಯಪ್‌ಗಳು ಫೋನ್ ಖರೀದಿಸುವಾಗಲೇ ಅದರೊಳಗೆ ಇನ್‌ಸ್ಟಾಲ್ ಆಗಿರುತ್ತವೆ. ಉದಾಹರಣೆಗೆ, ಐಫೋನ್‌ನಲ್ಲಿ ಆಪಲ್‌ನ ಕೆಲವು ಆ್ಯಪ್‌ಗಳು ಅಥವಾ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್‌ನ ಆ್ಯಪ್‌ಗಳು ಪ್ರಿಲೋಡೆಡ್ ಆಗಿ ಬರುತ್ತವೆ. ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಅವಕಾಶವಿಲ್ಲ. ಇದೇ ರೀತಿಯಲ್ಲಿ ಸಂಚಾರ್ ಸಾಥಿ ಆ್ಯಪ್ ಕೂಡ ಕಡ್ಡಾಯವಾಗಿ ಪ್ರಿಲೋಡೆಡ್ ಆಗಿರಲಿದೆ.
ಸಂಚಾರ್ ಸಾಥಿ ಆ್ಯಪ್ ಪರಿಚಯ
ಸಂಚಾರ್ ಸಾಥಿ ಪೋರ್ಟಲ್ ಅನ್ನು 2023ರ ಮೇ ತಿಂಗಳಲ್ಲಿ ಆರಂಭಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಯಿತು. 2024ರ ಜನವರಿಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಿಡುಗಡೆ ಮಾಡಲಾಯಿತು. ಈ ಆ್ಯಪ್ ಮೂಲಕ ಕಳೆದುಹೋದ ಅಥವಾ ಕದ್ದ ಮೊಬೈಲ್‌ಗಳನ್ನು ಬ್ಲಾಕ್ ಮಾಡುವುದು, IMEI ಪರಿಶೀಲನೆ, ಹಾಗೂ ಸೈಬರ್ ಅಪರಾಧ ತಡೆಗಟ್ಟುವುದು ಸಾಧ್ಯವಾಗುತ್ತದೆ.
ಸರ್ಕಾರದ ಉದ್ದೇಶ
ಕೇಂದ್ರ ಸರ್ಕಾರದ ಪ್ರಕಾರ, ನಕಲಿ IMEI ಬಳಸಿ ನಡೆಯುವ ವಂಚನೆಗಳನ್ನು ತಡೆಗಟ್ಟಲು ಈ ಆ್ಯಪ್ ಅತ್ಯಗತ್ಯ. ಈಗಾಗಲೇ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ. ಜೊತೆಗೆ, 28 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳ ಕುರಿತು ಮಾಹಿತಿ ಕೇಳಿದ್ದಾರೆ, ಇದರಲ್ಲಿ 25 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಪರಿಹರಿಸಲಾಗಿದೆ.
ಬಳಕೆದಾರರ ಪ್ರತಿಕ್ರಿಯೆ
ಈ ಆ್ಯಪ್ ಈಗಾಗಲೇ 1.14 ಕೋಟಿಗೂ ಹೆಚ್ಚು ನೋಂದಣಿಗಳನ್ನು ಪಡೆದಿದೆ. ಗೂಗಲ್ ಪ್ಲೇಸ್ಟೋರ್‌ನಿಂದ 1 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳು ಮತ್ತು ಆಪಲ್ ಸ್ಟೋರ್‌ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳು ಆಗಿವೆ. ಇದರಿಂದ ಸಂಚಾರ್ ಸಾಥಿ ಆ್ಯಪ್ ಜನಪ್ರಿಯತೆ ಮತ್ತು ಅಗತ್ಯತೆಯನ್ನು ತೋರಿಸುತ್ತದೆ.