ಬೆಂಗಳೂರು: ಸಿಲಿಕಾನ್ ಸಿಟಿಯ ಟೆಕ್ ಲೋಕಕ್ಕೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಲಂಡನ್ ಮೂಲದ ಜನಪ್ರಿಯ ಕನ್ಸ್ಯೂಮರ್ ಟೆಕ್ ಬ್ರ್ಯಾಂಡ್ 'ನಥಿಂಗ್' (Nothing), ಭಾರತದಲ್ಲಿ ತನ್ನ ಮೊಟ್ಟಮೊದಲ ಬೃಹತ್ ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಬೆಂಗಳೂರಿನ ಇಂದಿರಾನಗರದಲ್ಲಿ ಅದ್ಧೂರಿಯಾಗಿ ಆರಂಭಿಸಿದೆ. ವಿಶೇಷವೆಂದರೆ, ನ್ಯೂಯಾರ್ಕ್ ಅಥವಾ ಟೋಕಿಯೋಗೂ ಮುನ್ನ ನಥಿಂಗ್ ಕಂಪನಿಯು ಬೆಂಗಳೂರನ್ನು ತನ್ನ ಜಾಗತಿಕ ವಿಸ್ತರಣೆಗೆ ಆರಿಸಿಕೊಂಡಿದೆ.
ಉದ್ಘಾಟನೆಯ ದಿನವೇ ದಾಖಲೆ!
ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಈ ಮಳಿಗೆಯನ್ನು ಕಂಪನಿಯ ಸಿಇಒ ಕಾರ್ಲ್ ಪೇಯ್ ಅವರು ಉದ್ಘಾಟಿಸಿದರು. 5,032 ಚದರ ಅಡಿ ವಿಸ್ತೀರ್ಣದ ಈ ಬೃಹತ್ ಸ್ಟೋರ್‌ಗೆ ಮೊದಲ ದಿನವೇ 2,000ಕ್ಕೂ ಹೆಚ್ಚು ಜನರು ಭೇಟಿ ನೀಡುವ ಮೂಲಕ ನಥಿಂಗ್ ಬ್ರ್ಯಾಂಡ್ ಮೇಲಿರುವ ಕ್ರೇಜ್ ಅನ್ನು ಸಾಬೀತುಪಡಿಸಿದ್ದಾರೆ.
ಈ ಮಳಿಗೆಯ ವಿಶೇಷತೆಗಳೇನು?
ಇದು ಕೇವಲ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಅಂಗಡಿಯಲ್ಲ, ಬದಲಿಗೆ ಗ್ರಾಹಕರಿಗೆ ಒಂದು ವಿಶಿಷ್ಟ ಅನುಭವ ನೀಡುವ 'ಎಕ್ಸ್‌ಪೀರಿಯನ್ಸ್ ಸೆಂಟರ್':
- ಡಿಸೈನ್ ಸೆಂಟರ್: ಕಂಪನಿಯ ವಿಶಿಷ್ಟ ವಿನ್ಯಾಸದ ಫೋನ್ ಮತ್ತು ಇಯರ್‌ಬಡ್‌ಗಳ ನೇರ ಅನುಭವ ಪಡೆಯಬಹುದು.
- ಕೆಫೆ ಮತ್ತು ಗೇಮಿಂಗ್: ಭೇಟಿ ನೀಡುವ ಗ್ರಾಹಕರಿಗೆ ಉಚಿತ ಪಾನೀಯಗಳ ವ್ಯವಸ್ಥೆ ಹಾಗೂ ಗೇಮಿಂಗ್ ಜೋನ್ ಇದೆ.
- ಕ್ರಿಯೇಟರ್ ಸ್ಟುಡಿಯೋ: ವಿಡಿಯೋ ರೆಕಾರ್ಡಿಂಗ್ ಸ್ಟುಡಿಯೋ ಮತ್ತು ಸಂವಾದಾತ್ಮಕ ಸ್ಥಳಗಳನ್ನು ಇಲ್ಲಿ ಅಳವಡಿಸಲಾಗಿದೆ.
- ಅಧುನಿಕ ವಿನ್ಯಾಸ: ಕನ್ವೇಯರ್ ಬೆಲ್ಟ್ ಡಿಸ್‌ಪ್ಲೇ ಮತ್ತು ವೆಂಡಿಂಗ್ ಮಷಿನ್‌ಗಳು ಈ ಮಳಿಗೆಗೆ ಫ್ಯೂಚರಿಸ್ಟಿಕ್ ಲುಕ್ ನೀಡಿವೆ.
ನಥಿಂಗ್ ಇಂಡಿಯಾ ಅಧ್ಯಕ್ಷ ಅಕಿಸ್ ಇವಾಂಜೆಲಿಡಿಸ್ ಹೇಳಿಕೆ: "ಭಾರತೀಯರು ವಿನ್ಯಾಸ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಈ ಮಳಿಗೆಯು ಕೇವಲ ವ್ಯಾಪಾರಕ್ಕಲ್ಲ, ನಮ್ಮ ಸಮುದಾಯದೊಂದಿಗೆ ನಂಬಿಕೆಯನ್ನು ಬೆಳೆಸಲು ನಿರ್ಮಿಸಲಾಗಿದೆ."
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ನಥಿಂಗ್ ಕೂಡ ಒಂದಾಗಿದ್ದು, ಈ ಮಳಿಗೆಯ ಮೂಲಕ ಕಂಪನಿಯು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.