ಲ್ಯಾಪ್‌ಟಾಪ್ ಕೊಳ್ಳುವ ಪ್ಲಾನ್ ಇದೆಯಾ? ಅಯ್ಯೋ, ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!!

ತಂತ್ರಜ್ಞಾನದ ಯುಗದಲ್ಲಿ ಲ್ಯಾಪ್‌ಟಾಪ್ ಕೇವಲ ಐಷಾರಾಮಿ ವಸ್ತುವಲ್ಲ, ಅದೊಂದು ಅಗತ್ಯದ ಶಿಕ್ಷಣ ಸಾಧನವಾಗಿದೆ. ಆದರೆ, ಇದೀಗ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ಒಂದು ಆಘಾತಕಾರಿ ಸುದ್ದಿಯಿದೆ. ಕಂಪ್ಯೂಟರ್ ಬಿಡಿಭಾಗಗಳ ಕೊರತೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಏರುಪೇರಿನಿಂದಾಗಿ ಲ್ಯಾಪ್‌ಟಾಪ್‌ಗಳ ಬೆಲೆ ಗಗನಕ್ಕೇರಿದ್ದು, ಇದು ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಹಾಕಲಿದೆ.

AI ಹವಾ, ಯುದ್ಧದ ಬಿಸಿ: ಅಗ್ಗದ ದರದಲ್ಲಿ ಲ್ಯಾಪ್‌ಟಾಪ್ ಸಿಗುವ ದಿನಗಳು ಮುಗಿದವೇ?
AI ಹವಾ, ಯುದ್ಧದ ಬಿಸಿ: ಅಗ್ಗದ ದರದಲ್ಲಿ ಲ್ಯಾಪ್‌ಟಾಪ್ ಸಿಗುವ ದಿನಗಳು ಮುಗಿದವೇ?

ಮಾರುಕಟ್ಟೆ ತಜ್ಞರ ಪ್ರಕಾರ, ಈ ಬೆಲೆ ಏರಿಕೆಗೆ ಹಲವು ಕಾರಣಗಳಿವೆ:

RAM ಬೆಲೆ ಏರಿಕೆ: ಕಂಪ್ಯೂಟರ್‌ಗಳ ಪ್ರಮುಖ ಭಾಗವಾದ DDR RAM ಬೆಲೆ ಈಗಾಗಲೇ 2.5 ರಿಂದ 3 ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಲ್ಯಾಪ್‌ಟಾಪ್‌ಗಳ ಬೆಲೆಯಲ್ಲಿ ಶೇ. 10ರಿಂದ 12ರಷ್ಟರ ಏರಿಕೆ ಕಂಡುಬಂದಿದೆ.

AI ತಂತ್ರಜ್ಞಾನದ ಪ್ರಭಾವ: ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯಗಳಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಇರುವುದರಿಂದ, ಮೆಮೊರಿ ಚಿಪ್‌ಗಳನ್ನು ಆ ಕಡೆಗೆ ತಿರುಗಿಸಲಾಗಿದೆ. ಇದರಿಂದ DRAM ಮತ್ತು NAND ಚಿಪ್‌ಗಳ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.

ಜಾಗತಿಕ ಯುದ್ಧ ಮತ್ತು ಪೂರೈಕೆ ಜಾಲ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣವು ಸರಕು ಸಾಗಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿಯಲ್ಲಿನ ವ್ಯತ್ಯಯದಿಂದಾಗಿ ಸೆಮಿಕಂಡಕ್ಟರ್ ಮತ್ತು ಇತರ ಬಿಡಿಭಾಗಗಳ ಆಮದು ವೆಚ್ಚ ಹೆಚ್ಚಾಗಿದೆ.

ಇಂಟೆಲ್ ಪ್ರೊಸೆಸರ್ ಕೊರತೆ: ಎಂಟ್ರಿ ಲೆವೆಲ್ ಪ್ರೊಸೆಸರ್‌ಗಳ ಲಭ್ಯತೆ ಕಡಿಮೆಯಾಗಿರುವುದು ಸಹ ಬೆಲೆ ಏರಿಕೆಗೆ ಕಾರಣವಾಗಿದೆ.

ಸಾಮಾನ್ಯ ಗ್ರಾಹಕರಿಗೆ ಎಂತಹ ಪರಿಣಾಮ?

ಹಿಂದೆ 30,000 ರಿಂದ 35,000 ರೂಪಾಯಿಗೆ ಸುಲಭವಾಗಿ ಸಿಗುತ್ತಿದ್ದ ಗುಣಮಟ್ಟದ ಲ್ಯಾಪ್‌ಟಾಪ್‌ಗಳು, ಈಗ 45,000 ರೂಪಾಯಿಯ ಗಡಿ ದಾಟಿವೆ. ಮಾರ್ಚ್ ತಿಂಗಳಲ್ಲೇ ಮತ್ತೊಮ್ಮೆ ಶೇ. 8-10 ರಷ್ಟರ ಬೆಲೆ ಏರಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹಾಗೂ ಸಾಮಾನ್ಯ ಜನರ ದೈನಂದಿನ ಕೆಲಸದ ಮೇಲೆ ದೊಡ್ಡ ಹೊಡೆತ ನೀಡಲಿದೆ.

2027ರವರೆಗೂ ಇಳಿಕೆ ಸಾಧ್ಯವಿಲ್ಲ!

ಮಾರುಕಟ್ಟೆ ಟ್ರ್ಯಾಕರ್‌ಗಳಾದ IDC ಮತ್ತು ಕೌಂಟರ್‌ಪಾಯಿಂಟ್‌ನ ವರದಿಗಳ ಪ್ರಕಾರ, ಈ ವರ್ಷ ಪಿಸಿ ಮಾರಾಟದಲ್ಲಿ ಶೇ. 8ರಷ್ಟು ಕುಸಿತವಾಗುವ ಸಾಧ್ಯತೆಯಿದೆ. ಮಾತ್ರವಲ್ಲದೆ, ಬೆಲೆಗಳು 2027ರ ದ್ವಿತೀಯಾರ್ಧದವರೆಗೂ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಲೆ ಏರಿಕೆಯಿಂದ ಪಾರಾಗಲು ಅನೇಕ ಕಂಪನಿಗಳು ಈಗಲೇ ಮುಂಗಡವಾಗಿ ಖರೀದಿ ಮಾಡುತ್ತಿವೆ. ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಬಿಡಿಭಾಗಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಿಟೇಲರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ವಿದ್ಯಾರ್ಥಿಗಳಿಗೆ ಮತ್ತು ಹೊಸದಾಗಿ ಕಂಪ್ಯೂಟರ್ ಕೊಳ್ಳಲು ಯೋಜಿಸುತ್ತಿರುವವರಿಗೆ ಈ ಸಮಯವು ಅತ್ಯಂತ ಕಠಿಣವಾಗಿದೆ. ಮುಂಬರುವ ದಿನಗಳಲ್ಲಿ ತಂತ್ರಜ್ಞಾನದ ಬೆಲೆಗಳು ಇನ್ನಷ್ಟು ದುಬಾರಿಯಾಗಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಬಜೆಟ್ ಅನ್ನು ಅದಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.