Apr 21, 2026 Languages : ಕನ್ನಡ | English

ಸರ್ಕಾರಿ ನೌಕರರಿಗೆ ಮತ್ತು ನಿವೃತ್ತರಿಗೆ ಗುಡ್ ನ್ಯೂಸ್: ಡಿಎ (DA) ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ ಅಂದ ಸುಪ್ರೀಂ ಕೋರ್ಟ್!!

ಸರ್ಕಾರಿ ಕೆಲಸ ಅಂದ್ರೆ ಅದರಲ್ಲಿರೋ ಸಂಬಳಕ್ಕಿಂತ ಹೆಚ್ಚಾಗಿ ಜನ ನಂಬೋದು ಅದರಲ್ಲಿ ಸಿಗೋ ಭದ್ರತೆ ಮತ್ತು ನಿವೃತ್ತಿಯ ನಂತರದ ಸೌಲಭ್ಯಗಳನ್ನು. ಅದರಲ್ಲೂ ಹಣದುಬ್ಬರ ಅಥವಾ ಬೆಲೆ ಏರಿಕೆ ಆದಾಗಲೆಲ್ಲಾ ಸರ್ಕಾರ ತನ್ನ ನೌಕರರಿಗೆ 'ತುಟ್ಟಿಭತ್ಯೆ' (DA) ನೀಡುತ್ತೆ. ಆದರೆ ಇಲ್ಲೊಂದು ಟ್ವಿಸ್ಟ್ ಇತ್ತು - ಕೆಲವು ರಾಜ್ಯ ಸರ್ಕಾರಗಳು ಕೆಲಸದಲ್ಲಿರೋರಿಗೆ ಒಂದು ರೇಟ್, ನಿವೃತ್ತರಾದವರಿಗೆ (Pensioners) ಇನ್ನೊಂದು ರೇಟ್ ಕೊಡ್ತಿದ್ವು. ಈಗ ಇದರ ಬಗ್ಗೆ ಸುಪ್ರೀಂ ಕೋರ್ಟ್ ಒಂದು ಸಖತ್ ತೀರ್ಪು ನೀಡಿದೆ. 

ಸರ್ಕಾರಿ ನಿವೃತ್ತ ನೌಕರರಿಗೆ ಸುಪ್ರೀಂ ಕೋರ್ಟ್‌ನಿಂದ ಸಿಹಿ ಸುದ್ದಿ;
ಸರ್ಕಾರಿ ನಿವೃತ್ತ ನೌಕರರಿಗೆ ಸುಪ್ರೀಂ ಕೋರ್ಟ್‌ನಿಂದ ಸಿಹಿ ಸುದ್ದಿ;

ಏನಿದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ?

ಇನ್ನು ಮುಂದೆ ರಾಜ್ಯ ಸರ್ಕಾರಗಳು ತುಟ್ಟಿಭತ್ಯೆ ನೀಡುವಾಗ ಹಾಲಿ ಸೇವೆಯಲ್ಲಿರೋ ನೌಕರರು ಮತ್ತು ನಿವೃತ್ತಿ ಹೊಂದಿರೋ ಪಿಂಚಣಿದಾರರ ನಡುವೆ ಯಾವುದೇ ವ್ಯತ್ಯಾಸ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಖಡಕ್ ಆಗಿ ಹೇಳಿದೆ ಎನ್ನಲಾಗಿದೆ. ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠವು ಈ ಆದೇಶ ನೀಡುವ ಮೂಲಕ ನಿವೃತ್ತ ನೌಕರರ 'ಸಮಾನತೆಯ ಹಕ್ಕನ್ನು' ಎತ್ತಿ ಹಿಡಿದಿದೆ.

ಸರಳವಾಗಿ ಹೇಳಬೇಕೆಂದರೆ, ಬೆಲೆ ಏರಿಕೆ ಅನ್ನೋದು ಕೆಲಸದಲ್ಲಿರೋರಿಗೆ ಮಾತ್ರ ಆಗಲ್ಲ, ನಿವೃತ್ತರಾದವರಿಗೂ ತಟ್ಟುತ್ತೆ ಅಲ್ವಾ? ಹಾಗಿದ್ದ ಮೇಲೆ ಡಿಎ ಕೊಡುವಾಗ ಇಬ್ಬರಿಗೂ ಒಂದೇ ತಕ್ಕಡಿಯಲ್ಲಿ ಅಳೆಯಬೇಕು ಅನ್ನೋದು ಕೋರ್ಟ್‌ನ ಅಭಿಪ್ರಾಯ.

ಪ್ರಕರಣ ಶುರುವಾಗಿದ್ದು ಎಲ್ಲಿ?

ಈ ಕಥೆ ಶುರುವಾಗಿದ್ದು ಕೇರಳದಲ್ಲಿ. ಅಲ್ಲಿನ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಕೆಲಸದಲ್ಲಿರೋ ನೌಕರರಿಗೆ ಶೇಕಡಾ 14ರಷ್ಟು ಡಿಎ ಹೆಚ್ಚಿಸಿತ್ತು. ಆದರೆ ಪಾಪ, ನಿವೃತ್ತರಾದವರಿಗೆ ಮಾತ್ರ ಶೇಕಡಾ 11ರಷ್ಟು ಮಾತ್ರ 'ತುಟ್ಟಿ ಪರಿಹಾರ' (DR) ನೀಡಿತ್ತು. ಅಂದ್ರೆ ಇಲ್ಲಿ ನೇರವಾಗಿಯೇ 3 ಪರ್ಸೆಂಟ್ ವ್ಯತ್ಯಾಸ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ನಿವೃತ್ತ ನೌಕರರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಸುಪ್ರೀಂ ಕೋರ್ಟ್ ಕೇರಳ ಸರ್ಕಾರದ ಈ ನಡೆಯನ್ನು 'ಅಸಂವಿಧಾನಿಕ' ಅಂತ ಕರೆದಿದೆ.

ಕೋರ್ಟ್ ಹೇಳಿದ್ದೇನು?

ಕೋರ್ಟ್ ತನ್ನ ತೀರ್ಪಿನಲ್ಲಿ ಕೆಲವು ಗಂಭೀರ ಅಂಶಗಳನ್ನು ಉಲ್ಲೇಖಿಸಿದೆ. 

ತಾರತಮ್ಯ ಮಾಡುವಂತಿಲ್ಲ: ಕೆಲಸದಲ್ಲಿರೋ ನೌಕರರಿಗೆ ಒಂದು ದರ, ಪಿಂಚಣಿದಾರರಿಗೆ ಇನ್ನೊಂದು ದರ ನಿಗದಿ ಮಾಡೋದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗುತ್ತದೆ.

ಹಣದುಬ್ಬರ ಎಲ್ಲರಿಗೂ ಒಂದೇ: ಬೆಲೆ ಏರಿಕೆ ಅಥವಾ ಹಣದುಬ್ಬರದ ಹೊಡೆತ ಎಲ್ಲರಿಗೂ ಸಮನಾಗಿರುತ್ತದೆ. ಹೀಗಿರುವಾಗ ಸರ್ಕಾರಿ ನೌಕರ ಮತ್ತು ಪಿಂಚಣಿದಾರರ ನಡುವೆ ವ್ಯತ್ಯಾಸ ಮಾಡೋಕೆ ಯಾವುದೇ ತಾರ್ಕಿಕ ಕಾರಣಗಳಿಲ್ಲ.

ಅರ್ಹತೆ: ನಿವೃತ್ತ ನೌಕರರು ಕೇವಲ ಪಿಂಚಣಿಗೆ ಮಾತ್ರವಲ್ಲ, ಕಾಲಕಾಲಕ್ಕೆ ಪರಿಷ್ಕರಣೆಯಾಗುವ ತುಟ್ಟಿಭತ್ಯೆ ಪಡೆಯುವುದಕ್ಕೂ ಪೂರ್ಣ ಅರ್ಹರಾಗಿರುತ್ತಾರೆ.

ಇದರಿಂದ ಆಗೋ ಲಾಭ ಏನು?

ಈ ತೀರ್ಪಿನಿಂದಾಗಿ ಇಡೀ ದೇಶದ ಲಕ್ಷಾಂತರ ಸರ್ಕಾರಿ ನಿವೃತ್ತ ನೌಕರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ರಾಜ್ಯ ಸರ್ಕಾರಗಳು ತಮ್ಮ ಇಚ್ಛೆಯಂತೆ ಪಿಂಚಣಿದಾರರ ಡಿಎ ಕಡಿತಗೊಳಿಸಲು ಅಥವಾ ಕಡಿಮೆ ಮಾಡಲು ಇನ್ನು ಮುಂದೆ ಸಾಧ್ಯವಿಲ್ಲ. "ಕೆಲಸ ಮುಗಿಸಿ ಮನೆಗೆ ಹೋದ ಮೇಲೆ ನಮ್ಮನ್ನು ಕೇಳೋರಿಲ್ಲ" ಅಂತ ಅನ್ಕೊಳ್ತಿದ್ದ ಹಿರಿಯ ಜೀವಗಳಿಗೆ ಸುಪ್ರೀಂ ಕೋರ್ಟ್ ದೊಡ್ಡ ಆಸರೆಯಾಗಿದೆ.

ಹಿರಿಯ ನಾಗರಿಕರು ದೇಶದ ಆಸ್ತಿ. ಜೀವನದ ಅಮೂಲ್ಯ ಸಮಯವನ್ನು ಸರ್ಕಾರಿ ಸೇವೆಯಲ್ಲಿ ಕಳೆದ ಅವರಿಗೆ ನಿವೃತ್ತಿಯ ನಂತರ ಗೌರವಯುತ ಜೀವನ ನಡೆಸಲು ಬೇಕಾದ ಸೌಲಭ್ಯ ಕೊಡುವುದು ಸರ್ಕಾರದ ಜವಾಬ್ದಾರಿ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ನಿಜಕ್ಕೂ ಸ್ವಾಗತಾರ್ಹ. ಕೇವಲ ಹಣ ಉಳಿಸುವ ಉದ್ದೇಶದಿಂದ ಪಿಂಚಣಿದಾರರ ಹೊಟ್ಟೆ ಮೇಲೆ ಹೊಡೆಯುವ ಸರ್ಕಾರಗಳಿಗೆ ಇದೊಂದು ಸರಿಯಾದ ಪಾಠ ಎಂದು ಕೇಳಿ ಬರುತ್ತಿದೆ. 

ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಪರಿಚಯದಲ್ಲಿ ನಿವೃತ್ತ ಸರ್ಕಾರಿ ನೌಕರರಿದ್ದರೆ ಈ ಲೇಖನವನ್ನು ಅವರಿಗೆ ಶೇರ್ ಮಾಡಿ, ಅವರಿಗೆ ಧೈರ್ಯ ತುಂಬಿ.


Latest News