Feb 16, 2026 Languages : ಕನ್ನಡ | English

ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಎಎಸ್ಐ ಲಂಚಾವತಾರ – ವಿಡಿಯೋ ವೈರಲ್

ಹುಬ್ಬಳ್ಳಿಯ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿ ಜನರಲ್ಲಿ ಶಿಸ್ತು ಮೂಡಿಸಬೇಕಾದ ಪೊಲೀಸ್ ಅಧಿಕಾರಿಯೇ ಲಂಚದ ಆಸೆಗೆ ಬಿದ್ದು ಇಲಾಖೆಯ ಮಾನವನ್ನು ಹರಾಜು ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬೈಕ್ ಸವಾರನೊಬ್ಬನಿಂದ ಬಹಿರಂಗವಾಗಿಯೇ ಲಂಚ ಪಡೆಯುತ್ತಿದ್ದ ಟ್ರಾಫಿಕ್ ಎಎಸ್ಐ (ASI) ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಲಂಚ ಪಡೆದ ಎಎಸ್ಐ
ಲಂಚ ಪಡೆದ ಎಎಸ್ಐ

ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಸ್ಕೂಲ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಶಂಕರ ಲಮಾಣಿ, ಬೈಕ್ ಸವಾರನೊಬ್ಬನನ್ನು ತಡೆದು ನಿಲ್ಲಿಸಿದ್ದಾರೆ. ಸವಾರನು ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ನೆಪವೊಡ್ಡಿ ದಂಡ ಹಾಕಲು ಮುಂದಾದ ಅಧಿಕಾರಿ, ಸವಾರನಿಗೆ ಭೀತಿ ಹುಟ್ಟಿಸಿದ್ದಾರೆ. "ಒಂದೊಮ್ಮೆ ಈ ಉಲ್ಲಂಘನೆಗೆ ಅಧಿಕೃತವಾಗಿ ಕೇಸ್ ದಾಖಲಿಸಿ ರಶೀದಿ ನೀಡಿದರೆ 6 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ" ಎಂದು ಸವಾರನಿಗೆ ಧಮ್ಕಿ ಹಾಕಿದ್ದಾರೆ.

ದಂಡದ ಮೊತ್ತ ಕೇಳಿ ಕಂಗಾಲಾದ ಸವಾರನ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಎಎಸ್ಐ ಶಂಕರ ಲಮಾಣಿ, "ಕಡಿಮೆಯಲ್ಲಿ ಮುಗಿಸೋಣ" ಎಂದು ಲಂಚದ ಆಮಿಷ ಒಡ್ಡಿದ್ದಾರೆ. ಅಂತಿಮವಾಗಿ 500 ರೂಪಾಯಿ ಕೊಟ್ಟರೆ ಕೇಸ್ ಹಾಕದೆ ಬಿಡುವುದಾಗಿ ಹೇಳಿದ್ದಾರೆ. ಸವಾರ 500 ರೂಪಾಯಿ ನೀಡುತ್ತಿದ್ದಂತೆ ಯಾವುದೇ ರಶೀದಿ ನೀಡದೆ ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ. ಒಂದು ವೇಳೆ ಸವಾರ ರಶೀದಿ ಕೇಳಿದರೆ, "ರಶೀದಿ ಬೇಕೆಂದರೆ 6 ಸಾವಿರ ಪಾವತಿಸು" ಎಂದು ಮತ್ತೆ ಹೆದರಿಸಿದ್ದಾರೆ.

ಪೊಲೀಸ್ ಅಧಿಕಾರಿ ಲಂಚ ಪಡೆಯುತ್ತಿದ್ದ ಸಂಪೂರ್ಣ ದೃಶ್ಯವನ್ನು ಸದ್ದಿಲ್ಲದೆ ಚಿತ್ರೀಕರಿಸಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ರಕ್ಷಕರೇ ಭಕ್ಷಕರಾದರೆ ಹೇಗೆ?" ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬೈಕ್ ಸವಾರರಿಂದ ಹಣ ವಸೂಲಿ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಇಂತಹ ಅಧಿಕಾರಿಗಳಿಂದ ದಕ್ಷ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಸದ್ಯ ಲಂಚಾವತಾರದ ವಿಡಿಯೋ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಲುಪಿದ್ದು, ಎಎಸ್ಐ ಶಂಕರ ಲಮಾಣಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ. ಟ್ರಾಫಿಕ್ ನಿಯಮಗಳ ಹೆಸರಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುವ ಇಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಹುಬ್ಬಳ್ಳಿ ಜನರ ಒತ್ತಾಯವಾಗಿದೆ. ಲಂಚದ ಆಸೆಗೆ ಬಿದ್ದ ಪೊಲೀಸ್ ಅಧಿಕಾರಿ ಶಂಕರ ಲಮಾಣಿ, 500 ರೂಪಾಯಿಗಾಗಿ ತನ್ನ ಘನತೆ ಹಾಗೂ ಇಲಾಖೆಯ ಗೌರವವನ್ನು ಬೀದಿಪಾಲಾಗಿದೆ.

Latest News