ಸಿನಿಮಾ ರಂಗದಲ್ಲಿ ನಮಗೆ ಕಾಣಿಸುವುದು ಬರೀ ಗ್ಲಾಮರ್, ದುಡ್ಡು ಮತ್ತು ಪ್ರಸಿದ್ಧಿ ಮಾತ್ರ. ಆದರೆ ಆ ಬೆಳ್ಳಿತೆರೆಯ ಹಿಂದೆ ಅದೆಷ್ಟೋ ಜನರ ಕಣ್ಣೀರಿನ ಕಥೆಗಳು ಅಡಗಿರುತ್ತವೆ. ಬಾಲಿವುಡ್‌ನಲ್ಲಿ ‘ಆಶಿಕಿ 2’, ‘ಮರ್ಡರ್ 2’, ‘ವೋ ಲಮ್ಹೆ’ ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀವೆಲ್ಲಾ ನೋಡಿರುತ್ತೀರಿ. ಈ ಸಿನಿಮಾಗಳ ಕಥೆ ಮತ್ತು ಹಾಡುಗಳು ಇಂದಿಗೂ ಜನರ ಹೃದಯದಲ್ಲಿವೆ. ಆದರೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ ಈ ಪ್ರೇಮಕಥೆಗಳನ್ನು ಬರೆದಿದ್ದು, ತನ್ನ ಜೀವನದಲ್ಲಿ ಬರೀ ಅವಮಾನ ಮತ್ತು ನರಕವನ್ನೇ ಕಂಡ ಒಬ್ಬ ಮಹಿಳೆ ಎಂದರೆ ನೀವು ನಂಬುತ್ತೀರಾ? ಹೌದು, ಶಾಲೆಗಿಂತ ಹೆಚ್ಚಾಗಿ ಬೀದಿಯ ಕಷ್ಟಗಳನ್ನೇ ನೋಡಿ ಬೆಳೆದ, ಒಂದು ಕಾಲದಲ್ಲಿ ಕಾಲ್ ಗರ್ಲ್ ಹಾಗೂ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದ ಹುಡುಗಿ ಇಂದು ಬಾಲಿವುಡ್‌ನ ಮೋಸ್ಟ್ ವಾಂಡೆಡ್ ಬರಹಗಾರ್ತಿಯಾಗಿ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದಾರೆ!
ಯಾರು ಈ ಬರಹಗಾರ್ತಿ? ಇಲ್ಲಿದೆ ನೋಡಿ ಹಿನ್ನೆಲೆ!
ಜೀವನದಲ್ಲಿ ತಾನು ಅನುಭವಿಸಿದ ಪ್ರತಿಯೊಂದು ನೋವು, ಅವಮಾನ ಮತ್ತು ಸವಾಲುಗಳನ್ನು ಕಾಗದದ ಮೇಲೆ ಬರೆದು ಇಡೀ ದೇಶದ ಜನರ ಹೃದಯ ಮುಟ್ಟಿದ ಈ ಧೀಮಂತ ಬರಹಗಾರ್ತಿಯ ಹೆಸರು ಶಗುಫ್ತಾ ರಫೀಕ್ (Shagufta Rafique). ಇವರ ಅಸಲಿ ಜೀವನದ ಕಥೆ ಯಾವುದೇ ಕಮರ್ಷಿಯಲ್ ಸಿನಿಮಾಗೂ ಕಮ್ಮಿ ಇಲ್ಲ. ಶಗುಫ್ತಾ ಅವರನ್ನು ಅನ್ವರಿ ಬೇಗಂ ಎಂಬುವವರು ದತ್ತು ಪಡೆದುಕೊಂಡಿದ್ದರು. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿದ್ದ ಇವರ ಕುಟುಂಬ, ಪರಿಸ್ಥಿತಿಯ ಏರುಪೇರಿನಿಂದಾಗಿ ಇದ್ದಕ್ಕಿದ್ದಂತೆ ತೀವ್ರ ಬಡತನಕ್ಕೆ ಸಿಲುಕಿತು. ಕೇವಲ 7ನೇ ತರಗತಿಯಲ್ಲೇ ಫೇಲ್ ಆಗಿದ್ದ ಶಗುಫ್ತಾಗೆ 17 ವರ್ಷ ತುಂಬುವಷ್ಟರಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಸಾಕಿ ಬೆಳೆಸಿದ ತಾಯಿ ಬೀದಿಗಳಲ್ಲಿ ಭಿಕ್ಷೆ ಬೇಡುವಂತಾಯಿತು.
ತಾಯಿಗಾಗಿ ರೆಡ್ ಲೈಟ್ ಏರಿಯಾ ಸೇರಿದ 17ರ ಹುಡುಗಿ!
ಕಣ್ಣೆದುರೇ ಹೆತ್ತ ತಾಯಿ ಭಿಕ್ಷೆ ಬೇಡುವುದನ್ನು ನೋಡಿ ತಡೆದುಕೊಳ್ಳಲಾಗದ ಶಗುಫ್ತಾ, ತಾಯಿಯನ್ನು ನೋಡಿಕೊಳ್ಳಲು ತಾನೇ ದುಡಿಯಲು ನಿರ್ಧರಿಸಿದಳು. ಆದರೆ ಓದೂ ಇಲ್ಲ, ಕೈಯಲ್ಲಿ ಕೆಲಸವೂ ಇಲ್ಲದ ಕಾರಣ ಆಕೆಗೆ ಬೇರೆ ದಾರಿ ಕಾಣಲಿಲ್ಲ. ಕೊನೆಗೆ ಅನಿವಾರ್ಯವಾಗಿ ಶಾಲೆಯನ್ನು ಅರ್ಧಕ್ಕೆ ಬಿಟ್ಟು ಮುಂಬೈನ ಭೀಕರ ರೆಡ್ ಲೈಟ್ ಏರಿಯಾ ಪ್ರವೇಶಿಸಬೇಕಾಯಿತು. ಅಲ್ಲಿ ಬದುಕಿನ ಹಸಿವಿಗಾಗಿ ಮೊದಲಿಗೆ ‘ಕಾಲ್ ಗರ್ಲ್’ ಆಗಿ ಕೆಲಸ ಮಾಡಲು ಶುರು ಮಾಡಿದರು. ಆದಾದ ನಂತರ ಸ್ವಲ್ಪ ಹಣ ಸಂಪಾದನೆಗಾಗಿ ದುಬೈಗೆ ತೆರಳಿ ಅಲ್ಲಿ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡಿದರು. ದುಬೈನಲ್ಲಿದ್ದಾಗ ಇವರ ನೃತ್ಯ ಮತ್ತು ಸೌಂದರ್ಯಕ್ಕೆ ಮರುಳಾದ 45 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಶಗುಫ್ತಾಗೆ ಮದುವೆಯ ಪ್ರಪೋಸಲ್ ಕೂಡ ಇಟ್ಟಿದ್ದರಂತೆ.
ಮಹೇಶ್ ಭಟ್ ಭೇಟಿ ಮತ್ತು ಬದಲಾದ ಲೈಫ್!
ಶಗುಫ್ತಾ ರಫೀಕ್ ಅವರ ಕರಾಳ ಬದುಕಿಗೆ ಅಸಲಿ ತಿರುವು ಸಿಕ್ಕಿದ್ದು 2002 ರಲ್ಲಿ. ಆಗ ಅವರಿಗೆ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಪರಿಚಯವಾಯಿತು. ಶಗುಫ್ತಾ ಅವರ ಬದುಕಿನ ಕಥೆ ಮತ್ತು ಅವರಲ್ಲಿದ್ದ ಬರವಣಿಗೆಯ ಪ್ರತಿಭೆಯನ್ನು ಗುರುತಿಸಿದ ಮಹೇಶ್ ಭಟ್, ತಮ್ಮ ಸಿನಿಮಾಗೆ ಕಥೆ ಬರೆಯುವ ಬಿಗ್ ಆಫರ್ ನೀಡಿದರು.
ಆ ದಿನಗಳನ್ನು ನೆನಪಿಸಿಕೊಂಡ ಶಗುಫ್ತಾ, "ನಾನು ಮಹೇಶ್ ಭಟ್ ಅವರ ‘ವೋ ಲಮ್ಹೆ’ ಸಿನಿಮಾಗೆ ಸೈನ್ ಮಾಡುವ ಕೇವಲ ಎರಡು ದಿನಗಳ ಮುಂಚೆಯೂ ಬಾರ್‌ನಲ್ಲಿ ನೃತ್ಯ ಮಾಡುತ್ತಿದ್ದೆ! ಭಟ್ ಸಾಹೇಬರು ನನಗೆ ಫೋನ್ ಮಾಡಿ ಆಫರ್ ಕೊಟ್ಟಾಗ, ನಾನು ಅವರಿಗೆ ನೇರವಾಗಿಯೇ ಹೇಳಿದ್ದೆ- ಸರ್, ನನಗೆ ನನ್ನ ಮನೆ ನಡೆಸಲು ಹಣ ಬೇಕು. ಹಾಗಾಗಿ ನಾನು ಬಾರ್ ಡ್ಯಾನ್ಸ್ ಕೆಲಸವನ್ನು ಬಿಡಲು ಸಾಧ್ಯವಿಲ್ಲ ಎಂದಿದ್ದೆ" ಎಂದು ಹಂಚಿಕೊಂಡಿದ್ದಾರೆ. ನಂತರ ಇವರ ಇದೇ ರಿಯಲ್ ಲೈಫ್ ದೃಶ್ಯವನ್ನು ನಾವು ‘ಆಶಿಕಿ 2’ ಸಿನಿಮಾದಲ್ಲೂ ನೋಡಬಹುದು. ‘ಆಶಿಕಿ 2’ ಸಿನಿಮಾದ ನಾಯಕಿ ಆರೋಹಿ ಅನುಭವಿಸುವ ಕಷ್ಟಗಳಲ್ಲಿ ಶೇಕಡಾ 30 ರಿಂದ 40 ರಷ್ಟು ಶಗುಫ್ತಾ ಅವರ ನಿಜ ಜೀವನದ ಕಥೆಯೇ ಆಗಿದೆ!
ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳ ಸುಲ್ತಾನಿ!
ಬಾರ್ ಡ್ಯಾನ್ಸರ್ ಆಗಿದ್ದ ಶಗುಫ್ತಾ ಒಮ್ಮೆ ಪೆನ್ ಹಿಡಿದು ಕಥೆ ಬರೆಯಲು ಕೂತಾಗ ಬಾಲಿವುಡ್ ಚಿತ್ರರಂಗವೇ ಬೆಚ್ಚಿಬೀಳುವಂತಹ ಕಥೆಗಳು ಸೃಷ್ಟಿಯಾದವು. ಹಿಂದಿ ಚಲನಚಿತ್ರೋದ್ಯಮದಲ್ಲಿ ಇವರು ಬರೆದ ‘ಆಶಿಕಿ 2’, ‘ವೋ ಲಮ್ಹೆ’, ‘ಮರ್ಡರ್ 2’, ‘ಜನ್ನತ್ 2’, ‘ರಾಜ್ 2’ ಮತ್ತು ‘ಆವಾರಪನ್’ ನಂತಹ ಸಿನಿಮಾಗಳು ಬಾಕ್ಸ್ ಆಫೀಸ್ ಧೂಳೀಪಟ ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆದವು. ಒಂದು ಕಾಲದಲ್ಲಿ ಸಮಾಜದಿಂದ ಅವಮಾನ, ಕೀಳು ನೋಟ ಎದುರಿಸಿದ್ದ ಅದೇ ಶಗುಫ್ತಾ ರಫೀಕ್, ಇಂದು ಬಾಲಿವುಡ್ ಉದ್ಯಮದಲ್ಲೇ ಅತ್ಯಂತ ಯಶಸ್ವಿ, ಗೌರವಾನ್ವಿತ ಮತ್ತು ಅತಿ ಹೆಚ್ಚು ಬೇಡಿಕೆ ಇರುವ ಸ್ಟಾರ್ ರೈಟರ್ ಆಗಿ ಮೆರೆಯುತ್ತಿದ್ದಾರೆ. ಇವರ ಈ ಹೋರಾಟದ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ!