Apr 26, 2026 Languages : ಕನ್ನಡ | English

"ಹೊಟ್ಟೆಪಾಡಿನ ಗತಿಯೇನು?" ಶೂಟಿಂಗ್ ಇಲ್ಲದೆ ಬೀದಿಗೆ ಬಿದ್ದರಾ ಕನ್ನಡ ತಂತ್ರಜ್ಞರು?

ಒಂದಾನೊಂದು ಕಾಲವಿತ್ತು, ವಾರಕ್ಕೆ ಮೂರ್ನಾಲ್ಕು ಸಿನಿಮಾಗಳು ಅದ್ದೂರಿಯಾಗಿ ಮುಹೂರ್ತ ಮಾಡುತ್ತಿದ್ದವು. 'ಕೆಜಿಎಫ್‌', 'ಕಾಂತಾರ'ದಂತಹ ಸಿನಿಮಾಗಳನ್ನ ನೋಡಿ ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡಿತ್ತು. ಆದರೆ, ಇವತ್ತು ಅದೇ ಸ್ಯಾಂಡಲ್‌ವುಡ್‌ನಲ್ಲಿ ಸ್ಮಶಾನ ಮೌನ ಆವರಿಸಿದಂತಿದೆ. ಹೊಸ ಸಿನಿಮಾಗಳ ಘೋಷಣೆಯೇ ಆಗ್ತಿಲ್ಲ, ಇರೋ ಸಿನಿಮಾಗಳು ಮುಗಿಯುತ್ತಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ.

ಹೊಸ ಸಿನಿಮಾಗಳಿಲ್ಲದೆ ಕಂಗಾಲಾದ ಸ್ಯಾಂಡಲ್‌ವುಡ್ ಕಾರ್ಮಿಕರು
ಹೊಸ ಸಿನಿಮಾಗಳಿಲ್ಲದೆ ಕಂಗಾಲಾದ ಸ್ಯಾಂಡಲ್‌ವುಡ್ ಕಾರ್ಮಿಕರು

ಅಂಕಿಅಂಶಗಳೇ ಹೇಳ್ತಿವೆ ಆತಂಕದ ಕಥೆ

ಹಿರಿಯ ಪ್ರಚಾರಕರ್ತರು ಹೇಳುವ ಪ್ರಕಾರ, ಕಳೆದ ವರ್ಷ ಏಪ್ರಿಲ್ ವೇಳೆಗೆ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳು ಸೆಟ್ಟೇರಿದ್ದವು. ಆದರೆ ಈ ವರ್ಷ ಆ ಸಂಖ್ಯೆ ಕೇವಲ 18ಕ್ಕೆ ಬಂದು ನಿಂತಿದೆ! ಅಂದ್ರೆ ಅರ್ಧಕ್ಕಿಂತಲೂ ಕಡಿಮೆ. ಪ್ರಚಾರಕರ್ತ ಹರೀಶ್ ಅರಸ್ ಅವರಂತೂ, "ಹೋದ ವರ್ಷ 20 ಸಿನಿಮಾಗಳಿಗೆ ಕೆಲಸ ಮಾಡಿದ್ರೆ, ಈ ವರ್ಷ ಕೇವಲ 3 ಸಿನಿಮಾ ಸಿಕ್ಕಿದೆ" ಅಂತ ಬೇಸರ ವ್ಯಕ್ತಪಡಿಸ್ತಾರೆ.

ಸಿನಿಮಾ ಯಾಕೆ ಕಮ್ಮಿ ಆಗ್ತಿದೆ? ಅಸಲಿ ಕಾರಣಗಳೇನು?

ಕನ್ನಡ ಚಿತ್ರರಂಗದ ಈ ಕುಸಿತಕ್ಕೆ ತಜ್ಞರು ಕೆಲವು ಮುಖ್ಯ ಕಾರಣಗಳನ್ನು ಕೊಟ್ಟಿದ್ದಾರೆ:

ಪ್ರೇಕ್ಷಕ ಬದಲಾಗಿದ್ದಾನೆ: ಇವತ್ತಿನ ಜನರಿಗೆ ಮೊಬೈಲ್‌ನಲ್ಲೇ ವಿಶ್ವದ ಬೆಸ್ಟ್ ಸಿನಿಮಾಗಳು ಸಿಗುತ್ತಿವೆ. ಹೀಗಿರುವಾಗ ಚಿತ್ರಮಂದಿರಕ್ಕೆ ಬಂದು ಹಳಸಲು ಕಥೆ ನೋಡಲು ಯಾರೂ ರೆಡಿಯಿಲ್ಲ. ಹೊಸತನವಿಲ್ಲದ ಕಥೆಗಳಿಗೆ ಜನ ಸೊಪ್ಪು ಹಾಕುತ್ತಿಲ್ಲ.

ಹಿಂಸೆಯ ವೈಭವೀಕರಣ: ಸ್ಟಾರ್ ಸಿನಿಮಾಗಳಲ್ಲಿ ಕೇವಲ ರಕ್ತಪಾತ, ಹಿಂಸೆ ಜಾಸ್ತಿ ಆಯ್ತು ಅಂತ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್‌ನಿಂದ ದೂರ ಆಗ್ತಿದ್ದಾರೆ. ಕುಟುಂಬದವರೆಲ್ಲಾ ಸೇರಿ ನೋಡೋವಂತಹ ಸಿನಿಮಾಗಳು ಬರ್ತಿಲ್ಲ ಅನ್ನೋದು ನಟ ಸುಂದರ್‌ರಾಜ್ ಅವರ ಅಭಿಪ್ರಾಯ.

ಸಬ್ಸಿಡಿ ವದಂತಿ: 2025ರ ನಂತರ ಸರ್ಕಾರ ಸಬ್ಸಿಡಿ (ಸಹಾಯಧನ) ನಿಲ್ಲಿಸುತ್ತೆ ಅನ್ನೋ ಮಾತು ಕೇಳಿಬರ್ತಿದೆ. ಸಣ್ಣ ಬಜೆಟ್ ಸಿನಿಮಾಗಳಿಗೆ ಇದೇ ದೊಡ್ಡ ಆಧಾರವಾಗಿತ್ತು. ಈಗ ಅದು ಹೋಗುತ್ತೆ ಅಂದ ತಕ್ಷಣ ನಿರ್ಮಾಪಕರು ಬಂಡವಾಳ ಹಾಕೋಕೆ ಹೆದರುತ್ತಿದ್ದಾರೆ.

ಪ್ಯಾನ್ ಇಂಡಿಯಾ ಕ್ರೇಜ್: ಎಲ್ಲರೂ ದೊಡ್ಡದಾಗಿ ಸಿನಿಮಾ ಮಾಡಿ ಹಣ ಮಾಡೋಕೆ ಹೋಗ್ತಿದ್ದಾರೆ. ಇದರಿಂದ ನಮ್ಮ ಮಣ್ಣಿನ ಸೊಗಡಿನ ಸಣ್ಣ ಸಣ್ಣ ಸಿನಿಮಾಗಳು ಕಣ್ಮರೆಯಾಗುತ್ತಿವೆ.

ಕೆಲಸವಿಲ್ಲದೆ ಕಂಗಾಲಾದ ಕಾರ್ಮಿಕರು

ಸಿನಿಮಾಗಳ ಸಂಖ್ಯೆ ಕುಸಿತವಾಗಿದ್ದರಿಂದ ಹೊಡೆತ ಬಿದ್ದಿರೋದು ಸ್ಟಾರ್ ನಟರಿಗಲ್ಲ, ಬದಲಾಗಿ ಪ್ರತಿದಿನ ದುಡಿಯೋ ಕಾರ್ಮಿಕರಿಗೆ ಮತ್ತು ತಾಂತ್ರಿಕ ವರ್ಗಕ್ಕೆ. ದೊಡ್ಡ ಸಿನಿಮಾಗಳ ಶೂಟಿಂಗ್ ಹೈದರಾಬಾದ್ ಅಥವಾ ವಿದೇಶಗಳಲ್ಲಿ ನಡೆಯುತ್ತೆ. ನಮ್ಮೂರಿನ ತಂತ್ರಜ್ಞರಿಗೆ ಕೆಲಸ ಕೊಡೋದು ಸಣ್ಣ ಬಜೆಟ್ ಸಿನಿಮಾಗಳೇ. ಈಗ ಅವುಗಳೇ ನಿಂತು ಹೋದ್ರೆ ಅವರ ಹೊಟ್ಟೆಪಾಡಿನ ಗತಿಯೇನು ಅನ್ನೋದು ದೊಡ್ಡ ಪ್ರಶ್ನೆ.

ಚಿತ್ರರಂಗ ಅಂದ್ರೆ ಕೇವಲ ನಾಲ್ಕು ವರ್ಷಕ್ಕೊಮ್ಮೆ ಬರೋ ಸ್ಟಾರ್ ಸಿನಿಮಾಗಳಲ್ಲ. ಸಣ್ಣ ಸಣ್ಣ ಒಳ್ಳೆ ಕಥೆಯಿರೋ ಸಿನಿಮಾಗಳು ಪ್ರತಿ ವಾರ ಬರಬೇಕು. ಸರ್ಕಾರ ಕೂಡ ಸಹಾಯಧನ ನಿಲ್ಲಿಸದೆ ನಿರ್ಮಾಪಕರಿಗೆ ಬೆಂಬಲ ನೀಡಬೇಕು. ಮಲಯಾಳಂ ಚಿತ್ರರಂಗದಂತೆ ಕಡಿಮೆ ಬಜೆಟ್‌ನಲ್ಲಿ ಅದ್ಭುತ ಕಥೆಗಳನ್ನ ಹೇಳೋ ಕಲೆ ನಮಗೆ ಸಿದ್ಧಿಸಬೇಕಿದೆ.