Apr 17, 2026 Languages : ಕನ್ನಡ | English

ಹನುಮಂತನ ಕೃಪೆಗಾಗಿ ಸಜ್ಜಾದ ರಿಷಬ್ ಶೆಟ್ಟಿ - ಭಜನೆ ಮಾಡುತ್ತಲೇ ಸದ್ದಿಲ್ಲದೆ ಶುರುವಾಯ್ತು 'ಜೈ ಹನುಮಾನ್' ಪ್ರಚಾರ!!

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಪ್ಪಟ ಮಣ್ಣಿನ ಮಗ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎಷ್ಟೇ ದೊಡ್ಡ ಮಟ್ಟದ ಸ್ಟಾರ್ ಆಗಿದ್ದರೂ, ತಮ್ಮ ಹಿರಿಯರ ಸಂಪ್ರದಾಯ ಮತ್ತು ಮಣ್ಣಿನ ಸಂಸ್ಕೃತಿಯನ್ನು ಅವರು ಮರೆತಿಲ್ಲ. ಇತ್ತೀಚೆಗೆ ಬೈಂದೂರಿನ ಕೆರಾಡಿಯಲ್ಲಿರುವ ತಮ್ಮ ಹಿರಿಯರ ಮನೆಯಲ್ಲಿ ರಿಷಬ್, ಹಿರಿಯರು ಹರಕೆ ಮಾಡಿಕೊಂಡಿದ್ದ ಕುಣಿತ ಭಜನೆ ಹಾಗೂ ಯಕ್ಷಗಾನ ಪ್ರದರ್ಶನವನ್ನು ಬಹಳ ಸಂಭ್ರಮದಿಂದ ನೆರವೇರಿಸಿದ್ದಾರೆ.

ಹರಕೆ ತೀರಿಸಿದ 'ಡಿವೈನ್ ಸ್ಟಾರ್ʼ
ಹರಕೆ ತೀರಿಸಿದ 'ಡಿವೈನ್ ಸ್ಟಾರ್ʼ

ಹರಕೆ ತೀರಿಸಿದ ಸಂಭ್ರಮ
ಸಾಮಾನ್ಯವಾಗಿ ತುಳುನಾಡು ಮತ್ತು ಕರಾವಳಿ ಭಾಗದಲ್ಲಿ ದೈವ-ದೇವರ ಹರಕೆಗೆ ಬಹಳ ಮಹತ್ವವಿದೆ. ರಿಷಬ್ ಅವರ ಮನೆಯ ಹಿರಿಯರು ಈ ಹಿಂದೆಯೇ ಈ ಹರಕೆಯನ್ನು ಹೇಳಿಕೊಂಡಿದ್ದರು. ನಿಜವನ್ನ ಹೇಳಬೇಕೆಂದರೆ, ಈ ಕಾರ್ಯಕ್ರಮ ಕಳೆದ ವರ್ಷ ಮೇ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ ಆ ಸಮಯದಲ್ಲಿ ರಿಷಬ್ ಅವರು 'ಕಾಂತಾರ' ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಅದನ್ನು ಮುಂದೂಡಲಾಗಿತ್ತು. ಈಗ ಕೆಲಸದ ನಡುವೆ ಬಿಡುವು ಮಾಡಿಕೊಂಡು, ಊರಿಗೆ ತೆರಳಿ ಹರಕೆಯನ್ನು ಭಕ್ತಿಯಿಂದ ಪೂರೈಸಿದ್ದಾರೆ.

ಮನೆಯ ಮಗನಂತೆ ಭಜನಾ ತಂಡದ ಜೊತೆ ಕುಣಿದ ರಿಷಬ್ ಶೆಟ್ಟಿ!
ಈ ಕಾರ್ಯಕ್ರಮದ ಅಸಲಿ ಹೈಲೈಟ್ ಅಂದ್ರೆ ಅದು ನಮ್ಮ ರಿಷಬ್ ಶೆಟ್ಟಿ ಅವರ ಭಜನೆ! ಕೆರಾಡಿಯ ತಮ್ಮ ಮನೆಯ ಅಂಗಳದಲ್ಲಿ ನಡೆದ ಕುಣಿತ ಭಜನೆಯಲ್ಲಿ, ರಿಷಬ್ ಅವರು ತಂಡದವರ ಜೊತೆ ಸೇರಿ ಸಖತ್ ಆಗಿ ಹೆಜ್ಜೆ ಹಾಕಿದರು.

ಯಾವುದೇ ಸ್ಟಾರ್ ಗತ್ತು ತೋರಿಸದೆ, ಪಕ್ಕಾ ಮಲೆನಾಡು ಶೈಲಿಯಲ್ಲಿ ಕುಣಿಯುವ ಮೂಲಕ ರಿಷಬ್ ಎಲ್ಲರ ಗಮನ ಸೆಳೆದರು. ಒಬ್ಬ ದೊಡ್ಡ ನಟ ಎನ್ನುವುದಕ್ಕಿಂತ ಹೆಚ್ಚಾಗಿ, ಮನೆಯ ಮಗನಂತೆ ಎಲ್ಲರ ಜೊತೆ ಬೆರೆತು ಅವರು ಸಂಭ್ರಮಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಇದರ ಜೊತೆಗೆ, ಪ್ರಸಿದ್ಧ ಮಾರಣಕಟ್ಟೆ ಮೇಳದಿಂದ ಹರಕೆಯ ಯಕ್ಷಗಾನ ಪ್ರದರ್ಶನ ಕೂಡ ಬಹಳ ಅದ್ಧೂರಿಯಾಗಿ ನಡೆಯಿತು.

ವಿಶೇಷ ಅಂದ್ರೆ, ಈ ಭಕ್ತಿ ಸಂಭ್ರಮದ ನಡುವೆಯೇ ರಿಷಬ್ ತಮ್ಮ ಬಹುನಿರೀಕ್ಷಿತ 'ಜೈ ಹನುಮಾನ್' ಸಿನಿಮಾದ ಪ್ರಚಾರವನ್ನೂ ಸದ್ದಿಲ್ಲದೆ ಶುರು ಮಾಡಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಈ ಶುಭ ಕಾರ್ಯಕ್ರಮದಲ್ಲೇ ಅದಕ್ಕೆ ನಾಂದಿ ಹಾಡಿದ್ದಾರೆ.

ತಮ್ಮ ಜೊತೆ ಕುಣಿತ ಭಜನೆಯಲ್ಲಿ ಭಾಗವಹಿಸಿದ ಟೀಮ್‌ಗೆ ರಿಷಬ್ 'ಜೈ ಹನುಮಾನ್' ಲೋಗೋ ಇರೋ ಟೀ-ಶರ್ಟ್‌ಗಳನ್ನು ಹಂಚಿ ಖುಷಿ ಪಟ್ಟಿದ್ದಾರೆ. ಹೀಗೆ ದೇವರ ಆಶೀರ್ವಾದ ಪಡೆಯುತ್ತಲೇ, ಯಾವುದೇ ಅಬ್ಬರವಿಲ್ಲದೆ ತಮ್ಮ ಹೊಸ ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಕೈಗೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

"ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ. ಹಿರಿಯರು ಹೇಳಿಕೊಂಡ ಹರಕೆಯನ್ನು ತೀರಿಸಿದಾಗ ಸಿಗುವ ನೆಮ್ಮದಿಯೇ ಬೇರೆ" ಎಂಬುದು ರಿಷಬ್ ಅವರ ಸರಳ ನಿಲುವು.

ಒಟ್ಟಿನಲ್ಲಿ, ಕಾಂತಾರ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ, ಈಗ ಹನುಮಂತನ ಕೃಪೆಗಾಗಿ ಸಜ್ಜಾಗುತ್ತಿದ್ದಾರೆ. ಇವರ ಈ ಮಣ್ಣಿನ ಪ್ರೇಮ ಮತ್ತು ಸಂಪ್ರದಾಯದ ಮೇಲಿರುವ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Latest News