ಲಾಸ್ ವೇಗಾಸ್‌ನಲ್ಲಿ ರಾಕಿ ಭಾಯ್ ಅಬ್ಬರ - ವಿಶ್ವ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ ಭಾರತದ 'ರಾಮಾಯಣ'!!

ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಕುತೂಹಲ ಕೆರಳಿಸಿರುವ ಸಿನಿಮಾ ಎಂದರೆ ಅದು ರಾಮಾಯಣ. ಈ ಮಹತ್ವಾಕಾಂಕ್ಷೆಯ ಚಿತ್ರದ ಗ್ಲೋಬಲ್ ಪ್ರಮೋಷನ್ ಈಗ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಸಿನಿಮಾಕಾನ್ 2026 ಅಂಗಳಕ್ಕೆ ತಲುಪಿದೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಮತ್ತು ಖ್ಯಾತ ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ವೇದಿಕೆಯಲ್ಲಿ ರಾಮಾಯಣದ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಸಿನಿಮಾಕಾನ್ 2026ರಲ್ಲಿ ಯಶ್ ಸ್ಟೈಲಿಶ್ ಎಂಟ್ರಿ
ಸಿನಿಮಾಕಾನ್ 2026ರಲ್ಲಿ ಯಶ್ ಸ್ಟೈಲಿಶ್ ಎಂಟ್ರಿ

ಸ್ಟೈಲಿಶ್ ಆಗಿ ಕಾಣಿಸಿಕೊಂಡ ಯಶ್

ಸಿನಿಮಾಕಾನ್ ಕಾರ್ಯಕ್ರಮದ ಮೊದಲ ದಿನವೇ ಯಶ್ ಮತ್ತು ನಮಿತ್ ಮಲ್ಹೋತ್ರಾ ಅವರು ಹಲವು ಸಂದರ್ಶನಗಳಲ್ಲಿ ಪಾಲ್ಗೊಂಡರು. ಇಲ್ಲಿ ಯಶ್ ಅವರ ಲುಕ್ ಎಲ್ಲರ ಗಮನ ಸೆಳೆಯಿತು. ನೀಲಿ ಶರ್ಟ್, ಮ್ಯಾಚಿಂಗ್ ಜಾಕೆಟ್ ಹಾಗೂ ಕಪ್ಪು ಪ್ಯಾಂಟ್ ತೊಟ್ಟಿದ್ದ ಯಶ್ ಬಹಳ ಚುರುಕಾಗಿ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಮೆರಿಕದಲ್ಲೂ ಹವಾ ಸೃಷ್ಟಿಸಿದ್ದಾರೆ. ಇವರ ಫೋಟೋಗಳು ಮತ್ತು ವೀಡಿಯೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.

ಜಾಗತಿಕ ವೇದಿಕೆಯಲ್ಲಿ ರಾಮಾಯಣದ ದೃಷ್ಟಿಕೋನ

ಸಂದರ್ಶನವೊಂದರಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ರಾಮಾಯಣ ಎನ್ನುವುದು ಬರೀ ಕಥೆಯಲ್ಲ, ಅದು ನಮ್ಮ ಭಾವನೆ. ಪ್ರತಿಯೊಬ್ಬ ಭಾರತೀಯನ ಹೃದಯವೂ ಈ ಕಥೆಯೊಂದಿಗೆ ಮಿಡಿಯುತ್ತದೆ. ನಮ್ಮ ತಂದೆ ತಾಯಿ, ಅಜ್ಜ-ಅಜ್ಜಿಯರಿಂದ ಈ ಕಥೆಯನ್ನು ಕೇಳುತ್ತಾ ಬೆಳೆದಿದ್ದೇವೆ. ಇದನ್ನು ಅತ್ಯಂತ ಹೊಸತನದಿಂದ ಜಾಗತಿಕ ಪ್ರೇಕ್ಷಕರಿಗೆ ಉಣಬಡಿಸುವುದು ನಮ್ಮ ಗುರಿ, ಎಂದು ತಮ್ಮ ವಿಷನ್ ಹಂಚಿಕೊಂಡಿದ್ದಾರೆ. "ಜಗತ್ತಿನ ಪ್ರೇಕ್ಷಕರು ಈಗ ಹೊಸ ಬಗೆಯ ಕಥೆಗಳಿಗಾಗಿ ಕಾಯುತ್ತಿದ್ದಾರೆ. ಅವರಿಗೆ ರಾಮಾಯಣದಂತಹ ಕಾಲಾತೀತ ಕಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪರಿಚಯಿಸಲು ಇದು ಸರಿಯಾದ ಸಮಯ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ರಾಮಾಯಣ ಮಾತ್ರವಲ್ಲದೆ, ಚರ್ಚೆಯ ನಡುವೆ ಯಶ್ ಅವರ ಮುಂದಿನ ಚಿತ್ರ 'ಟಾಕ್ಸಿಕ್' ಮತ್ತು ಬ್ರಹ್ಮಾಸ್ತ್ರ ಸಿನಿಮಾ ಒಳಗೊಂಡ 'ಆಸ್ಟ್ರಾವರ್ಸ್' ಬಗ್ಗೆಯೂ ಒಂದಷ್ಟು ಸುಳಿವುಗಳು ಸಿಕ್ಕಿರುವುದು ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ.

ತಾರಾಬಳಗ ಯಾರ್ಯಾರು?

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಬೃಹತ್ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ:

  • ರಾಮ: ರಣಬೀರ್ ಕಪೂರ್
  • ಸೀತೆ: ಸಾಯಿ ಪಲ್ಲವಿ
  • ರಾವಣ: ಯಶ್ (ರಾಕಿಂಗ್ ಸ್ಟಾರ್)
  • ಹನುಮಂತ: ಸನ್ನಿ ಡಿಯೋಲ್
  • ಲಕ್ಷ್ಮಣ: ರವಿ ದುಬೆ
  • ಮಂಡೋದರಿ: ಕಾಜಲ್ ಅಗರ್ವಾಲ್
  • ಶೂರ್ಪನಖಿ: ರಕುಲ್ ಪ್ರೀತ್ ಸಿಂಗ್

ಅಲ್ಲದೆ, ಅರುಣ್ ಗೋವಿಲ್, ಕುನಾಲ್ ಕಪೂರ್, ಶೀಬಾ ಚಡ್ಡಾ ಸೇರಿದಂತೆ ಇನ್ನೂ ಹಲವು ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಿರ್ಮಾಪಕರು ಈ ಮಹಾಕಾವ್ಯವನ್ನು ಎರಡು ಭಾಗಗಳಲ್ಲಿ ತೆರೆಗೆ ತರುತ್ತಿದ್ದಾರೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಎರಡನೇ ಭಾಗಕ್ಕಾಗಿ ಪ್ರೇಕ್ಷಕರು 2027ರ ದೀಪಾವಳಿವರೆಗೆ ಕಾಯಬೇಕಾಗುತ್ತದೆ. ಭಾರತದ ಹೆಮ್ಮೆಯ ಕಥೆ ರಾಮಾಯಣ ಈಗ ವಿಶ್ವದಾದ್ಯಂತ ಸದ್ದು ಮಾಡುತ್ತಿರುವುದು ಭಾರತೀಯ ಸಿನಿಮಾ ಪ್ರೇಮಿಗಳಿಗೆ ಹೆಮ್ಮೆಯ ವಿಷಯ.