ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಟಪಟ ಮಾತು ಹಾಗೂ ನೇರ ನಡೆ ನುಡಿಯಿಂದಲೇ ಪಟಾಕಿ ಅಂತಲೇ ಫೇಮಸ್ ಆಗಿದ್ದವರು ರಕ್ಷಿತಾ ಶೆಟ್ಟಿ. ಈಗ ಈ ಪಟಾಕಿ ಹುಡುಗಿ ತನ್ನ ಅಡುಗೆಯ ಗಮತ್ತನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದಾರೆ. ಹೌದು, ರಕ್ಷಿತಾ ಶೆಟ್ಟಿ ಈಗ ತಮ್ಮದೇ ಆದ 'ಪಟಾಕಿ ಕಿಚನ್' ಆರಂಭಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಮೂಲತಃ ಯೂಟ್ಯೂಬರ್ ಆಗಿದ್ದ ರಕ್ಷಿತಾ, ತಮ್ಮ ವಿಭಿನ್ನ ಶೈಲಿಯ ಅಡುಗೆ ವಿಡಿಯೋಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇದೇ ಜನಪ್ರಿಯತೆ ಅವರನ್ನು ಬಿಗ್ ಬಾಸ್ ಮನೆವರೆಗೆ ಕರೆದೊಯ್ದಿತ್ತು. ಬಿಗ್ ಬಾಸ್ ಸೀಸನ್ 11ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಕ್ಷಿತಾ, ಈಗ ಮತ್ತೆ ತಮ್ಮ ಹಳೆಯ ಹವ್ಯಾಸಕ್ಕೆ ಹೊಸ ರೂಪ ನೀಡಿದ್ದಾರೆ. ಅದುವೇ ಈ ಪಟಾಕಿ ಕಿಚನ್.
ಈ ಕಿಚನ್‌ನ ವಿಶೇಷವೆಂದರೆ ಇದು ಯಾವುದೇ ಗದ್ದಲದ ನಗರದಲ್ಲಲ್ಲ, ಬದಲಾಗಿ ಸುಂದರವಾದ ಹಳ್ಳಿಯ ಪರಿಸರದಲ್ಲಿ ನಿರ್ಮಾಣವಾಗಿದೆ. ಮಣ್ಣಿನ ಹೂಜಿ, ಹಳ್ಳಿಯ ಸೊಗಡು ಮತ್ತು ಆಧುನಿಕ ಸ್ಪರ್ಶದೊಂದಿಗೆ ಈ ಕಿಚನ್ ಸಿದ್ಧಗೊಂಡಿದೆ. ಇಲ್ಲಿನ ಒಂದು ಗೋಡೆಯ ಮೇಲೆ ರಕ್ಷಿತಾ ಅವರ 'ದಶಭುಜ' ಅಂದರೆ ಹಲವು ಕೈಗಳಿರುವ ಫೋಟೋ ಗಮನ ಸೆಳೆಯುತ್ತಿದ್ದು, ಇದು ಬಹುಮುಖ ಪ್ರತಿಭೆಯ ರಕ್ಷಿತಾ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿದೆ.
ಪಟಾಕಿ ಕಿಚನ್ ಉದ್ಘಾಟನೆಗೆ ಸಾಕ್ಷಿಯಾಗಿದ್ದು ಬಿಗ್ ಬಾಸ್ ಮನೆಯ ರಕ್ಷಿತಾ ಅವರ ಆಪ್ತ ಗೆಳೆಯ ರಘು. ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಸ್ನೇಹ ಬಹಳ ಚರ್ಚೆಯಲ್ಲಿತ್ತು. ಈಗಲೂ ಆ ಬಾಂಧವ್ಯ ಮುಂದುವರಿದಿದ್ದು, ರಘು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿ ಈ ಕಿಚನ್ ಅನ್ನು ಅದ್ಧೂರಿಯಾಗಿ ಉದ್ಘಾಟಿಸಿದ್ದಾರೆ.
ಕೇವಲ ರಿಬ್ಬನ್ ಕಟ್ ಮಾಡುವುದು ಮಾತ್ರವಲ್ಲದೆ, ಅಡುಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ರಘು, ಮೊದಲ ದಿನವೇ ಕಿಚನ್‌ನಲ್ಲಿ ಸೌಟು ಹಿಡಿದಿದ್ದಾರೆ. ಉದ್ಘಾಟನೆಯ ದಿನವೇ ಅವರು ಘಮಘಮಿಸುವ 'ಏಡಿ ಘೀ ರೋಸ್ಟ್' ತಯಾರಿಸುವ ಮೂಲಕ ರಕ್ಷಿತಾ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ರಕ್ಷಿತಾ ಅವರ ಸ್ಪೋಟಕ ವ್ಯಕ್ತಿತ್ವ ನೋಡಿ ಅವರಿಗೆ 'ಪಟಾಕಿ' ಎಂಬ ಬಿರುದು ಸಿಕ್ಕಿತ್ತು. ಜನ ಕೂಡ ಅವರನ್ನು ಇದೇ ಹೆಸರಿನಿಂದ ಪ್ರೀತಿಯಿಂದ ಕರೆಯುತ್ತಿದ್ದರು. ಈ ಹೆಸರನ್ನೇ ತಮ್ಮ ಬ್ರ್ಯಾಂಡ್ ಆಗಿ ಮಾಡಿಕೊಳ್ಳಲು ನಿರ್ಧರಿಸಿದ ರಕ್ಷಿತಾ, ತಮ್ಮ ಕನಸಿನ ಕಿಚನ್‌ಗೆ 'ಪಟಾಕಿ ಕಿಚನ್' ಎಂದೇ ಹೆಸರಿಟ್ಟಿದ್ದಾರೆ.