Mar 31, 2026 Languages : ಕನ್ನಡ | English

ಬರ್ತ್‌ಡೇ ಸಂಭ್ರಮದಲ್ಲಿ 'ಕ್ರೇಜಿ ಕ್ವೀನ್' ರಕ್ಷಿತಾ - ತಮ್ಮದೇ ಬ್ಯಾನರ್‌ನಲ್ಲಿ ಸಹೋದರನಿಗಾಗಿ ಹೊಸ ಸಿನಿಮಾ ಅನೌನ್ಸ್!!

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಇಂದು (ಮಾರ್ಚ್ 31) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ರಕ್ಷಿತಾ ಅವರ ಬರ್ತ್‌ಡೇ ಸಖತ್ ಅದ್ದೂರಿಯಾಗಿ ನಡೆದಿದೆ. ಪತಿ ಜೋಗಿ ಪ್ರೇಮ್, ಪುತ್ರ ಸೂರ್ಯ ಹಾಗೂ ಕುಟುಂಬದ ಆಪ್ತರೆಲ್ಲಾ ಸೇರಿ ರಕ್ಷಿತಾ ಅವರಿಗೆ ಸಪ್ರೈಸ್ ನೀಡಿದ್ದಾರೆ. ಆದರೆ, ಈ ಬಾರಿಯ ಹುಟ್ಟುಹಬ್ಬ ರಕ್ಷಿತಾ ಅವರಿಗೆ ಮರೆಯಲಾಗದ ಕ್ಷಣಗಳನ್ನು ನೀಡಿದೆ. ಯಾಕಂದ್ರೆ, ಮಗ ಸೂರ್ಯನೇ ಅಮ್ಮನಿಗಾಗಿ ಈ ಬಾರಿ ವಿಶೇಷ ಅರೇಂಜ್‌ಮೆಂಟ್ಸ್ ಮಾಡಿದ್ದರಂತೆ. 

ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ಸರ್ಪ್ರೈಸ್ – ‘ಇಡಿಯಟ್’ ಸಿನಿಮಾ ಘೋಷಣೆ!! | Photo Credit: https://www.instagram.com/phoenixpremstudios/
ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ಸರ್ಪ್ರೈಸ್ – ‘ಇಡಿಯಟ್’ ಸಿನಿಮಾ ಘೋಷಣೆ!! | Photo Credit: https://www.instagram.com/phoenixpremstudios/

ರಕ್ಷಿತಾ ಅವರ ಈ ಬರ್ತ್‌ಡೇ ಪಾರ್ಟಿಯಲ್ಲಿ ಜೋಗಿ ಪ್ರೇಮ್, ರಕ್ಷಿತಾ ಅವರ ತಾಯಿ ಮಮತಾ ರಾವ್, ಸಹೋದರ ರಾಣಾ ಹಾಗೂ ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಚಿತ್ರರಂಗದ ಆಪ್ತರು ಭಾಗವಹಿಸಿ ಶುಭ ಹಾರೈಸಿದ್ದಾರೆ. ಮಗನ ಪ್ರೀತಿಯ ಉಡುಗೊರೆ ಒಂದು ಕಡೆಯಾದರೆ, ರಕ್ಷಿತಾ ತಮ್ಮ ಅಭಿಮಾನಿಗಳಿಗೆ ಒಂದು ಬಿಗ್ ಸರ್‌ಪ್ರೈಸ್ ನೀಡುವ ಮೂಲಕ ಈ ದಿನವನ್ನು ಮತ್ತಷ್ಟು ಸ್ಪೆಷಲ್ ಮಾಡಿದ್ದಾರೆ. ಅದುವೇ ಅವರ ಹೊಸ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಘೋಷಣೆ.

ರಕ್ಷಿತಾ ಪ್ರೇಮ್ ಅವರು ಕೇವಲ ನಟಿಯಷ್ಟೇ ಅಲ್ಲ, ಯಶಸ್ವಿ ನಿರ್ಮಾಪಕಿ ಕೂಡ ಹೌದು. ಈಗ ಅವರು ಪತಿ ಪ್ರೇಮ್ ಜೊತೆಗೂಡಿ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಬ್ಯಾನರ್‌ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾಗೆ ಈಗ ಚಾಲನೆ ಸಿಕ್ಕಿದೆ. ವಿಶೇಷ ಅಂದ್ರೆ, ರಕ್ಷಿತಾ ತಮ್ಮ ಪ್ರೀತಿಯ ಸಹೋದರ ರಾಣಾ ಅವರಿಗಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ 'ಏಕ್ ಲವ್ ಯಾ' ಸಿನಿಮಾ ಮೂಲಕ ರಾಣಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು, ಈಗ ಅಕ್ಕನ ಬ್ಯಾನರ್‌ನಲ್ಲಿ ಎರಡನೇ ಸಿನಿಮಾಗೆ ರೆಡಿಯಾಗಿದ್ದಾರೆ.

ರಕ್ಷಿತಾ ಅವರು ತಮ್ಮ ಸಹೋದರನಿಗಾಗಿ ಅನೌನ್ಸ್ ಮಾಡಿದ ಸಿನಿಮಾದ ಟೈಟಲ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ 'ಇಡಿಯಟ್' (Idiot) ಎಂದು ಹೆಸರಿಡಲಾಗಿದೆ. ರಕ್ಷಿತಾ ಅಭಿಮಾನಿಗಳಿಗೆ ಈ ಹೆಸರು ಕೇಳಿದ ತಕ್ಷಣ ಅವರ ಮೊದಲ ತೆಲುಗು ಸಿನಿಮಾ ನೆನಪಾಗೋದು ಗ್ಯಾರಂಟಿ. ರವಿ ತೇಜ ಜೊತೆ ರಕ್ಷಿತಾ ನಟಿಸಿದ್ದ ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈಗ ಅದೇ ಹೆಸರನ್ನು ತಮ್ಮ ಸಹೋದರನ ಸಿನಿಮಾಗೆ ಇಟ್ಟಿರುವುದು ರಕ್ಷಿತಾ ಅವರಿಗೆ ಭಾವನಾತ್ಮಕವಾಗಿ ತುಂಬಾ ಹತ್ತಿರವಾಗಿದೆ.

ಜೋಗಿ ಪ್ರೇಮ್ ಮತ್ತು ರಕ್ಷಿತಾ ಈ ಹೊಸ ಬ್ಯಾನರ್ ಆರಂಭಿಸಲು ಒಂದು ಮುಖ್ಯ ಉದ್ದೇಶವಿದೆ. ಕೇವಲ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಚಿತ್ರರಂಗಕ್ಕೆ ಬರುವ ಹೊಸ ಆಲೋಚನೆಗಳುಳ್ಳ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಇವರ ಗುರಿ. ಅದರಂತೆ, 'ಇಡಿಯಟ್' ಸಿನಿಮಾವನ್ನು ಪ್ರೇಮ್ ಅವರ ಶಿಷ್ಯ ಮಂಜುನಾಥ್ ಬಿ.ಎಸ್ ನಿರ್ದೇಶಿಸುತ್ತಿದ್ದಾರೆ. ಮಂಜುನಾಥ್ ಅವರು ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದಲ್ಲದೆ, ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಈಗ ಅವರಿಗೆ ಗುರುಗಳೇ ಬಂಡವಾಳ ಹೂಡಿ ನಿರ್ದೇಶಕನ ಕ್ಯಾಪ್ ತೊಡಿಸುತ್ತಿದ್ದಾರೆ.

ಈ ಸಿನಿಮಾಗೆ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದ್ದು, ಯುವ ಪ್ರತಿಭೆ ರೋಮಿಯೋ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಶ್ರೀರಾಮನವಮಿಯಂದೇ ಈ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಿದ್ದ ಚಿತ್ರತಂಡ, ಇಂದು ರಕ್ಷಿತಾ ಅವರ ಬರ್ತ್‌ಡೇ ಪ್ರಯುಕ್ತ ಟೈಟಲ್ ರಿವೀಲ್ ಮಾಡಿದೆ. ಒಟ್ಟಿನಲ್ಲಿ, ರಕ್ಷಿತಾ ಪ್ರೇಮ್ ಅವರು ನಟನೆ ಮತ್ತು ರಿಯಾಲಿಟಿ ಶೋಗಳ ಜೊತೆಗೆ ಈಗ ನಿರ್ಮಾಣದಲ್ಲೂ ಬ್ಯುಸಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಮುಂದಾಗಿದ್ದಾರೆ. ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಅವರ ಹೊಸ ಸಿನಿಮಾ 'ಇಡಿಯಟ್' ತಂಡಕ್ಕೆ ಆಲ್ ದಿ ಬೆಸ್ಟ್. 

Latest News