ತಾಯ್ತನ ಪ್ರತಿ ಹೆಣ್ಣಿನ ಕನಸು - ತನ್ನ ತಾಯಿಯ ಪ್ರಗ್ನೆನ್ಸಿ ಫೋಟೊಶೂಟ್ ಮಾಡಿಸಿದ ನಟಿ !! ವಿಡಿಯೋ;

ತಾಯ್ತನ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಪವಿತ್ರ ಮತ್ತು ಸುಂದರವಾದ ಘಟ್ಟ. ಒಂಬತ್ತು ತಿಂಗಳುಗಳ ಕಾಲ ಒಂದು ಜೀವವನ್ನು ತನ್ನ ಒಡಲಿನಲ್ಲಿ ಹೊತ್ತು, ಆ ಮಗುವನ್ನು ಈ ಪ್ರಪಂಚಕ್ಕೆ ಪರಿಚಯಿಸುವ ಕ್ಷಣಗಳು ವರ್ಣನಾತೀತ. ಇಂದಿನ ದಿನಗಳಲ್ಲಿ ಈ ಅಮೂಲ್ಯ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಲು 'ಪ್ರೆಗ್ನೆನ್ಸಿ ಫೋಟೊಶೂಟ್' ಮಾಡಿಸುವುದು ಒಂದು ದೊಡ್ಡ ಟ್ರೆಂಡ್ ಆಗಿದೆ. ಆದರೆ, ನಟಿ ಪ್ರಿಯಾಂಕಾ ಜೈನ್ ಅವರು ಮಾಡಿಸಿರುವ ಫೋಟೊಶೂಟ್ ಮಾತ್ರ ಎಲ್ಲಕ್ಕಿಂತ ಭಿನ್ನ ಮತ್ತು ಭಾವನಾತ್ಮಕವಾಗಿದೆ.

27 ವರ್ಷಗಳ ನೆನಪು ಮರುಸೃಷ್ಟಿ – ಪ್ರಿಯಾಂಕಾ ಜೈನ್ ವಿಶೇಷ ಫೋಟೋಶೂಟ್ | Photo Credit: 'never ending tales' youtube channel
27 ವರ್ಷಗಳ ನೆನಪು ಮರುಸೃಷ್ಟಿ – ಪ್ರಿಯಾಂಕಾ ಜೈನ್ ವಿಶೇಷ ಫೋಟೋಶೂಟ್ | Photo Credit: 'never ending tales' youtube channel

ತೆಲುಗು ಬಿಗ್‌ಬಾಸ್ ಖ್ಯಾತಿಯ ನಟಿ ಪ್ರಿಯಾಂಕಾ ಜೈನ್, ತಮ್ಮ 27ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಮ್ಮ ತಾಯಿಯ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು ಏಳೆಂಟು ತಿಂಗಳ ಹಿಂದೆ ಪ್ರಿಯಾಂಕಾ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದರು, ಇದು ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮಗೆ ಜನ್ಮ ನೀಡಿದ ತಾಯಿಯ ಬಗ್ಗೆ ಅವರಿಗಿರುವ ಅಪಾರ ಪ್ರೀತಿ ಈ ವೀಡಿಯೋದಲ್ಲಿ ಎದ್ದು ಕಾಣುತ್ತಿದೆ.

ಈ ವಿಶೇಷ ಫೋಟೊಶೂಟ್‌ನ ಹಿಂದಿನ ಉದ್ದೇಶ ಬಹಳ ಹೃದಯಸ್ಪರ್ಶಿಯಾಗಿದೆ. ಪ್ರಿಯಾಂಕಾ ಹೇಳುವಂತೆ, "ನನ್ನ ತಾಯಿ 27 ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದಾಗ ಅವರ ಹೊಟ್ಟೆಯಲ್ಲಿ ನಾನಿದ್ದೆ. ಆದರೆ ಆ ಸಮಯದಲ್ಲಿ ಅವರಿಗೆ ಸೀಮಂತ ಶಾಸ್ತ್ರ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಮ್ಮ ಆ ಸಮಯದಲ್ಲಿ ಹೇಗೆ ಕಾಣುತ್ತಿದ್ದರು ಮತ್ತು ಯಾವ ರೀತಿ ಅನುಭವಿಸುತ್ತಿದ್ದರು ಎಂಬುದನ್ನು ಕಣ್ಣಾರೆ ನೋಡುವ ಆಸೆ ನನಗಿತ್ತು. ಅದಕ್ಕಾಗಿಯೇ ಆ ದಿನಗಳನ್ನು ಈಗ ನಾವು ಮರುಸೃಷ್ಟಿ ಮಾಡುತ್ತಿದ್ದೇವೆ." ಮಗಳ ಈ ಪ್ರೀತಿಯ ಸಾಹಸಕ್ಕೆ ತಾಯಿ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ.

ಈ ಇಡೀ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಅವರ ಪ್ರಿಯಕರ, ಬೆಳಗಾವಿ ಮೂಲದ ನಟ ಶಿವಕುಮಾರ್ ಸಾಥ್ ನೀಡಿದ್ದಾರೆ. ಶಿವಕುಮಾರ್ ಮತ್ತು ಪ್ರಿಯಾಂಕಾ ಪ್ರಸ್ತುತ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದು, 'Never Ending Tales' ಎಂಬ ಯೂಟ್ಯೂಬ್ ಚಾನಲ್ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಫೋಟೊಶೂಟ್ ವೇಳೆ ಶಿವಕುಮಾರ್ ಕ್ಯಾಮೆರಾ ಹಿಡಿದು ವೀಡಿಯೋ ಚಿತ್ರೀಕರಿಸಿದ್ದಾರೆ. ಫೋಟೊಶೂಟ್ ನಡುವೆ ಶಿವಕುಮಾರ್ ಅವರು ತಮಾಷೆಯಾಗಿ "ನಿನಗೆ ಈಗ ತಮ್ಮ ಬೇಕಾ ಅಥವಾ ತಂಗಿ ಬೇಕಾ?" ಎಂದು ಕೇಳಿದಾಗ, ಪ್ರಿಯಾಂಕಾ ತಮಗೆ ಯಾವಾಗ ಮಗು ಆಗುತ್ತದೆ ಎಂಬ ಬಗ್ಗೆ ಮಾತನಾಡುತ್ತಾ ಸ್ವಲ್ಪ ಭಾವುಕರಾದರು.

ನಟಿ ಪ್ರಿಯಾಂಕಾ ಜೈನ್ ಅವರು ತೆಲುಗಿನ 'ಮೌನರಾಗಂ' ಮತ್ತು 'ಜಾನಕಿ ಕಲಗನಲೇದು' ಧಾರಾವಾಹಿಗಳ ಮೂಲಕ ಮನೆಮಾತಾದವರು. ಅವರು ಕನ್ನಡದ 'ಗೋಲಿಸೋಡ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಶಿವಕುಮಾರ್ ಅವರು ಕನ್ನಡದ 'ನಾಗಕನ್ನಿಕೆ' ಮತ್ತು 'ಮಾನಸ ಸರೋವರ' ಧಾರಾವಾಹಿಗಳ ಮೂಲಕ ನಟನಾ ವೃತ್ತಿ ಆರಂಭಿಸಿ, ಈಗ ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರ ವೀಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಕೆಲವರು ಇವರ ಕ್ರಿಯೇಟಿವಿಟಿಯನ್ನು ಮೆಚ್ಚಿದರೆ, ಇನ್ನು ಕೆಲವರು ಕೇವಲ 'ವೀವ್ಸ್' ಮತ್ತು 'ಲೈಕ್ಸ್' ಪಡೆಯಲು ಇಷ್ಟೆಲ್ಲಾ ಮಾಡಬೇಕಾ ಎಂದು ಕಾಮೆಂಟ್ ಮಾಡುತ್ತಾರೆ. ಆದರೆ, ಪ್ರಿಯಾಂಕಾ ಮಾತ್ರ ತಮ್ಮ ತಾಯಿಗೆ ನೀಡಿದ ಈ ವಿಶೇಷ ಗೌರವದಿಂದ ತೃಪ್ತರಾಗಿದ್ದಾರೆ.

Latest News