ಕ್ವಾಟ್ಲೆ ಕಿಚನ್‌ನಿಂದ ಮದುವೆ ಮಂಟಪದವರೆಗೆ - ಉಂಗುರ ಬದಲಾಯಿಸಿಕೊಂಡ ಪ್ರಶಾಂತ್ ಗೌಡ, ಕೃತಿ!!

ಕಿರುತೆರೆಯಲ್ಲಿ ತನ್ನದೇ ಆದ ಫ್ಯಾನ್ ಬೇಸ್ ಹೊಂದಿರೋ ಪ್ರಶಾಂತ್ ಗೌಡ, ಇಂದು ತಮ್ಮ ಮನದರಸಿ ಕೃತಿ ಗೌಡ ಜೊತೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಗೆಳೆಯರ ಸಮ್ಮುಖದಲ್ಲಿ ನಡೆದ ಈ ಸರಳ ಸುಂದರ ಸಮಾರಂಭದಲ್ಲಿ ಈ ಜೋಡಿ ಹೊಸ ಜೀವನಕ್ಕೆ ನಾಂದಿ ಹಾಡಿದೆ.

ಬಿಳಿ ಕುರ್ತಾದಲ್ಲಿ ಪ್ರಶಾಂತ್ ಮಿಂಚಿದ್ರೆ, ಸೀರೆಯಲ್ಲಿ ಮಿಂಚಿದ ಕೃತಿ
ಬಿಳಿ ಕುರ್ತಾದಲ್ಲಿ ಪ್ರಶಾಂತ್ ಮಿಂಚಿದ್ರೆ, ಸೀರೆಯಲ್ಲಿ ಮಿಂಚಿದ ಕೃತಿ

ಹೇಗಿತ್ತು ನಿಶ್ಚಿತಾರ್ಥದ ಸಂಭ್ರಮ?

ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಅವರು ಪಕ್ಕಾ ಟ್ರೆಡಿಷನಲ್ ಆಗಿ ಬಿಳಿ ಕುರ್ತಾ ಮತ್ತು ಪೈಜಾಮು ಧರಿಸಿ ಮಿಂಚಿದ್ರೆ, ಕೃತಿ ಗೌಡ ಅವರು ಸುಂದರವಾದ ಸೀರೆ ಉಟ್ಟು ಕಣ್ಸೆಳೆದಿದ್ದಾರೆ. ವಿಶೇಷ ಅಂದ್ರೆ, ನಿಶ್ಚಿತಾರ್ಥದ ಶುಭ ಸಂದರ್ಭದಲ್ಲಿ ಪ್ರಶಾಂತ್ ಅವರ ಭಾವಿ ಪತ್ನಿ ಕೃತಿ ಗೌಡ ಅವರು ಸ್ವಲ್ಪ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಆ ಕ್ಷಣದ ವಿಡಿಯೋ ಈಗ ಅಭಿಮಾನಿಗಳ ಮನ ಗೆಲ್ಲುತ್ತಿದೆ.

ಯಾರು ಈ ಕೃತಿ ಗೌಡ?

ಪ್ರಶಾಂತ್ ಅವರ ಕೈ ಹಿಡಿಯುತ್ತಿರುವ ಕೃತಿ ಗೌಡ ಅವರು ಕೂಡ ಚಿತ್ರರಂಗದವರೇ ಅನ್ನೋದು ವಿಶೇಷ. ಕೃತಿ ಅವರು ಕೂಡ ನಟಿಯಾಗಿದ್ದು, ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರದ್ದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಎಂಬುದು ಇನ್ನೂ ಸಸ್ಪೆನ್ಸ್ ಆಗಿದ್ದರೂ, ಜೋಡಿ ಮಾತ್ರ ಸಖತ್ ಕ್ಯೂಟ್ ಆಗಿದೆ ಅಂತ ಫ್ಯಾನ್ಸ್ ಹೇಳ್ತಿದ್ದಾರೆ.

ಗಣ್ಯರ ದಂಡು!

ಪ್ರಶಾಂತ್ ಅವರ ಈ ಸಂಭ್ರಮಕ್ಕೆ ಕಿರುತೆರೆ ಮತ್ತು ಬೆಳ್ಳಿಪರದೆಯ ಹಲವು ಗಣ್ಯರು ಸಾಕ್ಷಿಯಾಗಿದ್ದಾರೆ.

ಹಿರಿಯ ನಟಿ ಶ್ರುತಿ ಅವರು ಬಂದು ನವಜೋಡಿಗೆ ಹರಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಅನುಪಮಾ ಗೌಡ, ಭವ್ಯಾ ಗೌಡ ಮತ್ತು ತುಕಾಲಿ ಸ್ಟಾರ್ ಸಂತು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

ಗಿಚ್ಚಿ-ಗಿಲಿಗಿಲಿಯ ಗೆಳೆಯರೆಲ್ಲಾ ಸೇರಿ ಪ್ರಶಾಂತ್ ಅವರ ಮದುವೆ ಸಂಭ್ರಮಕ್ಕೆ ಈಗಿನಿಂದಲೇ ಚಾಲನೆ ನೀಡಿದ್ದಾರೆ.

ಯೂಟ್ಯೂಬ್‌ನಿಂದ ಸ್ಟಾರ್‌ವರೆಗೆ!

ಸಣ್ಣಪುಟ್ಟ ವಿಡಿಯೋಗಳನ್ನು ಮಾಡುತ್ತಾ ಯೂಟ್ಯೂಬ್‌ನಲ್ಲಿ 'ಟ್ಯಾಲೆಂಟೆಡ್ ಕಲಾವಿದ' ಅಂತಲೇ ಫೇಮಸ್ ಆದ ಪ್ರಶಾಂತ್, ನಂತರ 'ಕ್ವಾಟ್ಲೆ ಕಿಚನ್' ಮತ್ತು 'ಗಿಚ್ಚಿ-ಗಿಲಿಗಿಲಿ' ಶೋ ಮೂಲಕ ಮನೆಮಾತಾದರು. ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದ ಪ್ರಶಾಂತ್, ಈಗ ಮದುವೆ ಸಂಭ್ರಮದಲ್ಲಿದ್ದಾರೆ.