ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ನ್ಯಾಚುರಲ್ ನಟನೆ ಮತ್ತು ನೇರ ಮಾತುಗಳಿಗೆ ಹೆಸರಾದವರು ನಟಿ ನಿತ್ಯಾ ಮೆನನ್. ಸದ್ಯ ಅವರಿಗೆ 38 ವರ್ಷ, ಆದರೆ ಅವರು ಇನ್ನೂ ಮದುವೆ ಬಗ್ಗೆ ಯೋಚಿಸಿಲ್ಲ. ತಮಗೆ ಇಷ್ಟ ಬಂದ ಸಿನಿಮಾಗಳನ್ನು ಮಾಡುತ್ತಾ, ಸಿಂಗಲ್ ಆಗಿ ಲೈಫ್ ಎಂಜಾಯ್ ಮಾಡುತ್ತಿರುವ ನಿತ್ಯಾ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಮತ್ತು ತಾಯ್ತನದ ಬಗ್ಗೆ ಕೊಟ್ಟಿರುವ ಹೇಳಿಕೆ ಈಗ ಇಡೀ ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ಮದುವೆ ಮುನ್ನ ತಾಯಿಯಾಗೋದು ತಪ್ಪಲ್ಲ
ಸಂದರ್ಶನವೊಂದರಲ್ಲಿ ನಿತ್ಯಾ ಅವರಿಗೆ ಒಂದು ಇಂಟರೆಸ್ಟಿಂಗ್ ಪ್ರಶ್ನೆ ಎದುರಾಗಿತ್ತು. ಮದುವೆಗೆ ಮೊದಲು ಗರ್ಭಧರಿಸಬೇಕಾ ಅಥವಾ ಮದುವೆಯ ನಂತರವಾ? ಎಂಬ ಪ್ರಶ್ನೆಗೆ ನಿತ್ಯಾ ಒಂದು ಕ್ಷಣವೂ ಯೋಚಿಸದೆ ಸಖತ್ ಬೋಲ್ಡ್ ಆಗಿ ಉತ್ತರ ಕೊಟ್ಟಿದ್ದಾರೆ.
ಮಕ್ಕಳನ್ನು ಹೊಂದಲು ಮದುವೆಯೇ ಆಗಬೇಕು ಎಂಬ ನಿಯಮವೇನಿಲ್ಲ. ಇನ್ನೊಂದು ಜೀವಕ್ಕೆ ಜನ್ಮ ನೀಡುವುದು ಪ್ರಕೃತಿ ಮಹಿಳೆಯರಿಗೆ ನೀಡಿರುವ ಹಕ್ಕು. ತಾಯಿಯಾಗಬೇಕೆಂಬ ಬಯಕೆಯನ್ನು ಸಮಾಜದ ಗೌರವ ಅಥವಾ ಸ್ಟೇಟಸ್‌ಗೆ ಲಿಂಕ್ ಮಾಡುವ ಅಗತ್ಯವಿಲ್ಲ, ಎಂದು ನಿತ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲದೆ, "ನೀವು ಮದುವೆಯಾಗಲಿ ಅಥವಾ ಬಿಡಲಿ, ಮಗು ಪಡೆಯುವುದರಲ್ಲಿ ತಪ್ಪೇನಿದೆ?" ಎಂದು ಮರುಪ್ರಶ್ನೆ ಹಾಕುವ ಮೂಲಕ ನಿರೂಪಕರನ್ನೇ ಸುಮ್ಮನಾಗಿಸಿದ್ದಾರೆ.
ವೈಯಕ್ತಿಕ ನಿರ್ಧಾರಕ್ಕೆ ಮನ್ನಣೆ ಇರಲಿ
ಈಗಿನ ಕಾಲದಲ್ಲಿ ಮದುವೆ ಇಲ್ಲದೆ ತಾಯಿಯಾಗಲು ಸಾಕಷ್ಟು ತಾಂತ್ರಿಕ ಅವಕಾಶಗಳಿವೆ ಎಂಬುದನ್ನು ನಿತ್ಯಾ ನೆನಪಿಸಿದ್ದಾರೆ. "ನಿಮಗೆ ಮಗು ಬೇಕು, ಆದರೆ ಸಂಸಾರ ಅಥವಾ ವೈವಾಹಿಕ ಜೀವನದ ಜವಾಬ್ದಾರಿ ಬೇಡ ಎಂದರೆ ಅದು ನಿಮ್ಮ ವೈಯಕ್ತಿಕ ನಿರ್ಧಾರ. ಅದರಲ್ಲಿ ಸರಿ-ತಪ್ಪುಗಳನ್ನು ಹುಡುಕುವ ಅವಶ್ಯಕತೆ ಇಲ್ಲ," ಎಂಬುದು ಅವರ ವಾದ.
ಹಿಂದೆ ನಿತ್ಯಾ ಅವರ ಅಜ್ಜಿ ಕೂಡ ಮದುವೆ ಬಗ್ಗೆ ಅವರ ಮೇಲೆ ಒತ್ತಡ ಹಾಕುತ್ತಿದ್ದರಂತೆ. ಆದರೆ ಈಗ ಮನೆಯಲ್ಲಿ ಅಂಥ ಸಮಸ್ಯೆಗಳಿಲ್ಲ ಎಂದು ಅವರು ತಿಳಿಸಿದ್ದಾರೆ. "ಮದುವೆ ಎಂಬುದು ಜೀವನದ ಒಂದು ಭಾಗ ಅಷ್ಟೇ, ಅದೇ ಪೂರ್ಣ ಜೀವನವಲ್ಲ," ಎನ್ನುವ ಮೂಲಕ ತಮ್ಮ ಸ್ವತಂತ್ರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
"ನಾನು ಮದುವೆಯ ವಿರೋಧಿಯಲ್ಲ"
ಹಾಗಂತ ತಾನು ಮದುವೆಯ ವಿರೋಧಿ ಎಂದು ಅವರು ಎಲ್ಲೂ ಹೇಳಿಲ್ಲ. "ನಾನು ಮದುವೆಗೆ ವಿರುದ್ಧವಾಗಿಲ್ಲ. ಆದರೆ ಮದುವೆ ಆಗದಿದ್ದರೆ ಜೀವನವೇ ವ್ಯರ್ಥ ಎನ್ನುವವರ ಯೋಚನೆಗೆ ನನ್ನ ವಿರೋಧವಿದೆ. ಮಾತೃತ್ವ ಎಂಬುದು ವೈಯಕ್ತಿಕ ಭಾವನೆ, ಅದು ಸಾಮಾಜಿಕ ಒತ್ತಡಕ್ಕೆ ಸಿಲುಕಬಾರದು," ಎಂದು ನಿತ್ಯಾ ವಿವರಿಸಿದ್ದಾರೆ.
ಇಂಟರ್ನೆಟ್‌ನಲ್ಲಿ ಪರ-ವಿರೋಧ ಚರ್ಚೆ
ನಿತ್ಯಾ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪಾಗಿದ್ದಾರೆ.
ಸಪೋರ್ಟ್ - "ಇದು ಇಂದಿನ ಕಾಲಕ್ಕೆ ಬೇಕಾದ ಧೈರ್ಯದ ಮಾತು. ಮಹಿಳೆಯರು ತಮ್ಮ ಜೀವನದ ನಿರ್ಧಾರ ತಾವೇ ತಗೋಬೇಕು," ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ.
ವಿರೋಧ - "ನಮ್ಮ ಸಂಸ್ಕೃತಿಯಲ್ಲಿ ಮದುವೆಗೆ ತನ್ನದೇ ಆದ ಸ್ಥಾನವಿದೆ. ಇಂಥ ಮಾತುಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಬಹುದು," ಎಂದು ಸಂಪ್ರದಾಯವಾದಿಗಳು ಕಿಡಿಕಾರಿದ್ದಾರೆ.
ಸದಾ ಡಿಫರೆಂಟ್ ಪಾತ್ರಗಳ ಮೂಲಕ ಇಷ್ಟವಾಗುವ ನಿತ್ಯಾ ಮೆನನ್, ಈಗ ತಮ್ಮ ಈ ಕ್ರಾಂತಿಕಾರಿ ವಿಚಾರಗಳ ಮೂಲಕ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ನಿತ್ಯಾ ಅವರ ಈ ಬೋಲ್ಡ್ ಮಾತುಗಳು ಇನ್ನೊಂದು ಕಡೆ ಸಿನಿ ಪ್ರಿಯರಲ್ಲಿ ಹಾಟ್ ಟಾಪಿಕ್ ಆಗಿವೆ.