ಕೆಎಂಎಫ್ ನಂದಿನಿಯ ನೂತನ ರಾಯಭಾರಿಯಾಗಿ ಸುಧಾರಾಣಿ!!

ಕರ್ನಾಟಕದ ಹೆಮ್ಮೆ ಎನ್ನಬಹುದಾದ ನಂದಿನಿ ಬ್ರ್ಯಾಂಡ್ಗೆ ಇದೀಗ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟಿ ಸುಧಾರಾಣಿ ಅವರ ಬೆಂಬಲ ದೊರೆತಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (KMF) ಪ್ರಮುಖ ಘಟಕವಾದ ಬೆಂಗಳೂರು ಹಾಲು ಒಕ್ಕೂಟ (BAMUL), ನಂದಿನಿ ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಸುಧಾರಾಣಿ ಅವರನ್ನು ಅಧಿಕೃತವಾಗಿ ಘೋಷಿಸಿದೆ.

ನಂದಿನಿ ಬ್ರ್ಯಾಂಡ್‌ಗೆ ಸುಧಾರಾಣಿ ಬೆಂಬಲ – BAMUL ಅಧಿಕೃತ ಘೋಷಣೆ
ನಂದಿನಿ ಬ್ರ್ಯಾಂಡ್‌ಗೆ ಸುಧಾರಾಣಿ ಬೆಂಬಲ – BAMUL ಅಧಿಕೃತ ಘೋಷಣೆ

ಈ ಬಗ್ಗೆ ಮಾಹಿತಿ ನೀಡಿದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ನಂದಿನಿ ಬ್ರ್ಯಾಂಡ್‌ಗೆ ಜನರ ವಿಶ್ವಾಸ ಬಹಳ ಮುಖ್ಯ. ಅದಕ್ಕೆ ತಕ್ಕಂತೆ ಸರಳತೆ, ನಂಬಿಕೆ ಮತ್ತು ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ಸುಧಾರಾಣಿ ಅವರಂತಹ ವ್ಯಕ್ತಿತ್ವ ಅಗತ್ಯವಿತ್ತು ಎಂದು ಹೇಳಿದ್ದಾರೆ. ಅವರ ವ್ಯಕ್ತಿತ್ವ ನಂದಿನಿ ಉತ್ಪನ್ನಗಳ ಗುಣಮಟ್ಟ ಮತ್ತು ನೈತಿಕ ಮೌಲ್ಯಗಳಿಗೆ ಇನ್ನಷ್ಟು ಮೆರುಗು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಂದಿನಿ ಮತ್ತು ಕನ್ನಡ ಚಿತ್ರರಂಗದ ನಂಟು ಬಹಳ ಹಳೆಯದು. 1996ರಲ್ಲಿ ಡಾ. ರಾಜ್‌ಕುಮಾರ್ ಅವರು ಯಾವುದೇ ಸಂಭಾವನೆ ಪಡೆಯದೆ ರೈತರ ಹಿತಕ್ಕಾಗಿ ನಂದಿನಿಯ ಮೊದಲ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಬಳಿಕ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಕೂಡ ಅದೇ ಸಂಪ್ರದಾಯ ಮುಂದುವರಿಸಿ ಉಚಿತವಾಗಿ ಬ್ರ್ಯಾಂಡ್ ಪ್ರಚಾರ ಮಾಡಿದರು. ಈಗ ಅದೇ ಗೌರವಯುತ ಪರಂಪರೆಯಲ್ಲಿ ಸುಧಾರಾಣಿ ಅವರು ಸೇರ್ಪಡೆಯಾಗಿದ್ದು, ನಂದಿನಿ ಕುಟುಂಬಕ್ಕೆ ಸ್ತ್ರೀಶಕ್ತಿಯ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಜಾಹೀರಾತುಗಳಲ್ಲಿ ಸುಧಾರಾಣಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸುಧಾರಾಣಿ, ನಂದಿನಿ ಎಂದರೆ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಸಂಕೇತ ಎಂದು ಹೇಳಿದ್ದಾರೆ. ರೈತರ ಸಹಕಾರಿ ಸಂಸ್ಥೆಯಾದ ಬಮೂಲ್ ಜೊತೆ ಕೈಜೋಡಿಸಿರುವುದು ತಮ್ಮ ಜೀವನದ ಅತ್ಯಂತ ಗೌರವದ ಕ್ಷಣ ಎಂದಿದ್ದಾರೆ. ರಾಜ್ ಕುಟುಂಬದ ಮೇರು ವ್ಯಕ್ತಿಗಳ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆ ಮತ್ತು ದೊಡ್ಡ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

ದೇಸಿ ಹಸುಗಳ ಸಂರಕ್ಷಣೆ, ರೈತರಿಗೆ ನ್ಯಾಯಸಮ್ಮತ ಬೆಲೆ, ಗ್ರಾಹಕರಿಗೆ ಶುದ್ಧ ಮತ್ತು ವಿಶ್ವಾಸಾರ್ಹ ಉತ್ಪನ್ನ ತಲುಪಿಸುವ ಉದ್ದೇಶದಿಂದ ನಂದಿನಿ ಮುಂದುವರಿಯುತ್ತಿದೆ. A2 ಹಾಲು, A2 ತುಪ್ಪ ಸೇರಿದಂತೆ ಹೊಸ ಉತ್ಪನ್ನಗಳ ಮೂಲಕ ಪರಂಪರೆ ಮತ್ತು ಗುಣಮಟ್ಟವನ್ನು ಮುಂದಿನ ಪೀಳಿಗೆಗೆ ಸಾಗಿಸುವ ಈ ಚಳುವಳಿಗೆ ಬೆಂಬಲ ನೀಡುತ್ತಿರುವುದಾಗಿ ಸುಧಾರಾಣಿ ಹೇಳಿದ್ದಾರೆ.

Latest News