Mar 27, 2026 Languages : ಕನ್ನಡ | English

ದಾವೂದ್ ಇಬ್ರಾಹಿಂ ಹೃದಯ ಗೆದ್ದಿದ್ದ ಈ ನಟಿ ಯಾರು ಗೊತ್ತಾ? ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು ಈ 'ಡಾನ್' ಕನೆಕ್ಷನ್!!

ಬಾಲಿವುಡ್ ಮತ್ತು ಭೂಗತ ಲೋಕದ ನಡುವಿನ ಸಂಬಂಧಗಳ ಬಗ್ಗೆ ನಾವು ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಆದರೆ, ಈ ನಟಿಯ ಕಥೆ ಸ್ವಲ್ಪ ಭಿನ್ನ ಮತ್ತು ಅಷ್ಟೇ ವಿವಾದಾತ್ಮಕ. ಸೌಂದರ್ಯದಲ್ಲಿ ಸಾಕ್ಷಾತ್ ಐಶ್ವರ್ಯಾ ರೈ ಅವರಿಗೇ ಪೈಪೋಟಿ ನೀಡಬಲ್ಲ ಈ ಚೆಲುವೆ, ಅತೀ ಕಡಿಮೆ ಸಮಯದಲ್ಲಿ ಸ್ಟಾರ್ ಆದವರು. ಆದರೆ ಇವರ ಯಶಸ್ಸಿನ ಹಿಂದೆ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕೈವಾಡ ಇದೆಯೇ? ಎಂಬ ಪ್ರಶ್ನೆ ಇಂದಿಗೂ ಸಿನಿಕೋಟಿಗಳಲ್ಲಿ ಚರ್ಚೆಯಾಗುತ್ತಿದೆ. ಆ ನಟಿ ಬೇರೆ ಯಾರೂ ಅಲ್ಲ, ಪಾಕಿಸ್ತಾನಿ ಸುಂದರಿ ಮೆಹ್ವಿಶ್ ಹಯಾತ್.

ಐಶ್ವರ್ಯಾ ರೈಗೆ ಪೈಪೋಟಿ ನೀಡಿದ ಪಾಕಿಸ್ತಾನಿ ನಟಿ;
ಐಶ್ವರ್ಯಾ ರೈಗೆ ಪೈಪೋಟಿ ನೀಡಿದ ಪಾಕಿಸ್ತಾನಿ ನಟಿ;

ಮೆಹ್ವಿಶ್ ಹಯಾತ್ ಎನ್ನುವ ಹೆಸರು ಪಾಕಿಸ್ತಾನಿ ಚಿತ್ರರಂಗದಲ್ಲಿ ಮತ್ತು ಟಿವಿ ಉದ್ಯಮದಲ್ಲಿ ಅತೀ ದೊಡ್ಡ ಹೆಸರು. ತನ್ನ ನಟನೆ ಮತ್ತು ಗ್ಲಾಮರ್ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಮೆಹ್ವಿಶ್, ಅಲ್ಲಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2015 ರಲ್ಲಿ 'ಜವಾನಿ ಫಿರ್ ನಹಿ ಆನಿ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಇವರು, ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು. 'ಪಂಜಾಬ್ ನಹಿ ಜೌಂಗಿ' ಮತ್ತು ಇತ್ತೀಚಿನ 'ಲಂಡನ್ ನಹಿ ಜೌಂಗಿ' ಅಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಆದರೆ, ಇವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಕೇಳಿಬಂದ ಒಂದು ಸುದ್ದಿ ಇಡೀ ಗ್ಲಾಮರ್ ಜಗತ್ತನ್ನು ಬೆಚ್ಚಿಬೀಳಿಸಿತ್ತು.

ಸಿನಿಮಾ ಸುದ್ದಿಗಳಿಗಿಂತ ಹೆಚ್ಚಾಗಿ ಮೆಹ್ವಿಶ್ ಅವರ ಹೆಸರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ತಳುಕು ಹಾಕಿಕೊಂಡಾಗ ದೊಡ್ಡ ವಿವಾದವಾಯಿತು. ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ವದಂತಿಗಳ ನಡುವೆ, ಆತ ಈ ನಟಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾನೆ ಮತ್ತು ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದವು. ದಾವೂದ್ ಪ್ರಭಾವದಿಂದಲೇ ಮೆಹ್ವಿಶ್ ಅವರಿಗೆ ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ಸಿಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.

ಈ ವಿವಾದ ಇನ್ನಷ್ಟು ದೊಡ್ಡದಾಗಿದ್ದು 2019 ರಲ್ಲಿ. ಪಾಕಿಸ್ತಾನ ಸರ್ಕಾರವು ಮೆಹ್ವಿಶ್ ಅವರಿಗೆ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ "ತಮ್ಘಾ-ಎ-ಇಮ್ತಿಯಾಜ್" ನೀಡಿ ಗೌರವಿಸಿತು. ಆಗ ಅನೇಕರು, "ಇಷ್ಟು ಸಣ್ಣ ವಯಸ್ಸಿನ ನಟಿಗೆ ಇಂತಹ ದೊಡ್ಡ ಗೌರವ ಸಿಗಲು ದಾವೂದ್ ಇಬ್ರಾಹಿಂ ಪ್ರಭಾವವೇ ಕಾರಣ" ಎಂದು ಬಹಿರಂಗವಾಗಿಯೇ ಮಾತನಾಡಿಕೊಂಡರು. ಭೂಗತ ಜಗತ್ತಿನ ಡಾನ್ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗಿದೆ ಎಂಬ ವದಂತಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತು. ಆದರೆ ಮೆಹ್ವಿಶ್ ಮಾತ್ರ ಈ ಎಲ್ಲಾ ಆರೋಪಗಳ ಬಗ್ಗೆ ಎಂದೂ ತುಟಿ ಬಿಚ್ಚಿಲ್ಲ.

ಬರಿ ನಟನೆ ಮಾತ್ರವಲ್ಲದೆ ಮೆಹ್ವಿಶ್ ಅವರಿಗೆ ರಾಜಕೀಯದಲ್ಲೂ ಆಸಕ್ತಿ ಇದೆ. ಒಮ್ಮೆ ಸಂದರ್ಶನವೊಂದರಲ್ಲಿ ಅವರು, "ನನಗೆ ಒಂದು ದಿನ ಪಾಕಿಸ್ತಾನದ ಪ್ರಧಾನಿಯಾಗುವ ಆಸೆ ಇದೆ" ಎಂದು ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. "ಇಮ್ರಾನ್ ಖಾನ್ ಅವರಂತಹ ಕ್ರಿಕೆಟಿಗ ದೇಶದ ಪ್ರಧಾನಿಯಾಗಲು ಸಾಧ್ಯವಿರುವಾಗ, ಒಬ್ಬ ನಟಿ ಯಾಕೆ ಆಗಬಾರದು?" ಎಂಬುದು ಅವರ ವಾದವಾಗಿತ್ತು. ಸಮಾಜದಲ್ಲಿ ಬದಲಾವಣೆ ತರಲು ಕಲಾವಿದರು ರಾಜಕೀಯಕ್ಕೆ ಬರಬೇಕು ಎಂಬುದು ಇವರ ಆಶಯ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಹ್ವಿಶ್ ಹಯಾತ್ ಒಬ್ಬ ಅತ್ಯಂತ ಯಶಸ್ವಿ ನಟಿಯಾಗಿದ್ದರೂ, ದಾವೂದ್ ಇಬ್ರಾಹಿಂ ಹೆಸರಿನ ಜೊತೆ ಅವರ ಹೆಸರು ತಳಕು ಹಾಕಿಕೊಂಡಿದ್ದು ಅವರ ಕೆರಿಯರ್‌ನಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದಿದೆ. ಇಂದಿಗೂ ಇವರಿಬ್ಬರ ನಡುವೆ ನಿಜವಾಗಿಯೂ ಸಂಬಂಧವಿತ್ತೇ ಅಥವಾ ಇದೆಲ್ಲಾ ಬರಿ ವದಂತಿಗಳೇ ಎನ್ನುವುದು ಒಂದು ನಿಗೂಢ ರಹಸ್ಯವಾಗಿಯೇ ಉಳಿದಿದೆ.

Latest News