ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ತನ್ನ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗೆ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿದೆ. ಇಂದಿನಿಂದಲೇ ತಮನ್ನಾ ಅಧಿಕೃತವಾಗಿ KSDL ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿದ್ದಾರೆ.
KSDL ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂ.ಗಳ ಮಟ್ಟಕ್ಕೆ ಏರಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಉತ್ತರ ಭಾರತ ಮಾತ್ರವಲ್ಲದೆ, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೂಡ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ KSDL ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಯೋಜನೆ ರೂಪಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಪ್ರಸ್ತುತ KSDL ಸಂಸ್ಥೆ 50ಕ್ಕೂ ಹೆಚ್ಚು ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮುಂದಿನ ಎರಡು ವರ್ಷಗಳ ಕಾಲ ತಮನ್ನಾ ಅವರು KSDL ಉತ್ಪನ್ನಗಳ ಜಾಹೀರಾತು, ಪ್ರಚಾರ ಕಾರ್ಯಕ್ರಮಗಳು ಹಾಗೂ ಮಾರುಕಟ್ಟೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್, ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್‌ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಸೇರಿದಂತೆ ಹಲವು ಉತ್ಪನ್ನಗಳಿಗೆ ದೇಶಾದ್ಯಂತ ಭಾರಿ ಬೇಡಿಕೆ ಇದೆ.
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆ ಹಾಗೂ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ಆರಂಭಿಸುವ ಯೋಜನೆಯೂ ಇದೆ. ಜೊತೆಗೆ, ಮೈಸೂರು ಜಾಸ್ಮಿನ್ ಸೋಪ್ಗೆ ಹೊಸ ರೂಪ ನೀಡುವ ಮೂಲಕ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಮಾಡಲು KSDL ಚಿಂತನೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಹಲವು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳ ಯೋಜನೆಗಳನ್ನೂ ಹಂಚಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಜರುಗಿದ್ದು, ಮೈಸೂರು ಸ್ಯಾಂಡಲ್ ಸೋಪ್ ಬೆಳೆದು ಬಂದ ಪಯಣವನ್ನು ವಿವರಿಸುವ “ಸುಗಂಧ ಸಿರಿ” ಎಂಬ ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಮುದ್ದೇಬಿಹಾಳದ ಶಾಸಕರು ಹಾಗೂ KSDL ಅಧ್ಯಕ್ಷರಾದ ಶ್ರೀ ಸಿ.ಎಸ್. ಅಪ್ಪಾಜಿ ನಾಡಗೌಡ, ಕೈಗಾರಿಕಾ ಇಲಾಖೆ, KSDL, MSIL ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ X (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.