ಕನ್ನಡ ಚಿತ್ರರಂಗದ 'ಜೋಗಿ' ಪ್ರೇಮ್ ಅಂದ್ರೆ ಅಲ್ಲಿ ಅದ್ಧೂರಿತನಕ್ಕೆ ಕೊರತೆಯೇ ಇರಲ್ಲ. ಈಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಕೆಡಿ' (KD - The Devil) ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಈ ಟ್ರೇಲರ್‌ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ರಗಡ್ ಅವತಾರ ಒಂದು ಕಡೆಯಾದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಐಕಾನಿಕ್ ಡೈಲಾಗ್ ಅಭಿಮಾನಿಗಳ ಎದೆಯಲ್ಲಿ ಸಂಚಲನ ಮೂಡಿಸಿದೆ.
ಕಾಳಿ ಅವತಾರದಲ್ಲಿ ಧ್ರುವ ಸರ್ಜಾ ಅಬ್ಬರ
ಟ್ರೇಲರ್ ನೋಡಿದರೆ ಇದು ಪಕ್ಕಾ 70-80ರ ದಶಕದ ಭೂಗತ ಲೋಕದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಧ್ರುವ ಸರ್ಜಾ ಇಲ್ಲಿ 'ಕಾಳಿ' ಎಂಬ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ್ ಅವರ ಸಿನಿಮಾಗಳ ಟ್ರೇಡ್ ಮಾರ್ಕ್ ಆದ 'ಮಚ್ಚು' ಈ ಟ್ರೇಲರ್‌ನಲ್ಲೂ ಹೈಲೈಟ್. ಟ್ರೇಲರ್ ಉದ್ದಕ್ಕೂ ರಕ್ತದೋಕುಳಿ ಹರಿದಿದ್ದು, ಆಕ್ಷನ್ ಪ್ರಿಯರಿಗೆ ಇದೊಂದು ಭರ್ಜರಿ ಮಿಲ್ಟರಿ ಊಟದಂತಿದೆ.
ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಪ್ರೇಮ್?
ಟ್ರೇಲರ್‌ನ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದು ಸಂಭಾಷಣೆ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಸುತ್ತಲೂ ವಿಲನ್‌ಗಳಿದ್ದಾಗ ಧ್ರುವ ಸರ್ಜಾ ಅವರು ಉತ್ತರ ಕರ್ನಾಟಕದ ಶೈಲಿಯಲ್ಲಿ, "ಮೊದಲನೇ ಬಾರಿ ಮಚ್ಚು ಹಿಡಿದಿದ್ದೇನೆ.. ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ" ಅಂತ ಹೇಳ್ತಾರೆ.
ಈ ಡೈಲಾಗ್ ಕೇಳಿದ ತಕ್ಷಣ ಅಪ್ಪು ಫ್ಯಾನ್ಸ್‌ಗೆ 'ರಾಜ್ ದಿ ಶೋ ಮ್ಯಾನ್' ಸಿನಿಮಾ ನೆನಪಾಗಿದೆ. ಆ ಚಿತ್ರದಲ್ಲೂ ಪುನೀತ್ ರಾಜ್‌ಕುಮಾರ್ ಅವರು, "ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ" ಅಂತ ಹೇಳಿದ್ದರು. ಕಾಕತಾಳೀಯವೆಂದರೆ ಆ ಸಿನಿಮಾದ ನಿರ್ದೇಶಕರು ಕೂಡ ಇದೇ ಪ್ರೇಮ್! ಈ ಮೂಲಕ ಅಪ್ಪು ಅವರನ್ನು ಪ್ರೇಮ್ ಮತ್ತೆ ನೆನಪಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಸಿನಿಪ್ರಿಯರು.
ಏಪ್ರಿಲ್ 30ಕ್ಕೆ 'ಕೆಡಿ' ವಿಶ್ವದಾದ್ಯಂತ ರಿಲೀಸ್
ಟ್ರೇಲರ್ ಏಪ್ರಿಲ್ 22ರಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಚಿತ್ರವು ಏಪ್ರಿಲ್ 30ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಅವರಂತಹ ದೊಡ್ಡ ಸ್ಟಾರ್ ಕಾಸ್ಟ್ ಇರೋ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಂತಹ ಧೂಳೆಬ್ಬಿಸಲಿದೆ ಎಂದು ಕಾದು ನೋಡಬೇಕು.