ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇಲ್ಲ, ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗ್ತಾ ಇತ್ತು. ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ದೂರವಾಗ್ತಿದೆ ಅನ್ನೋ ಊಹಾಪೋಹಗಳು ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಎಲ್ಲಾ ವದಂತಿಗಳಿಗೆ ಮತ್ತು ಹರಿದಾಡ್ತಿರೋ ಸುದ್ದಿಗೆ ನಟಿ ಶುಭಾ ಪೂಂಜಾ ಕೊನೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾದ ಒಂದು ನೋಟ್ ಹಂಚಿಕೊಂಡಿರೋ ಶುಭಾ ಪೂಂಜಾ, ಮಾಧ್ಯಮ ಮಿತ್ರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಖಾಸಗಿತನದ ಅಗತ್ಯವಿದೆ ಅಂತ ಅವರು ಕೇಳಿಕೊಂಡಿದ್ದಾರೆ.
ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದ ಶುಭಾ
ನಿಮಗೆಲ್ಲಾ ಗೊತ್ತಿರೋ ಹಾಗೆ ನಟಿ ಶುಭಾ ಪೂಂಜಾ ಅವರು 2022ರಲ್ಲಿ ತಮ್ಮ ಲಾಂಗ್ ಟೈಮ್ ಬಾಯ್‌ಫ್ರೆಂಡ್ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದರು. ಉಡುಪಿಯಲ್ಲಿ ನಡೆದ ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಲು ಒಂದು ಮುಖ್ಯ ಕಾರಣವಿತ್ತು. ಅದೇನೆಂದ್ರೆ, ನಟಿ ಶುಭಾ ಪೂಂಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಪತಿ ಸುಮಂತ್ ಜೊತೆಗಿನ ಬಹುತೇಕ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೇ ಗಮನಿಸಿದ ನೆಟ್ಟಿಗರು ಇಬ್ಬರ ನಡುವೆ ಏನೋ ಗೊಂದಲ ಶುರುವಾಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದರು.
ಈಗ ಹರಿದಾಡುತ್ತಿರುವ ಡಿವೋರ್ಸ್ ಸುದ್ದಿಯ ಬಗ್ಗೆ ನೇರವಾಗಿ 'ಹೌದು' ಅಥವಾ 'ಇಲ್ಲ' ಎಂದು ಎಲ್ಲೂ ಹೇಳದ ಶುಭಾ ಪೂಂಜಾ, ಪ್ರಸ್ತುತ ಪರಿಸ್ಥಿತಿಯಲ್ಲಿ ತಮಗೆ ಕೊಂಚ ಪ್ರೈವೆಸಿ ಕೊಡಿ ಅಂತ ವಿನಂತಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶುಭಾ ಪೂಂಜಾ ಹೇಳಿದ್ದೇನು?
"ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಇಡೀ ಸಿನಿ ಜರ್ನಿಯಲ್ಲಿ ನೀವು ನನಗೆ ಅಪಾರವಾದ ಬೆಂಬಲ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಇಂದು ನಿಮ್ಮ ಮುಂದೆ ನನ್ನದೊಂದು ಸಣ್ಣ ವಿನಂತಿ ಇದೆ. ದಯವಿಟ್ಟು ನನಗೆ, ಸುಮಂತ್‌ಗೆ ಹಾಗೂ ನಮ್ಮ ಕುಟುಂಬದವರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೊಂಚ ಪ್ರೈವೆಸಿ (ಖಾಸಗಿತನ) ನೀಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ನಮ್ಮ ನಿರ್ಧಾರಕ್ಕೆ ಗೌರವ ನೀಡುವುದು ನಮಗೆ ಅತ್ಯಂತ ಮುಖ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, "ಸರಿಯಾದ ಸಮಯ ಬಂದಾಗ, ನಾನೇ ವೈಯಕ್ತಿಕವಾಗಿ ನಿಮ್ಮೆಲ್ಲರೊಂದಿಗೆ ಏನಾದರೂ ಅಪ್‌ಡೇಟ್ ಇದ್ದರೆ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ದಯೆಗೆ ಮತ್ತೊಮ್ಮೆ ಧನ್ಯವಾದಗಳು" ಅಂತ ಕೃತಜ್ಞತೆ ಸಲ್ಲಿಸಿದ್ದಾರೆ.
ಪರೋಕ್ಷವಾಗಿ ವದಂತಿ ನಿಜ ಎಂದರಾ ಶುಭಾ?
ಸದ್ಯ ಶುಭಾ ಪೂಂಜಾ ಅವರು ಮಾಡಿರುವ ಈ ಪೋಸ್ಟ್ ಈಗ ಗಾಂಧಿನಗರದ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಅವರು ತಮ್ಮ ಡಿವೋರ್ಸ್ ಸುದ್ದಿಯನ್ನು ಎಲ್ಲೂ ನಿರಾಕರಿಸಿಲ್ಲ. ಬದಲಾಗಿ ಇದೊಂದು ಕಠಿಣ ಸಮಯ, ನಮಗೆ ಪ್ರೈವೆಸಿ ಬೇಕು ಅಂತ ಕೇಳಿಕೊಂಡಿರುವುದು ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ ಅಂತ ಅಭಿಮಾನಿಗಳು ಗೆಸ್ ಮಾಡ್ತಾ ಇದ್ದಾರೆ.
ಏನೇ ಆಗಲಿ, ಸ್ವತಃ ನಟಿಯೇ ಮುಂದೆ ಒಂದು ದಿನ ತಾನೇ ಅಫೀಶಿಯಲ್ ಆಗಿ ಎಲ್ಲವನ್ನೂ ಕ್ಲಿಯರ್ ಆಗಿ ಹೇಳ್ತೀನಿ ಅಂತ ಭರವಸೆ ನೀಡಿರೋದ್ರಿಂದ, ಸದ್ಯಕ್ಕೆ ಹರಿದಾಡುತ್ತಿರೋ ಹತ್ತಾರು ಊಹಾಪೋಹಗಳಿಗೆ ಮತ್ತು ಗಾಳಿಸುದ್ದಿಗಳಿಗೆ ಸದ್ಯ ವಿರಾಮ ಬಿದ್ದಂತಾಗಿದೆ. ಅಭಿಮಾನಿಗಳು ಕೂಡ ಶುಭಾ ಅವರ ಈ ಕಠಿಣ ಪರಿಸ್ಥಿತಿಗೆ ಧೈರ್ಯ ತುಂಬುತ್ತಾ ಕಮೆಂಟ್ ಮಾಡ್ತಾ ಇದ್ದಾರೆ.