ಬೆಂಗಳೂರು ಕಿರುತೆರೆಯಲ್ಲಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಜೀ ಕನ್ನಡದ 'ಜೋಡಿ ನಂಬರ್ 1', ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಘಟನೆಗಳು ಹಾಗೂ ಸಂಭಾಷಣೆಗಳನ್ನು ವೇದಿಕೆ ಮೇಲೆ ಹಂಚಿಕೊಂಡಿರುವುದು ಟ್ರೋಲಿಗರಿಗೆ ಆಹಾರವಾಗಿತ್ತು. ಕಲಾವಿದರು ಕೇವಲ ಟಿಆರ್‌ಪಿ (TRP) ಗಾಗಿ ತಮ್ಮ ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುತ್ತಿದ್ದಾರೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಎಲ್ಲಾ ಆರೋಪಗಳಿಗೆ ನಟಿ ಗೀತಾ ಭಾರತಿ ಭಟ್ ಮತ್ತು ಅವರ ಪತಿ ರಾಜಾರಾಮ್ ಭಟ್ ಜಂಟಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.
ವಿವಾದಕ್ಕೆ ಕಾರಣವೇನು?
'ಜೋಡಿ ನಂಬರ್ 1' ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ಬದುಕಿನ ತೊಂದರೆಗಳು, ಭಿನ್ನಾಭಿಪ್ರಾಯಗಳು ಹಾಗೂ ಸಂಬಂಧಗಳಲ್ಲಿನ ಗೊಂದಲಗಳನ್ನು ಮುಕ್ತವಾಗಿ ವೇದಿಕೆಯ ಮೇಲೆ ಹಂಚಿಕೊಂಡಿದ್ದರು. ಇದನ್ನು ಅನೇಕರು ಮೆಚ್ಚಿಕೊಂಡರೆ, ಸಾಮಾಜಿಕ ಜಾಲತಾಣದ ಒಂದು ವರ್ಗವು ಇದನ್ನು ತೀವ್ರವಾಗಿ ಟೀಕಿಸಿತು. "ದಾಂಪತ್ಯದ ಖಾಸಗಿ ವಿಷಯಗಳು ನಾಲ್ಕು ಗೋಡೆಗಳ ಮಧ್ಯೆ ಇರಬೇಕು, ಅವುಗಳನ್ನು ರಿಯಾಲಿಟಿ ಶೋಗಳಿಗಾಗಿ ಬಳಸಿಕೊಳ್ಳುವುದು ಸರಿಯಲ್ಲ" ಎಂಬ ಮಾತುಗಳು ಕೇಳಿಬಂದವು. ಮುಖ್ಯವಾಗಿ, ಕಲಾವಿದರು ಕೇವಲ ಹಣ ಮತ್ತು ಜನಪ್ರಿಯತೆಗಾಗಿ ತಮ್ಮ ಸಂಬಂಧದ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್‌ಗಳು ಟೀಕಿಸಿದ್ದರು.
ಸಾಮಾಜಿಕ ಜಾಲತಾಣದ ಟ್ರೋಲ್‌ಗಳಿಗೆ ಗೀತಾ ಭಟ್ ಸವಾಲು
ಈ ಎಲ್ಲಾ ಟೀಕೆಗಳಿಗೆ ಉತ್ತರಿಸಲು ನಟಿ ಗೀತಾ ಭಾರತಿ ಭಟ್ ಅವರು ತಮ್ಮ ಪತಿ ರಾಜಾರಾಮ್ ಅವರೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿಯೇ ತಾಳ್ಮೆಯಿಂದ ಮಾತನಾಡಿರುವ ಗೀತಾ, "ನಾವು ಪ್ರೀತಿ ಮತ್ತು ಸ್ನೇಹದ ಬಗ್ಗೆ ಮಾತನಾಡಿದಾಗ ಯಾರಿಗೂ ಆಸಕ್ತಿ ಇರಲಿಲ್ಲ. ಆದರೆ, ದಂಪತಿಗಳ ನಡುವಿನ ಸಾಮಾನ್ಯ ಭಿನ್ನಾಭಿಪ್ರಾಯವನ್ನೇ ದೊಡ್ಡ ಜಗಳ ಎಂದು ಬಿಂಬಿಸಿ, ಅದನ್ನು ವೈರಲ್ ಮಾಡುವಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರು ತೋರಿದ ಆಸಕ್ತಿ ನಾಚಿಕೆಗೇಡಿನದು" ಎಂದು ವ್ಯಂಗ್ಯವಾಡಿದ್ದಾರೆ.
ಗೀತಾ ಅವರ ಪ್ರಕಾರ, ವೇದಿಕೆಯಲ್ಲಿ ಅವರು ಚರ್ಚಿಸಿದ್ದು ಯಾವುದೋ ಅತಿರೇಕದ ವಿಷಯಗಳನ್ನಲ್ಲ, ಬದಲಿಗೆ ಪ್ರತಿಯೊಂದು ಸಾಮಾನ್ಯ ಕುಟುಂಬದಲ್ಲಿಯೂ ನಡೆಯುವ ವಿಷಯಗಳನ್ನಷ್ಟೇ. "ನಾವು ಖಾಸಗಿ ವಿಷಯಗಳನ್ನು ಚರ್ಚೆ ಮಾಡುತ್ತಿಲ್ಲ, ಬದಲಿಗೆ ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಸಮಸ್ಯೆಯನ್ನಷ್ಟೇ ಹಂಚಿಕೊಂಡಿದ್ದೇವೆ. ಸಮಸ್ಯೆ ಇರುವುದು ಕಾರ್ಯಕ್ರಮದಲ್ಲಿ ಅಲ್ಲ, ನೆಗೆಟಿವ್ ವಿಷಯಗಳನ್ನೇ ಹುಡುಕಿ ಅದನ್ನು ವೈರಲ್ ಮಾಡುವ ನಿಮ್ಮ ಮನಸ್ಥಿತಿಯಲ್ಲಿ" ಎಂದು ಅವರು ಟೀಕಾಕಾರರಿಗೆ ನೇರ ನುಡಿಗಳನ್ನು ಹೇಳಿದ್ದಾರೆ.
ಪ್ರೇರಣೆಯಾಗಬೇಕಾದ ಸಂಭಾಷಣೆ: ಗೀತಾ ಭಟ್
ಕೇವಲ ವಿವಾದಗಳನ್ನೇ ಹುಡುಕುವವರಿಗೆ ಬಿಸಿ ಮುಟ್ಟಿಸಿರುವ ಗೀತಾ, ತಾವು ವೇದಿಕೆಯಲ್ಲಿ ಆಡಿದ ಮಾತುಗಳಿಂದ ಅನೇಕರಿಗೆ ಸಾಂತ್ವನ ಸಿಕ್ಕಿದೆ ಎಂಬುದನ್ನು ನೆನಪಿಸಿದ್ದಾರೆ. "ನಮಗೆ ಹತ್ತಾರು ಮೆಸೇಜ್‌ಗಳು ಬಂದಿವೆ. 'ನಮ್ಮ ಮನೆಯಲ್ಲೂ ಇದೇ ರೀತಿ ಆಗುತ್ತಿತ್ತು, ನಿಮ್ಮ ಎಪಿಸೋಡ್ ನೋಡಿದ ಮೇಲೆ ನಮಗೂ ನಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು ಎಂದು ಅನಿಸಿತು' ಎಂದು ಅನೇಕರು ಹೇಳಿದ್ದಾರೆ. ಇದು ನಾವು ಪಡೆದ ದೊಡ್ಡ ಜಯ" ಎಂದು ಅವರು ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳ ವಿರುದ್ಧ ಆಕ್ರೋಶ
ಸೋಶಿಯಲ್ ಮೀಡಿಯಾದಲ್ಲಿ ಸುಮ್ಮನೆ ವಿವಾದಗಳನ್ನು ಸೃಷ್ಟಿಸುವ ಇನ್ಫ್ಲುಯೆನ್ಸರ್‌ಗಳನ್ನು ಗೀತಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಈ ಸೋಕಾಲ್ಡ್ ಇನ್ಫ್ಲುಯೆನ್ಸರ್‌ಗಳು, ಈಗಾಗಲೇ ವೈರಲ್ ಆಗಿರುವ ವಿಡಿಯೋಗಳ ಮೇಲೆ ತಮ್ಮದೇ ಆದ ಭಾಷಣ ಮಾಡಿ ಹೊಸ ವಿಡಿಯೋ ಮಾಡುತ್ತಾರೆ. ವಾಹಿನಿಯವರು ವಿಡಿಯೋ ಡಿಲೀಟ್ ಮಾಡಿಸಿದರೆ, ತಕ್ಷಣ ಅದನ್ನೇ ಕಂಟೆಂಟ್ ಮಾಡಿಕೊಂಡು 'ಚಾನೆಲ್‌ನವರು ನನ್ನ ವಿಡಿಯೋ ಡಿಲೀಟ್ ಮಾಡಿದರು' ಎಂದು ಮತ್ತೊಂದು ವಿಡಿಯೋ ಹಾಕಿ ವೀವ್ಸ್ ಪಡೆಯುತ್ತಾರೆ. ಇಂತಹ ಕೃತ್ಯಗಳು ಅಸಹ್ಯಕರ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೀತಾ ಅವರ ಜೊತೆಗಿದ್ದ ರಾಜಾರಾಮ್ ಭಟ್ ಕೂಡ ನೆಟ್ಟಿಗರಿಗೆ ಬುದ್ಧಿವಾದ ಹೇಳಿದ್ದು, "ಬೇರೆಯವರ ಕಣ್ಣೀರು ಮತ್ತು ಕಷ್ಟದ ಬಿಸಿಯಲ್ಲಿ ತಮ್ಮ ಸ್ವಾರ್ಥದ ಬಿಸಿ ಕಾಯಿಸಿಕೊಳ್ಳಬೇಡಿ. ವಿಮರ್ಶೆ ಮಾಡುವುದಕ್ಕೂ ಮುನ್ನ ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಮೊದಲು ಗಮನಿಸಿ. ಸಮಾಜಕ್ಕೆ ಒಳ್ಳೆಯದನ್ನು ಮಾಡುವುದನ್ನು ಕಲಿಯಿರಿ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಗೀತಾ ಭಾರತಿ ಭಟ್ ಅವರು ಸಾರ್ವಜನಿಕರಲ್ಲಿ ವಿನಂತಿಯೊಂದನ್ನು ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಸೃಷ್ಟಿಸುವಾಗ ಅರ್ಥಪೂರ್ಣ ಮತ್ತು ಸೆನ್ಸಿಬಲ್ ವಿಚಾರಗಳಿಗೆ ಒತ್ತು ನೀಡಿ. ನಕಾರಾತ್ಮಕತೆಯನ್ನು ವೈರಲ್ ಮಾಡುವ ಹವ್ಯಾಸವನ್ನು ಬಿಟ್ಟು, ಸಮಾಜಕ್ಕೆ ಪ್ರೇರಣೆಯಾಗುವ ವಿಷಯಗಳನ್ನು ಚರ್ಚಿಸುವಂತೆ ಕರೆ ನೀಡಿದ್ದಾರೆ.
ಈ ವಿಡಿಯೋ ಮೂಲಕ ಗೀತಾ ಮತ್ತು ರಾಜಾರಾಮ್ ಜೋಡಿ, ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದು, ರಿಯಾಲಿಟಿ ಶೋಗಳ ಉದ್ದೇಶ ಮತ್ತು ಸಾರ್ವಜನಿಕರ ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.