ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈಗ 'ಜೈಲರ್ 2' ಸಿನೆಮಾದದ್ದೇ ಹವಾ. ರಜನಿಕಾಂತ್ ನಟನೆಯ 'ಜೈಲರ್' ಮೊದಲ ಭಾಗದಲ್ಲಿ ಕೇವಲ ಹತ್ತು ನಿಮಿಷ ಬಂದು ಇಡೀ ಥಿಯೇಟರ್ ನಲ್ಲಿ ಅಭಿಮಾನಿಗಳನ್ನ ರಂಜಿಸಿದ್ದ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮತ್ತು ಮಲಯಾಳಂನ ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್. ಈಗ ಈ ಇಬ್ಬರು ದಿಗ್ಗಜರು ಸೀಕ್ವೆಲ್ ಅಂದರೆ 'ಜೈಲರ್ 2' ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಆದರೆ, ಈ ಬಾರಿ ಶೂಟಿಂಗ್ ಸೆಟ್‌ನಲ್ಲಿ ನಡೆದ ಒಂದು ಘಟನೆ ಮಾತ್ರ ಇಡೀ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಣ್ಣಾವ್ರ ಹಾಡಿಗೆ ಫಿದಾ ಆದ ಲಾಲ್ ಎಟ್ಟನ್
ಸಾಮಾನ್ಯವಾಗಿ ಶೂಟಿಂಗ್ ಸೆಟ್‌ಗಳಲ್ಲಿ ನಟರು ತಮ್ಮ ಮುಂದಿನ ದೃಶ್ಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ, ಮೋಹನ್ ಲಾಲ್ ಮತ್ತು ಶಿವಣ್ಣ ಭೇಟಿಯಾದಾಗ ಅಲ್ಲಿ ನಡೆದಿದ್ದೇ ಬೇರೆ. ಮೋಹನ್ ಲಾಲ್ ಅವರು ತಾವೇ ಸ್ವತಃ ಹಾಡಿರುವ ಒಂದು ವೀಡಿಯೋವನ್ನು ಶಿವಣ್ಣನಿಗೆ ತೋರಿಸಿದ್ದಾರೆ. ಅದು ಯಾವುದೋ ಮಲಯಾಳಂ ಹಾಡಲ್ಲ, ಬದಲಿಗೆ ನಮ್ಮ ಹೆಮ್ಮೆಯ ವರನಟ ಡಾ. ರಾಜ್‌ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು...' ಎಂಬ ಎವರ್‌ಗ್ರೀನ್ ಹಾಡು.
ಹೌದು, ಮೋಹನ್ ಲಾಲ್ ಅವರು ಈ ಹಾಡನ್ನು ಅತ್ಯಂತ ಪ್ರೀತಿಯಿಂದ ಹಾಡಿದ್ದು, ಅದರ ವೀಡಿಯೋವನ್ನು ಶಿವಣ್ಣನಿಗೆ ತೋರಿಸಿ ಸಂಭ್ರಮಿಸಿದ್ದಾರೆ. ತಮ್ಮ ತಂದೆಯವರ ಹಾಡನ್ನು ಮೋಹನ್ ಲಾಲ್ ಅಂತಹ ದೊಡ್ಡ ನಟ ಇಷ್ಟು ಇಷ್ಟಪಟ್ಟು ಹಾಡುವುದನ್ನು ನೋಡಿ ಶಿವಣ್ಣ ಕೂಡ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರಸಿಂಹ ಮತ್ತು ಮ್ಯಾಥ್ಯೂ ಜುಗಲ್ಬಂದಿ
'ಜೈಲರ್' ಸಿನಿಮಾದಲ್ಲಿ ಶಿವಣ್ಣ 'ನರಸಿಂಹ' ಅನ್ನೋ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಮೋಹನ್ ಲಾಲ್ 'ಮ್ಯಾಥ್ಯೂ' ಅನ್ನೋ ಸ್ಟೈಲಿಶ್ ಡಾನ್ ಪಾತ್ರದಲ್ಲಿ ಮಿಂಚಿದ್ದರು. ಇವರಿಬ್ಬರ ಎಂಟ್ರಿ ಸೀನ್ ನೋಡಿಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈಗ 'ಜೈಲರ್ 2' ಚಿತ್ರದಲ್ಲೂ ಈ ಜೋಡಿ ಮುಂದುವರಿಯುತ್ತಿರುವುದು ಖಚಿತವಾಗಿದೆ. ಶೂಟಿಂಗ್ ನಡುವೆ ಬಿಡುವು ಸಿಕ್ಕಾಗಲೆಲ್ಲಾ ಇಬ್ಬರು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕನ್ನಡದ ಮೇಲಿರುವ ಪ್ರೀತಿ
ಮೋಹನ್ ಲಾಲ್ ಅವರಿಗೆ ಕನ್ನಡ ಭಾಷೆ ಮತ್ತು ಅಣ್ಣಾವ್ರ ಕುಟುಂಬದ ಮೇಲೆ ಮೊದಲಿನಿಂದಲೂ ಅಪಾರ ಗೌರವವಿದೆ. ಈ ಹಿಂದೆಯೂ ಅವರು ಅಣ್ಣಾವ್ರ ಹಾಡುಗಳನ್ನು ಗುನುಗುತ್ತಾ ಕನ್ನಡದ ಮೇಲಿರುವ ಅಭಿಮಾನವನ್ನು ತೋರಿಸಿಕೊಂಡಿದ್ದರು. ಈಗ ನೇರವಾಗಿ ಶಿವಣ್ಣನ ಮುಂದೆಯೇ ಹಾಡು ಹಾಡಿರುವುದು ಕನ್ನಡಿಗರ ಹೃದಯ ಗೆದ್ದಿದೆ. ಪರಭಾಷೆಯ ನಟರು ನಮ್ಮ ಸಂಸ್ಕೃತಿ ಮತ್ತು ಹಾಡುಗಳನ್ನು ಇಷ್ಟು ಗೌರವಿಸುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಅಭಿಮಾನಿಗಳ ನಿರೀಕ್ಷೆ
ಜೈಲರ್ ಸಿನೆಮಾದ ಪಾರ್ಟ್ 1 ನಲ್ಲಿ ಇವರಿಬ್ಬರ ಕಾಂಬಿನೇಷನ್ ನೋಡಲು ಸಿಕ್ಕಿದ್ದು ಕೇವಲ ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ. ಆದರೆ, ಈಗ ಪಾರ್ಟ್ 2 ನಲ್ಲಿ ಇವರಿಬ್ಬರಿಗೂ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಶಿವಣ್ಣ ಮತ್ತು ಮೋಹನ್ ಲಾಲ್ ನಡುವಿನ ಈ ಸ್ನೇಹದ ವೀಡಿಯೋ ಮತ್ತು ಸುದ್ದಿಗಳು ಸದ್ಯ ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್ ಎರಡೂ ಕಡೆ ಸಖತ್ ವೈರಲ್ ಆಗುತ್ತಿವೆ.
ಬರೀ ಸಿನಿಮಾದಿಂದಷ್ಟೇ ಅಲ್ಲದೆ ಇಂತಹ ಸಣ್ಣ ಸಣ್ಣ ಸುಂದರ ಕ್ಷಣಗಳಿಂದಲೂ ಈ ಇಬ್ಬರು ಸೂಪರ್ ಸ್ಟಾರ್‌ಗಳು ಜನರ ಮನಸ್ಸಿನಲ್ಲಿ ನೆಲೆಯೂರುತ್ತಿದ್ದಾರೆ. ಜೈಲರ್ 2 ಮೂಲಕ ಇವರಿಬ್ಬರು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಧೂಳೆಬ್ಬಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.