Mar 16, 2026 Languages : ಕನ್ನಡ | English

ಟೀಸರ್‌ನಲ್ಲಿರುವ ಮೂರು ಪಾತ್ರಗಳ ಹೆಸರು ವೈರಲ್ - 'ಬಾಸ್' ಸಿನಿಮಾ ನಿರ್ದೇಶಕನಿಗೆ ನೋಟಿಸ್ ನೀಡಿದ ವಿಜಯಲಕ್ಷ್ಮಿ ದರ್ಶನ್!!

ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೊಂದು ಹೊಸ ವಿವಾದ ಭುಗಿಲೆದ್ದಿದೆ. ಖ್ಯಾತ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ 'ಬಾಸ್' ಎಂಬ ಸಿನಿಮಾದ ಚಿತ್ರತಂಡಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಈ ಸಿನಿಮಾದ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಮತ್ತು ಪಾತ್ರಗಳು ದರ್ಶನ್ ಅವರ ವೈಯಕ್ತಿಕ ಜೀವನಕ್ಕೆ ಹತ್ತಿರವಾಗಿವೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಬಾಸ್ ಸಿನಿಮಾದ ವಿರುದ್ಧ ಕಾನೂನು ಕ್ರಮ;
ಬಾಸ್ ಸಿನಿಮಾದ ವಿರುದ್ಧ ಕಾನೂನು ಕ್ರಮ;

'ಬಾಸ್' ಸಿನಿಮಾದ ಹೊಸ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದರಲ್ಲಿರುವ ಕಥೆ ನಟ ದರ್ಶನ್ ಅವರ ನಿಜ ಜೀವನಕ್ಕೆ ಹೋಲಿಕೆಯಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಟೀಸರ್‌ನಲ್ಲಿರುವ ಶಿವಸ್ವಾಮಿ, ಶೀಲಾ ಗೌಡ ಮತ್ತು ಲಕ್ಷ್ಮಿ ಎಂಬ ಪಾತ್ರಗಳ ಹೆಸರುಗಳು ದರ್ಶನ್ ಅವರ ಜೀವನದ ವ್ಯಕ್ತಿಗಳನ್ನು ನೆನಪಿಸುತ್ತಿವೆ. ಈ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಯಾವುದೇ ಪ್ರಸಿದ್ಧ ವ್ಯಕ್ತಿಯ ಖಾಸಗಿ ಜೀವನವನ್ನು ಅವರ ಅನುಮತಿ ಇಲ್ಲದೆ ಸಿನಿಮಾ ಮಾಡುವುದು ತಪ್ಪು, ಇದು ಅವರ ಗೌರವಕ್ಕೆ ಹಾನಿ ಮಾಡುತ್ತದೆ ಎಂಬುದು ಅವರ ವಾದ. ಆದ್ದರಿಂದ, ಈಗ ಬಿಡುಗಡೆಯಾಗಿರುವ ಟೀಸರ್ ಅನ್ನು ಎಲ್ಲಾ ಕಡೆಯಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಅವರು ಕಾನೂನು ನೋಟಿಸ್ ಮೂಲಕ ಒತ್ತಾಯಿಸಿದ್ದಾರೆ.

ಗೌರವಕ್ಕೆ ಧಕ್ಕೆ ತರುವಂತಹ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ ಅವರು, ಟೀಸರ್ ಅನ್ನು ಕೂಡಲೇ ವಾಪಸ್ ಪಡೆಯಲು ಆದೇಶಿಸಿದ್ದಾರೆ. ಅನುಮತಿಯಿಲ್ಲದ ಜೀವನ ಚರಿತ್ರೆ ಅಥವಾ ಹೋಲಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಎಲ್ಲಾ ಆನ್‌ಲೈನ್ ವೇದಿಕೆಗಳಿಂದ ಟೀಸರ್ ತೆಗೆಯಲು ಡೆಡ್‌ಲೈನ್ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಚಿತ್ರದ ನಿರ್ದೇಶಕರಾದ ಲವ ಅವರಿಗೂ ಪ್ರತ್ಯೇಕವಾಗಿ ನೋಟಿಸ್ ಕಳುಹಿಸಲಾಗಿದೆ. ಸಮ್ಮತಿ ಇಲ್ಲದೆ ನಿಜ ಜೀವನದ ವ್ಯಕ್ತಿಗಳ ಚಾರಿತ್ರ್ಯವನ್ನ ಹೋಲುವಂತಹ ಯಾವುದೇ ದೃಶ್ಯಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ವಿಜಯಲಕ್ಷ್ಮಿ ಅವರು ಈ ವಿಷಯದ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಸೆನ್ಸಾರ್ ಮಂಡಳಿಗೂ ಪತ್ರ ಬರೆದಿದ್ದಾರೆ. ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಮೊದಲು ಈ ಎಲ್ಲ ವಿಷಯಗಳನ್ನ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ,ಬಾಸ್ ಚಿತ್ರದ ನಿರ್ಮಾಪಕರು ಅಥವಾ ನಿರ್ದೇಶಕರು ಈ ಕಾನೂನು ನೋಟಿಸ್‌ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡವು ಟೀಸರ್ ಅನ್ನು ಡಿಲೀಟ್ ಮಾಡುತ್ತದೆಯೇ ಅಥವಾ ದೃಶ್ಯಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿವಾದದಿಂದಾಗಿ ಸಿನಿಮಾದ ಮೇಲೆ ಜನರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ ಅಂಥ ಹೇಳಬಹುದು. ಸೆಲೆಬ್ರಿಟಿಗಳ ಜೀವನವನ್ನು ಸಿನಿಮಾದಲ್ಲಿ ಬಳಸಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂಬ ಚರ್ಚೆ ಈಗ ಗಾಂಧಿನಗರದಲ್ಲಿ ಜೋರಾಗಿ ನಡೆಯುತ್ತಿದೆ. 

Latest News