May 10, 2026 Languages : ಕನ್ನಡ | English

ದಳಪತಿ ವಿಜಯ್ ತಮ್ಮ ಮೊದಲ ಭಾಷಣದಲ್ಲೇ ಸಿಕ್ಸರ್ ಬಾರಿಸಿದ್ದಾರೆ - ₹10 ಲಕ್ಷ ಕೋಟಿ ಸಾಲದ ಬಗ್ಗೆ ವಿಜಯ್ ಬಿಚ್ಚಿಟ್ಟ ಸತ್ಯಕ್ಕೆ ತಮಿಳುನಾಡು ಶಾಕ್!!

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಳಪತಿ ವಿಜಯ್ ಅವರು ತಮ್ಮ ಮೊದಲ ಭಾಷಣದಲ್ಲೇ ಸಿಕ್ಸರ್ ಬಾರಿಸಿದ್ದಾರೆ. ಕೇವಲ ಭರವಸೆಗಳನ್ನಷ್ಟೇ ನೀಡದೆ, ರಾಜ್ಯದ ಸದ್ಯದ ಕಟು ವಾಸ್ತವ ಮತ್ತು ತಮ್ಮ ಆಡಳಿತದ ದಿಕ್ಕನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ.  

ವಿಜಯ್ ಸರ್ಕಾರದ ಮೊದಲ ಪ್ಲ್ಯಾನ್
ವಿಜಯ್ ಸರ್ಕಾರದ ಮೊದಲ ಪ್ಲ್ಯಾನ್

₹10 ಲಕ್ಷ ಕೋಟಿ ಸಾಲದ ಸುಳಿ - ಶೀಘ್ರದಲ್ಲೇ 'ಶ್ವೇತಪತ್ರ'

ರಾಜ್ಯದ ಮುಖ್ಯಮಂತ್ರಿಯಾಗಿ ಕುಳಿತ ಮೇಲೆ ವಿಜಯ್ ಅವರಿಗೆ ಎದುರಾಗಿರುವ ದೊಡ್ಡ ಸವಾಲು ಅಂದರೆ ಅದು ಆರ್ಥಿಕ ಸಂಕಷ್ಟ. ತಮಿಳುನಾಡಿನ ಮೇಲೆ ಸುಮಾರು ₹10 ಲಕ್ಷ ಕೋಟಿ ಸಾಲ ಇರುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಹಣ ಎಲ್ಲಿಗೆ ಹೋಯಿತು? ರಾಜ್ಯದ ಈಗಿನ ಹಣಕಾಸು ಸ್ಥಿತಿ ಹೇಗಿದೆ? ಎಂಬುದನ್ನು ಜನರಿಗೆ ತಿಳಿಸಲು ಶೀಘ್ರದಲ್ಲೇ 'ಶ್ವೇತಪತ್ರ' ಹೊರಡಿಸುವುದಾಗಿ ವಿಜಯ್ ಘೋಷಿಸಿದ್ದಾರೆ. "ಜನರಿಗೆ ಸತ್ಯ ಗೊತ್ತಿರಲಿ, ಆಮೇಲೆ ನಾನು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ" ಎಂದು ಅವರು ಭರವಸೆ ನೀಡಿದ್ದಾರೆ.

ಗ್ಯಾರಂಟಿ ಈಡೇರಿಸಲು ಸ್ವಲ್ಪ ಟೈಮ್ ಕೊಡಿ

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳ ಬಗ್ಗೆಯೂ ವಿಜಯ್ ಮಾತನಾಡಿದ್ದಾರೆ. "ಕೊಟ್ಟ ಮಾತಿನಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ ಖಜಾನೆಯ ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಭರವಸೆಗಳನ್ನು ಈಡೇರಿಸುತ್ತೇನೆ. ಅಲ್ಲಿಯವರೆಗೆ ನನಗೆ ಸ್ವಲ್ಪ ಕಾಲಾವಕಾಶ ನೀಡಿ" ಎಂದು ಜನರಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

ವಿಜಯ್ ಸರ್ಕಾರದ ಮೂರು ಮುಖ್ಯ ಮಂತ್ರಗಳು:

ಮುಖ್ಯಮಂತ್ರಿಗಳು ತಮ್ಮ ಆಡಳಿತದಲ್ಲಿ ಈ ಕೆಳಗಿನ ಮೂರು ವಿಚಾರಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ:

ಮಾದಕ ವಸ್ತು ಮುಕ್ತ ರಾಜ್ಯ: ಯುವಜನತೆಯನ್ನು ಹಾಳುಮಾಡುತ್ತಿರುವ ಮಾದಕ ದ್ರವ್ಯ ಜಾಲವನ್ನು ಇಂದಿನಿಂದಲೇ ಬೇರು ಸಮೇತ ಕಿತ್ತೆಸೆಯಲು ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ.

ಹೆಣ್ಣುಮಕ್ಕಳ ರಕ್ಷಣೆ: ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಧಕ್ಕೆ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮೂಲಭೂತ ಸೌಕರ್ಯ: ಉತ್ತಮ ಶಿಕ್ಷಣ, ರಸ್ತೆಗಳು ಮತ್ತು ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ನಮ್ಮ ಸರ್ಕಾರದ ಗುರಿ ಎಂದಿದ್ದಾರೆ.

ಸಚಿವರಿಗೆ 'ವಿಜಯ್' ವಾರ್ನಿಂಗ್: "ತಪ್ಪು ಮಾಡಿದ್ರೆ ಜಾಗ ಖಾಲಿ ಮಾಡಿ"

ತಮ್ಮ ಸಂಪುಟದ ಸಚಿವರಿಗೆ ವಿಜಯ್ ಅವರು ನೀಡಿರುವ ಎಚ್ಚರಿಕೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. "ನಾನು ಯಾವುದೇ ತಪ್ಪು ಮಾಡುವುದಿಲ್ಲ, ನನ್ನ ಜೊತೆಗಿರುವವರು ತಪ್ಪು ಮಾಡುವುದನ್ನು ಸಹಿಸುವುದಿಲ್ಲ. ಲಂಚ ಅಥವಾ ಭ್ರಷ್ಟಾಚಾರದ ಆಲೋಚನೆ ನಿಮ್ಮ ಮನಸ್ಸಿನಲ್ಲಿದ್ದರೆ, ಈಗಲೇ ಅದನ್ನು ತೆಗೆದುಹಾಕಿ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ" ಎಂದು ನೇರವಾಗಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಜಯ್ ಅವರ ಮೊದಲ ಭಾಷಣದಿಂದ ಒಂದು ವಿಷಯವಂತೂ ಸ್ಪಷ್ಟವಾಗಿದೆ - ಅವರು ಕೇವಲ 'ರೀಲ್' ಹೀರೋ ಮಾತ್ರವಲ್ಲ, 'ರಿಯಲ್' ಆಗಿ ಕೆಲಸ ಮಾಡಲು ಬಂದಿದ್ದಾರೆ. ಪಾರದರ್ಶಕ ಆಡಳಿತ ನೀಡುವ ಅವರ ಈ ಕಿಚ್ಚು ರಾಜ್ಯಕ್ಕೆ ಯಾವ ರೀತಿ ಬದಲಾವಣೆ ತರಲಿದೆ ಎಂದು ಕಾದು ನೋಡಬೇಕಿದೆ.

Latest News