Mar 30, 2026 Languages : ಕನ್ನಡ | English

ಆರು ತಿಂಗಳ ಮೌನಕ್ಕೆ ಸಿಕ್ಕಿತು ಅದ್ಭುತ ಉತ್ತರ! Gen Z ಯುವಕರನ್ನು ಸೆಳೆಯಲು ಬರ್ತಿದ್ದಾರೆ ಡಾಲಿ!!

ಡಾಲಿ ಧನಂಜಯ್ ಅವರ ಟೇಬಲ್ ಮೇಲೆ ಒಂದು ಚಿತ್ರಕಥೆ ತಿಂಗಳಿನಷ್ಟು ಕಾಲ ಮೌನವಾಗಿ ಬಿದ್ದಿತ್ತು. ಸುಮಾರು ಆರು ತಿಂಗಳು ಕಳೆದರೂ ಅದನ್ನು ಅವರು ತೆರೆದು ನೋಡಲೇ ಇಲ್ಲ. ಆ ಕಥೆಯನ್ನು ಅವರ ಸ್ನೇಹಿತ ಪೂರ್ಣ ಮೈಸೂರು ಬರೆದು, ಸರಳವಾಗಿ ಅವರ ಟೇಬಲ್ ಮೇಲೆ ಇಟ್ಟು ಹೋಗಿದ್ದರು. ಕೆಲಸದ ಬ್ಯುಸಿಯಲ್ಲಿದ್ದ ಡಾಲಿ, ಅದನ್ನು ಗಮನಿಸದೇ ಬಿಟ್ಟಿದ್ದರು.

ಟೇಬಲ್ ಮೇಲೆ ಧೂಳು ಹಿಡಿದಿದ್ದ ಕಥೆಗೆ ಈಗ 'ಡಾಲಿ' ಧನಂಜಯ್ ಜೀವ! | Photo Credit: dhananjaya_ka/?hl=en
ಟೇಬಲ್ ಮೇಲೆ ಧೂಳು ಹಿಡಿದಿದ್ದ ಕಥೆಗೆ ಈಗ 'ಡಾಲಿ' ಧನಂಜಯ್ ಜೀವ! | Photo Credit: dhananjaya_ka/?hl=en

ಒಂದು ದಿನ ಸಡನ್ ಆಗಿ ಮಾತಿನ ಮಧ್ಯೆ ಧನಂಜಯ್, ಪೂರ್ಣ ಅವರನ್ನು “ನಿಮ್ಮ ಸಿನಿಮಾ ಕಥೆ ಏನಾಯ್ತು?” ಎಂದು ಕೇಳಿದ್ದಾರೆ. ಆಗ ಪೂರ್ಣ ಸುಮ್ಮನೆ “ನಿನ್ನ ಟೇಬಲ್ ಮೇಲೆ ಇದೆ, ಆರು ತಿಂಗಳಿನಿಂದ ಅಲ್ಲೇ ಇದೆ” ಎಂದು ಹೇಳಿದಾಗ ಧನಂಜಯ್ ಅವರಿಗೆ ಅಚ್ಚರಿ ಆಯಿತು. ಕೂಡಲೇ ಅವರು ಆ ಚಿತ್ರಕಥೆಯನ್ನು ಕೈಗೆತ್ತಿಕೊಂಡು ಓದಲು ಶುರುಮಾಡಿದರು.

ಕಥೆ ಓದುತ್ತಾ ಹೋದಂತೆ ಅದು ಅವರನ್ನು ಸೆಳೆದಿತು. ಕೆಲವೆಡೆ ನಗಿಸಿತು, ಕೆಲವೆಡೆ ಕುತೂಹಲ ಮೂಡಿಸಿತು. ಅರ್ಧದಲ್ಲೇ ಇದ್ದರೂ ಕಥೆಯಲ್ಲಿದ್ದ ಮನರಂಜನೆ ಮತ್ತು ಫ್ಲೋ ಧನಂಜಯ್ ಅವರಿಗೆ ತುಂಬಾ ಇಷ್ಟವಾಯಿತು. ಓದಿದ ತಕ್ಷಣವೇ ಅವರು ಒಂದು ನಿರ್ಧಾರಕ್ಕೆ ಬಂದರು.

ಪೂರ್ಣನಿಗೆ ಕರೆ ಮಾಡಿ, “ಈ ಕಥೆ ತುಂಬಾ ಚೆನ್ನಾಗಿದೆ. ಇದನ್ನ ಪೂರ್ಣ ಮಾಡು. ನಾನು ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ” ಎಂದು ಹೇಳಿದರು. ಅದಕ್ಕೆ ಪೂರ್ಣ ಕೂಡ ಒಂದು ಹೆಜ್ಜೆ ಮುಂದೆ ಹೋಗಿ, “ನೀನು ಪ್ರೊಡ್ಯೂಸ್ ಮಾಡೋದಷ್ಟೇ ಅಲ್ಲ, ಈ ಚಿತ್ರದಲ್ಲಿ ನಟಿಸಬೇಕು ಕೂಡ” ಎಂದು ಹೇಳಿದಾಗ, ಧನಂಜಯ್ ಅದಕ್ಕೂ ಒಪ್ಪಿಕೊಂಡರು.

ಇದರಿಂದ ಆರಂಭವಾದ ಈ ಹೊಸ ಪ್ರಾಜೆಕ್ಟ್ ಈಗ ಶೂಟಿಂಗ್ ಹಂತಕ್ಕೆ ಬಂದಿದೆ. ಚಿತ್ರದ ಮುಹೂರ್ತವನ್ನು ಜೇನುಕಲ್ ಸಿದ್ದಪ್ಪನ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಕೆಲವು Gen Z ಯುವಕರನ್ನು ಸೇರಿಸಿಕೊಂಡು ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ಯುವ ಜನತೆಗೆ ಹತ್ತಿರವಾಗುವ ಶೈಲಿಯಲ್ಲಿ, ಪಕ್ಕಾ ಮನರಂಜನೆ ನೀಡುವ ಕಥೆ ಇದಾಗಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದ ಟೈಟಲ್ ಇನ್ನೂ ಬಹಿರಂಗವಾಗಿಲ್ಲ. ಆದರೆ ಶೀಘ್ರದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಧನಂಜಯ್ ತಿಳಿಸಿದ್ದಾರೆ. ಹಬ್ಬದ ಸೀಸನ್‌ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯೂ ಇದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತ ಚಿತ್ರವಾಗಿರಲಿದೆ ಎಂಬ ವಿಶ್ವಾಸ ತಂಡದಲ್ಲಿದೆ.

ಈ ಕುರಿತು ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಕಥೆ ಹೇಗೆ ತಮ್ಮ ಕೈ ಸೇರಿತು, ಅದನ್ನು ಓದಿದ ಅನುಭವ, ಸ್ನೇಹಿತ ಪೂರ್ಣ ಮೈಸೂರು ಬಗ್ಗೆ ತಮ್ಮ ಭಾವನೆ ಇವೆಲ್ಲವನ್ನೂ ಬಹಳ ಸರಳವಾಗಿ, ಮನಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ. ಆ ಪೋಸ್ಟ್ ಓದಿದರೆ, ಒಂದು ಚಿಕ್ಕ ಕಥೆ ಓದಿದ ಅನುಭವ ಸಿಗುತ್ತದೆ.

ಆರು ತಿಂಗಳು ಗಮನಿಸದಿದ್ದ ಒಂದು ಚಿತ್ರಕಥೆ, ಈಗ ದೊಡ್ಡ ಪ್ರಾಜೆಕ್ಟ್ ಆಗಿ ರೂಪುಗೊಂಡಿದೆ. ಸ್ನೇಹ, ನಂಬಿಕೆ ಮತ್ತು ಒಳ್ಳೆಯ ಕಥೆ ಈ ಮೂರರ ಜೊತೆಯಲ್ಲೇ ಈ ಸಿನಿಮಾ ಪ್ರಾರಂಭವಾಗಿದ್ದು, ಪ್ರೇಕ್ಷಕರ ಮುಂದೆ ಯಾವ ರೀತಿಯಲ್ಲಿ ಮೂಡಿಬರುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Latest News