ಸಂಗೀತ ಲೋಕದ ಧ್ರುವತಾರೆ ಆಶಾ ಭೋಸ್ಲೆ ಅವರ ನಿಧನಕ್ಕೆ ಇಡೀ ವಿಶ್ವವೇ ಮರುಗುತ್ತಿದೆ. ಅವರ ಧ್ವನಿ ಭಾರತದ ಗಡಿ ದಾಟಿ ವಿದೇಶಿ ಸ್ಟಾರ್‌ಗಳನ್ನೂ ಹೇಗೆ ಆವರಿಸಿಕೊಂಡಿತ್ತು ಅನ್ನೋದಕ್ಕೆ ಈಗ ಜಾನ್ ಸೀನಾ ಮತ್ತು ಬ್ರೆಟ್ ಲೀ ನೀಡಿರುವ ಶ್ರದ್ಧಾಂಜಲಿಯೇ ಸಾಕ್ಷಿ.
ಭಾರತೀಯ ಸಂಗೀತದ ದಂತಕಥೆ ಆಶಾ ಭೋಸ್ಲೆ ಅವರು ಏಪ್ರಿಲ್ 12ರಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅಂದಿನಿಂದ ಇಂದಿನವರೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಸಾಧನೆಯನ್ನ ನೆನೆಯದವರೇ ಇಲ್ಲ. ಕೇವಲ ಬಾಲಿವುಡ್ ಮಾತ್ರವಲ್ಲ, ಅತ್ತ ಅಮೆರಿಕದ WWE ಅಖಾಡದಿಂದ ಹಿಡಿದು ಇತ್ತ ಆಸ್ಟ್ರೇಲಿಯಾದ ಕ್ರಿಕೆಟ್ ಮೈದಾನದವರೆಗೆ ಎಲ್ಲರೂ ಆಶಾ ಭೋಸ್ಲೆ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
WWE ಸೂಪರ್‌ಸ್ಟಾರ್ ಮತ್ತು ಹಾಲಿವುಡ್ ನಟ ಜಾನ್ ಸೀನಾ ಅವರ ಸ್ಟೈಲೇ ಬೇರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಶಾ ಭೋಸ್ಲೆ ಅವರ ಸುಂದರವಾದ ಬ್ಲಾಕ್ ಅಂಡ್ ವೈಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದ್ರೆ, ಸೀನಾ ಅವರು ಯಾವುದೇ ಸಾಲುಗಳನ್ನು ಬರೆಯದೇ ಮೌನವಾಗಿಯೇ ಗೌರವ ಸಲ್ಲಿಸಿದ್ದಾರೆ. ಆಶಾ ಅವರ ಕೀರ್ತಿ ಭಾಷೆ ಮತ್ತು ದೇಶಗಳ ಎಲ್ಲೆಯನ್ನು ಮೀರಿ ಬೆಳೆದಿದೆ ಎಂಬುದಕ್ಕೆ ಜಾನ್ ಸೀನಾ ಅವರ ಈ ಪೋಸ್ಟ್ ಒಂದು ದೊಡ್ಡ ಉದಾಹರಣೆ.
ಬ್ರೆಟ್ ಲೀ ಹಳೇ ನೆನಪುಗಳ ಮೆಲುಕು
ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರಿಗೆ ಆಶಾ ಭೋಸ್ಲೆ ಅಂದ್ರೆ ಅತೀವ ಗೌರವ. 2006ರಲ್ಲಿ ಇವರಿಬ್ಬರೂ ಸೇರಿ ‘You’re the One for Me’ ಎಂಬ ಹಾಡನ್ನು ಹಾಡಿದ್ದರು. ಆ ದಿನದ ಫೋಟೋ ಹಂಚಿಕೊಂಡಿರುವ ಬ್ರೆಟ್ ಲೀ, "ಆಶಾ ಅವರಂತಹ ದಂತಕಥೆಯ ಜೊತೆ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ" ಎಂದು ಭಾವುಕರಾಗಿದ್ದಾರೆ.
"ಅವರ ಪ್ರತಿಭೆಗಿಂತ ಅವರಲ್ಲಿದ್ದ ವಿನಯ ಮತ್ತು ಆ ನಗುಮುಖ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ಅಷ್ಟು ದೊಡ್ಡ ಸಾಧಕಿಯಾಗಿದ್ದರೂ ಅವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು" ಎಂದು ಬ್ರೆಟ್ ಲೀ ಪೋಸ್ಟ್ ಮಾಡಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಏಪ್ರಿಲ್ 13ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನೆರವೇರಿತು. ಸರ್ಕಾರಿ ಗೌರವಗಳೊಂದಿಗೆ ನಡೆದ ಈ ಅಂತಿಮ ಯಾತ್ರೆಯಲ್ಲಿ ರಾಜಕೀಯ ನಾಯಕರು, ಬಾಲಿವುಡ್ ಕಲಾವಿದರು ಮತ್ತು ಕ್ರೀಡಾ ತಾರೆಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಆಶಾ ಭೋಸ್ಲೆ ಅವರ ವಿಶೇಷತೆಗಳು:
- 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
- ಸುಮಾರು 8 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
- ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳ ಗೌರವ ಇವರಿಗಿದೆ.