ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ 'ದೇವಸೇನೆ' ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಅದ್ಭುತ ನಟನೆಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರೋ ಅನುಷ್ಕಾ ಶೆಟ್ಟಿ, ಇಂದು ಪ್ಯಾನ್ ಇಂಡಿಯಾ ಸ್ಟಾರ್. ಆದರೆ, ಇಷ್ಟೊಂದು ಎತ್ತರಕ್ಕೆ ಬೆಳೆದಿರೋ ಈ ಮಂಗಳೂರು ಬೆಡಗಿ ಚಿತ್ರರಂಗಕ್ಕೆ ಕಾಲಿಟ್ಟ ಕಥೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಾ.
ಪೋರ್ಟ್‌ಫೋಲಿಯೋ ಇಲ್ಲ, ಬರೀ ಪಾಸ್‌ಪೋರ್ಟ್ ಫೋಟೋ
ಸಾಮಾನ್ಯವಾಗಿ ಹೀರೋಯಿನ್ ಆಗಬೇಕು ಅಂದುಕೊಳ್ಳುವವರು ಸಾವಿರಾರು ರೂಪಾಯಿ ಖರ್ಚು ಮಾಡಿ ಗ್ಲಾಮರಸ್ ಫೋಟೋಶೂಟ್ ಮಾಡಿಸ್ತಾರೆ. ಆದರೆ ಅನುಷ್ಕಾ ಮಾತ್ರ ಇದಕ್ಕೆ ಉಲ್ಟಾ ಸಿನಿಮಾಗೆ ಬರುವ ಮೊದಲು ಯೋಗ ಟೀಚರ್ ಆಗಿದ್ದ ಅನುಷ್ಕಾ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ "ಫೋಟೋ ಇದೆಯಾ?" ಎಂದು ಕೇಳಿದಾಗ, ಇವರು ಕೊಟ್ಟಿದ್ದು ತಮ್ಮ ಪರ್ಸ್‌ನಲ್ಲಿದ್ದ ಪುಟ್ಟ 'ಪಾಸ್‌ಪೋರ್ಟ್ ಸೈಜ್' ಫೋಟೋವನ್ನಂತೆ. ಅನುಷ್ಕಾ ಅವರ ಈ ಮುಗ್ಧತೆಗೆ ಫಿದಾ ಆದ ಪುರಿ, ಕೂಡಲೇ ಹೈದರಾಬಾದ್‌ಗೆ ಆಡಿಷನ್‌ಗೆ ಕರೆದರು.
ಯೋಗ ಕ್ಲಾಸ್ ಮುಖ್ಯ, ಆಡಿಷನ್ ಆಮೇಲೆ
ಯಾವುದೇ ದೊಡ್ಡ ಡೈರೆಕ್ಟರ್ ಕರೆದರೆ ಹೊಸಬರು ಎಲ್ಲವನ್ನೂ ಬಿಟ್ಟು ಓಡ್ತಾರೆ. ಆದರೆ ಅನುಷ್ಕಾ ಮಾತ್ರ, ನನಗೆ ಈಗ ಯೋಗ ಕ್ಲಾಸ್ ಇದೆ, ಶುಕ್ರವಾರದ ತನಕ ಬರಲ್ಲ ಅಂತ ಖಡಕ್ ಆಗಿ ಹೇಳಿದ್ದರಂತೆ. ನಂತರ ಹೈದರಾಬಾದ್‌ಗೆ ಹೋದಾಗ ಅಲ್ಲಿ ನಡೆದಿದ್ದೇ ಅಸಲಿ ಪವಾಡ.
ನಾಗಾರ್ಜುನ: ಅನುಷ್ಕಾ ಬಾಳಿನ 'ಗಾಡ್‌ಫಾದರ್'
ಅನುಷ್ಕಾ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದು ಟಾಲಿವುಡ್ 'ಕಿಂಗ್' ನಾಗಾರ್ಜುನ ಅವರ ಮುಂದೆ. 'ಮಾಸ್' ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಅನುಷ್ಕಾ ಅವರ ಮೇಕಪ್ ಟೆಸ್ಟ್ ನಡೆದಿತ್ತು. ಪಕ್ಕದಲ್ಲೇ ಇದ್ದ ಮಿಸ್ ಇಂಡಿಯಾ ಸ್ಪರ್ಧಿಯೊಬ್ಬರು ಸಖತ್ ಆಗಿ ಪೋಸ್ ನೀಡುತ್ತಿದ್ದರೆ, ಇತ್ತ ಅನುಷ್ಕಾ ಮಾತ್ರ ಭಯದಿಂದ ಬೆವತು ಹೋಗಿದ್ದರಂತೆ.
ಆಗ ಅನುಷ್ಕಾ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಧೈರ್ಯ ತುಂಬಿದ್ದು ನಾಗಾರ್ಜುನ. ನನ್ನಲ್ಲಿ ಏನೋ ಇದೆ ಎಂದು ನಂಬಿ ಅಂದು ಅವರು ಅವಕಾಶ ನೀಡದಿದ್ದರೆ ಇಂದು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ನಾಗಾರ್ಜುನ ಸರ್ ನನ್ನ ಲೈಫ್‌ನ ಬಿಗ್ ಸಪೋರ್ಟ್. ನನ್ನ ಹೃದಯದಲ್ಲಿ ಅವರಿಗೆ ಯಾವತ್ತೂ ವಿಶೇಷ ಸ್ಥಾನ ಇರುತ್ತದೆ ಎಂದು ಅನುಷ್ಕಾ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಫೋಟೋ ಅಂದ್ರೆ ಇಂದಿಗೂ ಭಯ
ನಂಬಲು ಅಸಾಧ್ಯವಾದರೂ ಇದು ಸತ್ಯ ಇಡೀ ಭಾರತವೇ ಮೆಚ್ಚುವಂತಹ ಸೌಂದರ್ಯವತಿ ಅನುಷ್ಕಾ ಅವರಿಗೆ ಇಂದಿಗೂ ಕ್ಯಾಮೆರಾ ಮುಂದೆ ಸ್ಟಿಲ್ ಪೋಸ್ ನೀಡಲು ಭಯವಾಗುತ್ತದೆಯಂತೆ. ಈ ಸರಳತೆ ಮತ್ತು ಮುಗ್ಧತೆಯೇ ಅವರ ಯಶಸ್ಸಿನ ಹಿಂದಿರೋ ಅಸಲಿ ಗುಟ್ಟು.
ಸೂಪರ್ ಚಿತ್ರದಿಂದ ಶುರುವಾದ ಈ ಯೋಗ ಟೀಚರ್ ಜರ್ನಿ, ಇಂದು 'ದೇವಸೇನೆ'ಯಾಗಿ ಇಡೀ ಇಂಡಿಯಾವನ್ನೇ ಆಳ್ತಿದೆ. ಅನುಷ್ಕಾ ಅವರ ಈ ರೋಚಕ ಕಥೆ ನಿಜಕ್ಕೂ ಸಿನಿಮಾ ರಂಗಕ್ಕೆ ಬರಬಯಸುವ ಎಲ್ಲರಿಗೂ ದೊಡ್ಡ ಇನ್ಸ್‌ಪಿರೇಷನ್ ಅಲ್ವಾ?
ಒಂದು ಪುಟ್ಟ ಪಾಸ್‌ಪೋರ್ಟ್ ಫೋಟೋ ಮತ್ತು ನಾಗಾರ್ಜುನ ಅವರ ನಂಬಿಕೆ - ಇವೆರಡೂ ಸೇರಿ ಕನ್ನಡದ ಹುಡುಗಿಯನ್ನು ಸೌತ್ ಇಂಡಿಯಾದ ಮಹಾರಾಣಿಯನ್ನಾಗಿ ಮಾಡಿವೆ.