Sunday, Nov 22, 2026
|
Advertisement

ಬೆಂಗಳೂರು ಪೊಲೀಸ್ ಇಲಾಖೆಗೆ ಹೊಸ ಸಾರಥಿ; ನಗರದಲ್ಲಿ ಯಾವೆಲ್ಲ ಬದಲಾವಣೆ ತರಲಿದ್ದಾರೆ ಆರ್. ಹಿತೇಂದ್ರ !!

 ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್ ಹಿತೇಂದ್ರ  ನಿನ್ನೆ ಬುಧವಾರ ಅಧಿಕಾರ ಸ್ವೀಕರಿಸಿಕೊಂಡರು. ನೇಮಕಾತಿ ಆದೇಶ ಹೊರಬಂದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೊಸ ಹುದ್ದೆಯ ಕರ್ತವ್ಯ ಆರಂಭಿಸಿದ್ದಾರೆ. ಹಿಂದಿನ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಆರ್. ಹಿತೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು .ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಆರ್. ಹಿತೇಂದ್ರ ಅಧಿಕಾರ ಸ್ವೀಕಾರ ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆ ಮತ್ತು ಮಾದಕ ವಸ್ತು ನಿಯಂತ್ರಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.    

ಬೆಂಗಳೂರು ಪೊಲೀಸ್ ಹೊಸ ವ್ಯವಸ್ಥೆ | Photo Credit: https://x.com/mepratap/status/2123058662545789041/photo/1
ಬೆಂಗಳೂರು ಪೊಲೀಸ್ ಹೊಸ ವ್ಯವಸ್ಥೆ | Photo Credit: https://x.com/mepratap/status/2123058662545789041/photo/1

 ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ಪುನರ್‌ರಚಿಸಿರುವ ಬೆನ್ನಲ್ಲೇ ಈ ನೇಮಕಾತಿ ನಡೆದಿದ್ದು, ಬೆಳೆಯುತ್ತಿರುವ ನಗರದ ಪೊಲೀಸ್ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶ ಹೊಂದಿದೆ.

Advertisement

ವರ್ಗಾವಣೆ ಆದೇಶ ಹೊರಬಂದ ಕೆಲವೇ ಗಂಟೆಗಳಲ್ಲಿ ಆರ್. ಹಿತೇಂದ್ರ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. 

ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಐದು ಕಮಿಷನರೇಟ್‌ಗಳ ರಚನೆ

ಬೆಂಗಳೂರು ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಆಡಳಿತವನ್ನು ವಿಕೇಂದ್ರೀಕರಿಸಿ ಜನರಿಗೆ ಉತ್ತಮ ಸೇವೆ ಒದಗಿಸಲು ನಗರವನ್ನು ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಲಾಗಿದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಿಭಾಗಗಳಿಗೆ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಿಸಲಾಗಿದ್ದು, ಇವರ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಯನ್ನು ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅವರು ವಹಿಸಲಿದ್ದಾರೆ.

ಈ ಹೊಸ ವ್ಯವಸ್ಥೆಯಿಂದ ಆಯಾ ಪ್ರದೇಶದ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ತ್ವರಿತವಾಗಿ ಸ್ಪಂದಿಸಲು, ಪೊಲೀಸ್ ಆಡಳಿತದ ಹೊಣೆಗಾರಿಕೆ ಹೆಚ್ಚಿಸಲು ಮತ್ತು ಅಪರಾಧ ನಿಯಂತ್ರಣ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆಯಿದೆ. 

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿಗೆ ಪ್ರತ್ಯೇಕ ಆಯುಕ್ತರ ನೇಮಕವಾಗಿರುವುದರಿಂದ ಪೊಲೀಸ್ ವ್ಯವಸ್ಥೆಯ ನಿರ್ವಹಣೆಯಲ್ಲಿ ಹೊಸ ಬದಲಾವಣೆ ಕಾಣಲಿದೆ. ನಗರ ವಿಸ್ತರಣೆ, ಜನಸಂಖ್ಯೆ ಹೆಚ್ಚಳ ಮತ್ತು ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಪುನರ್‌ರಚನೆ ಮಾಡಲಾಗಿದೆ.

Advertisement


ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ಗಮನ

ಬೆಂಗಳೂರು ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ನೂತನ ಪೊಲೀಸ್ ಮುಖ್ಯಸ್ಥರ ಮುಂದಿರುವ ದೊಡ್ಡ ಸವಾಲಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಮತ್ತು ಕಚೇರಿ ಪ್ರದೇಶಗಳಲ್ಲಿ ವಾಹನ ಸಂಚಾರ ನಿಧಾನಗೊಳ್ಳುತ್ತಿದೆ.

ಸಂಚಾರ ವಿಭಾಗಕ್ಕೆ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಿಸಿರುವುದರಿಂದ ಟ್ರಾಫಿಕ್ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಲಿದೆ. ಈ ಹಿಂದೆ ಸಂಚಾರ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವೂ ಆರ್. ಹಿತೇಂದ್ರ ಅವರಿಗಿದೆ. ಸಂಚಾರ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದ್ದಾರೆ. 

ಅಪರಾಧ ನಿಯಂತ್ರಣ ಮತ್ತು ರೌಡಿ ಚಟುವಟಿಕೆಗಳಿಗೆ ಕಡಿವಾಣ

ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆ ಮತ್ತೊಂದು ಪ್ರಮುಖ ಆದ್ಯತೆಯಾಗಿದೆ. ಹೊಸ ಪೊಲೀಸ್ ವ್ಯವಸ್ಥೆಯಲ್ಲಿ ರೌಡಿ ನಿಗ್ರಹ ದಳವನ್ನು ಪ್ರತ್ಯೇಕವಾಗಿ ಬಲಪಡಿಸುವ ಕ್ರಮ ಕೈಗೊಳ್ಳಲಾಗಿದೆ. ಅಪರಾಧ ಚಟುವಟಿಕೆಗಳ ಮೇಲೆ ನಿಗಾ, ಪೊಲೀಸ್ ಅಧಿಕಾರಿಗಳ ಹೊಣೆಗಾರಿಕೆ ಹಾಗೂ ವಿವಿಧ ವಿಭಾಗಗಳ ನಡುವೆ ಸಮನ್ವಯ ಹೆಚ್ಚಿಸಲು ಹೊಸ ರಚನೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ಸೇರಿದಂತೆ ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು ಪೊಲೀಸರ ನಿರಂತರ ಜವಾಬ್ದಾರಿಯಾಗಿದ್ದು, ಈ ಕ್ಷೇತ್ರಗಳಲ್ಲಿ ಹೊಸ ಪೊಲೀಸ್ ಆಡಳಿತದ ಕಾರ್ಯವೈಖರಿ ಹೇಗಿರಲಿದೆ ಎಂಬುದರ ಮೇಲೆ ಸಾರ್ವಜನಿಕರ ಗಮನವಿದೆ. 

ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸುವ ಪ್ರಯತ್ನ

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆಯ ಸಮಸ್ಯೆ ಚರ್ಚೆಯಲ್ಲಿದೆ. ಪೊಲೀಸ್ ಠಾಣೆಗಳ ಮಟ್ಟದಲ್ಲಿ ಅಗತ್ಯವಿರುವ ಸಿಬ್ಬಂದಿ, ಕೆಲಸದ ಒತ್ತಡ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಪರಿಶೀಲಿಸಿ, ಎಲ್ಲಿ ಎಷ್ಟು ಸಿಬ್ಬಂದಿ ಅಗತ್ಯವಿದೆ ಎಂಬುದನ್ನು ಅಧ್ಯಯನ ಮಾಡುವುದಾಗಿ ಹಿತೇಂದ್ರ ತಿಳಿಸಿದ್ದಾರೆ.

ಒಮ್ಮೆಲೆ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡುವ ಬದಲು, ಠಾಣೆವಾರು ಅಗತ್ಯವನ್ನು ಗುರುತಿಸಿ ಹಂತ ಹಂತವಾಗಿ ಸಂಪನ್ಮೂಲಗಳನ್ನು ಹೆಚ್ಚಿಸುವ ಬಗ್ಗೆ ಸರ್ಕಾರದ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವ ಉದ್ದೇಶವಿದೆ ಎಂದು ವರದಿಯಾಗಿದೆ. ಇದರಿಂದ ಪೊಲೀಸರ ಮೇಲಿನ ಕೆಲಸದ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಬಹುದು. 

ಐದು ಕಮಿಷನರೇಟ್‌ಗಳಿಗೆ ನೇಮಕಗೊಂಡ ಅಧಿಕಾರಿಗಳು ಯಾರು?

  • ಪೊಲೀಸ್ ವಿಭಾಗ  -ಆಯುಕ್ತರು
  • ಕೇಂದ್ರ ಬೆಂಗಳೂರು  -ಲಾಭೂ ರಾಮ್
  • ಪೂರ್ವ ಬೆಂಗಳೂರು-ಡಾ. ಪಿ.ಎಸ್. ಹರ್ಷ
  • ಪಶ್ಚಿಮ ಬೆಂಗಳೂರು-ವಿಕಾಶ್ ಕುಮಾರ್ ವಿಕಾಶ್
  • ಉತ್ತರ ಬೆಂಗಳೂರು -ಡಾ. ಎಂ.ಬಿ. ಬೋರಲಿಂಗಯ್ಯ
  • ದಕ್ಷಿಣ ಬೆಂಗಳೂರು -ಸಿ. ವಂಶಿ ಕೃಷ್ಣ

ಇದಲ್ಲದೆ, ಬೆಂಗಳೂರು ನಗರ ಸಂಚಾರ ವಿಭಾಗಕ್ಕೆ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ. 

ಆರ್. ಹಿತೇಂದ್ರ ಅವರ ಮುಂದಿರುವ ಪ್ರಮುಖ ಸವಾಲುಗಳು

  • ನಗರದ ಸಂಚಾರ ದಟ್ಟಣೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು.
  • ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧ ನಿಯಂತ್ರಣ.
  • ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದು.
  •  ಪೊಲೀಸ್ ಸಿಬ್ಬಂದಿ ಕೊರತೆ ಮತ್ತು ಠಾಣೆಗಳ ಮೂಲಸೌಕರ್ಯ ಸಮಸ್ಯೆ ಪರಿಶೀಲನೆ.
  • ಐದು ಕಮಿಷನರೇಟ್‌ಗಳ ನಡುವೆ ಸಮನ್ವಯ ಸಾಧಿಸುವುದು.
  • ಸಾರ್ವಜನಿಕರಿಗೆ ತ್ವರಿತ ಪೊಲೀಸ್ ಸೇವೆ ಮತ್ತು ಸುರಕ್ಷತೆ ಒದಗಿಸುವುದು.

ಬೆಂಗಳೂರು ಪೊಲೀಸ್ ಇಲಾಖೆಯ ಹೊಸ ರಚನೆ ಮತ್ತು ಆರ್. ಹಿತೇಂದ್ರ ಅವರ ನೇಮಕ ನಗರದ ಪೊಲೀಸ್ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿದೆ. ಐದು ಕಮಿಷನರೇಟ್ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ ಎಷ್ಟು ಪರಿಣಾಮಕಾರಿ ಸೇವೆ ಸಿಗಲಿದೆ ಮತ್ತು ನಗರದ ಪ್ರಮುಖ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ದೊರೆಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಿದೆ.

Comments