ಸರ್ಕಾರದಿಂದ ಸಿಗುವ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಮೊಮ್ಮಗನೇ ತನ್ನ ಅಜ್ಜಿಯನ್ನು ಕೊ*ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. 78 ವರ್ಷದ ಅಜ್ಜಿ ಹಮ್ಮವ್ವಾ ಸನದಿಯನ್ನು ಕೊ*ಲೆ ಮಾಡಿದ ಬಳಿಕ, ಯಾರಿಗೂ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಮೊಮ್ಮಗ ಆಕೆಯ ಮೃ*ತದೇಹವನ್ನು ಗೋಣಿಚೀಲದಲ್ಲಿ ತುಂಬಿದ್ದಾನೆ. ಅಷ್ಟೇ ಅಲ್ಲ, ಗೋಣಿಚೀಲಕ್ಕೆ ಕಲ್ಲು ಕಟ್ಟಿ ಹಿಡಕಲ್ ಡ್ಯಾಂನ ಹಿನ್ನೀರಿನಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.
ಈ ಘಟನೆ ಐದು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ನವೆಂಬರ್ 15ರಂದು ವೃದ್ಧೆಯ ಮೃ*ತದೇಹ ಪತ್ತೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಯಮಕನಮರಡಿ ಪೊಲೀಸರು ಕೊ*ಲೆಯ ಹಿಂದಿನ ಸತ್ಯವನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಅಜ್ಜಿಯ ಮೊಮ್ಮಗ ಭೀಮಪ್ಪ ಸನದಿ ಮತ್ತು ಆತನ ತಂದೆ ರಾಮಪ್ಪನನ್ನು ಬಂಧಿಸಿದ್ದಾರೆ. ಹಣದ ಆಸೆಗಾಗಿ ಸ್ವಂತ ಅಜ್ಜಿಯನ್ನೇ ಕೊ*ಲೆ ಮಾಡಿದ ಆರೋಪ ಕೇಳಿಬಂದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಪಾಶ್ಚಾಪುರ ಸಂತೆಗೆ ಹೋಗಿದ್ದ ವೃದ್ಧೆ ನಾಪತ್ತೆ!
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ 78 ವರ್ಷದ ಹಮ್ಮವ್ವಾ ಸನದಿ ಕೊಲೆಯಾದ ದುರ್ದೈವಿ ವೃದ್ಧೆ. ನವೆಂಬರ್ 10ರಂದು ಅವರು ಅರಳಿಕಟ್ಟಿ ಗ್ರಾಮದಿಂದ ಪಾಶ್ಚಾಪುರ ಸಂತೆಗೆ ಹೋಗಿದ್ದರು. ಆದರೆ ಅಂದು ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು.
ವೃದ್ಧೆ ನಾಪತ್ತೆಯಾಗಿರುವ ವಿಚಾರ ಕುಟುಂಬದವರಲ್ಲಿ ಆತಂಕ ಮೂಡಿಸಿತ್ತು. ಇದೇ ಸಂದರ್ಭದಲ್ಲಿ ಮೊಮ್ಮಗ ಭೀಮಪ್ಪ ಕೂಡ ಅಜ್ಜಿಯನ್ನು ಹುಡುಕುತ್ತಿರುವಂತೆ ವರ್ತಿಸಿದ್ದ ಎನ್ನಲಾಗಿದೆ. ಆದರೆ ಆತನ ನಡವಳಿಕೆಯ ಹಿಂದೆಯೇ ಭೀಕರ ಅಪರಾಧವೊಂದು ಅಡಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂ*ದ ಮೊಮ್ಮಗ!
ಪೊಲೀಸರ ತನಿಖೆಯ ಪ್ರಕಾರ, ಅಜ್ಜಿಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಮೊಮ್ಮಗ ಭೀಮಪ್ಪನಿಗೆ ಆಸಕ್ತಿ ಇತ್ತು ಎನ್ನಲಾಗಿದೆ. ಇದೇ ಹಣದ ವಿಚಾರ ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಜ್ಜಿಯನ್ನು ಪಾಶ್ಚಾಪುರಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಭೀಮಪ್ಪ ತನ್ನೊಂದಿಗೆ ಕರೆದೊಯ್ದಿದ್ದಾನೆ. ಬಳಿಕ ಗವಿ ಸಿದ್ದೇಶ್ವರ ಗುಡ್ಡದ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವೃದ್ಧೆ ಮೃ*ತಪಟ್ಟ ಬಳಿಕ ಶವವನ್ನು ವಿಲೇವಾರಿ ಮಾಡುವ ಮೂಲಕ ತನ್ನ ಕೃತ್ಯವನ್ನು ಯಾರಿಗೂ ತಿಳಿಯದಂತೆ ಮುಚ್ಚಿಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಗೋಣಿಚೀಲದಲ್ಲಿ ಶವ ತುಂಬಿ ಡ್ಯಾಂಗೆ ಎಸೆದಿದ್ದ ಆರೋಪಿ!
ಕೊ*ಲೆ ಮಾಡಿದ ಬಳಿಕ ಆರೋಪಿ ಭೀಮಪ್ಪ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅಜ್ಜಿಯ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ, ಶವ ನೀರಿನಲ್ಲಿ ತೇಲದಂತೆ ಅದಕ್ಕೆ ಕಲ್ಲು ಕಟ್ಟಿ ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ಎಸೆದಿದ್ದಾನೆ. ಈ ಮೂಲಕ ಕೊಲೆಯ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 15ರಂದು ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಗೋಣಿಚೀಲದಲ್ಲಿ ಕಲ್ಲು ಕಟ್ಟಿ ಶವವನ್ನು ನೀರಿಗೆ ಎಸೆದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ನಂತರ ಪೊಲೀಸರು ತನಿಖೆ ಆರಂಭಿಸಿ ಮೃತದೇಹದ ಗುರುತು ಹಾಗೂ ಕೊಲೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದರು.
ತಂದೆಗೂ ಗೊತ್ತಿತ್ತು ಮಗನ ಕೃ*ತ್ಯ? ಇಬ್ಬರೂ ಅರೆಸ್ಟ್!
ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೊಮ್ಮಗ ಭೀಮಪ್ಪನ ಕೃತ್ಯದ ಬಗ್ಗೆ ಆತನ ತಂದೆ ರಾಮಪ್ಪನಿಗೂ ಮಾಹಿತಿ ಇತ್ತು ಎನ್ನಲಾಗಿದ್ದು, ವಿಷಯ ತಿಳಿದಿದ್ದರೂ ಅವರು ಸುಮ್ಮನಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ರಾಮಪ್ಪನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಬಂಧಿಸಿದ್ದಾರೆ.
ಯಮಕನಮರಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ಕೊಲೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಅಜ್ಜಿಯ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಮ್ಮಗ ಭೀಮಪ್ಪ ಸನದಿ ಮತ್ತು ಆತನ ತಂದೆ ರಾಮಪ್ಪ ಸನದಿಯನ್ನು ಬಂಧಿಸಲಾಗಿದೆ.
ಒಟ್ಟಿನಲ್ಲಿ, ಸರ್ಕಾರದ ಕಲ್ಯಾಣ ಯೋಜನೆಯ ಹಣದ ಆಸೆಗಾಗಿ ಕುಟುಂಬದ ಹಿರಿಯ ಜೀವವನ್ನೇ ಕೊ*ಲೆ ಮಾಡಿರುವ ಆರೋಪ ಸಮಾಜವನ್ನು ಬೆಚ್ಚಿಬೀಳಿಸಿದೆ. ವೃದ್ಧೆಯನ್ನು ಕೊ*ಲೆ ಮಾಡಿ ಶವವನ್ನು ಡ್ಯಾಂಗೆ ಎಸೆದಿದ್ದಲ್ಲದೆ, ಬಳಿಕ ಆಕೆಯ ಹುಡುಕಾಟದಲ್ಲಿ ಭಾಗಿಯಾದಂತೆ ನಟಿಸಿದ್ದ ಮೊಮ್ಮಗನ ಕೃತ್ಯಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
Comments